ಫ್ಯಾಕ್ಟ್‌ಚೆಕ್: ನದಿ ನೀರು ಬಳಸಿದ ದಲಿತ ಮಹಿಳೆ ಮೇಲೆ ಹಲ್ಲೆ ಎಂಬ ವೈರಲ್ ವಿಡಿಯೋದ ನಿಜ ಸಂಗತಿ ಏನು ಗೊತ್ತೆ? ಈ ಸ್ಟೋರಿ ಓದಿ

ಯುವಕರ ಗುಂಪೊಂದು ಮಹಿಳೆಯನ್ನು ಅಮಾನುಷವಾಗಿ ಥಳಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಥಳಿತಕೊಳಗಾದ ಮಹಿಳೆಯು ಅಸಹಾಯಕಳಾಗಿ ಅಲ್ಲಿ ನೆರೆದಿದ್ದ ಜನರನ್ನು ತನಗೆ ಸಹಾಯ ಮಡುವಂತೆ ಬೇಡುತ್ತಿದ್ದಾಳೆ ಆದರೆ ಯಾರು ಕೂಡ ಆಕೆಯ ಸಹಾಯಕ್ಕೆ ಬರುವುದಿಲ್ಲ ಈಗ ಈ ವಿಡಿಯೋ ಹಲವು ವಾಟ್ಸಾಪ್ ಗ್ರೂಪ್ ಮತ್ತು ಪೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ಹಂಚಿಕೊಂಡಿರುವವರು, “ಹಿಂದೂ ಉಗ್ರಗಾಮಿಗಳ ಗುಂಪು ಮತ್ತು ಹಿಂದುತ್ವ ಉಗ್ರಗಾಮಿ ಸಂಘಟನೆಯ ಸದಸ್ಯರು ದಲಿತ ಬಾಲಕಿಯನ್ನು ಕ್ರೂರವಾಗಿ ಮತ್ತು ನಿರ್ದಯವಾಗಿ ಥಳಿಸಿದ್ದಾರೆ. ಉಗ್ರಗಾಮಿ ಹಿಂದೂ ಸಂಘಟನೆ ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ವಿಧಾನಗಳನ್ನು ಅನುಸರಿಸುತ್ತಿದ್ದು, ವಿಶೇಷವಾಗಿ ಮುಸ್ಲಿಮರು ಮತ್ತು ದಲಿತರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವ ವಿಶ್ವದ ಏಕೈಕ ದೇಶ ಭಾರತವಾಗಿದೆ” ಎಂದು ವೀಡಿಯೊದ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಈ ವೀಡಿಯೊ ಟ್ವಿಟರ್‌ನಲ್ಲಿ  ಸುಮಾರು 79.3 ಸಾವಿರ ವೀಕ್ಷಣೆ ಪಡೆದಿದೆ.

ಅದೇ ವೀಡಿಯೊವನ್ನು @jatt0935 ಟ್ವಿಟ್ಟರ್ ಖಾತೆಯಿಂದ ಹಂಚಿಕೊಂಡಿದ್ದು, “ಉತ್ತರ ಪ್ರದೇಶದಲ್ಲಿ ನದಿಯಲ್ಲಿ ಸ್ನಾನ ಮಾಡಿದ್ದಕ್ಕಾಗಿ ದಲಿತ ಮಹಿಳೆಯನ್ನು ಥಳಿಸಲಾಗಿದೆ” ಎಂಬ ಮತ್ತೊಂದು ಹೇಳಿಕೆಯೊಂದಿಗೆ ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ” ನದಿಯಲ್ಲಿ ಸ್ನಾನ ಮಾಡಿ ನೀರನ್ನು ಕಲುಷಿತಗೊಳಿಸಿದ್ದಕ್ಕಾಗಿ ಈ ದಲಿತ ಬಾಲಕಿಯನ್ನು ನಿರ್ದಯವಾಗಿ ಥಳಿಸಲಾಗುತ್ತಿದೆ. 75 ವರ್ಷಗಳ ಸ್ವತಂತ್ರ ಭಾರತ, ಅಲ್ಲಿ ಮಹಿಳೆಯರಿಗಿಂತ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ” ಎಂದು ಟ್ವೀಟ್ ಮಾಡಲಾಗಿದೆ.

ಹಾಗಿದ್ದರೆ ಈ ವೈರಲ್ ವಿಡಿಯೊದೊಂದಿಗೆ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಜೂನ್ 2021ರ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರನ್ನು ಅವರ ಸಂಬಂಧಿಕರು ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಥಳಿಸಿದ  ಘಟನೆಯ ವಿಡಿಯೊ ಇದೀಗ ಬೇರೆ ಆಯಾಮದಲ್ಲಿ ವೈರಲ್ ಆಗಿದೆ ಎಂದು BOOM ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಎರಡು ವರ್ಷಗಳ ಹಿಂದೆ ಯುವಕರ ಗುಂಪೊಂದು ಯುವತಿಯೊಬ್ಬಳನ್ನು ಥಳಿಸಿದ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿತ್ತು. ಆ ಘಟನೆಯ ವೀಡಿಯೊವನ್ನು ಇದೀಗ ‘ಹಿಂದುತ್ವವಾದಿ ಉಗ್ರರು ದಲಿತ ಹುಡುಗಿಯನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ’ ಎಂಬ ಸುಳ್ಳು ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ ಬೂಮ್ ವೆಬ್ಸೈಟ್, ”ಇದು 2021 ರ ಜೂನ್‌ನಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು   ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಸಂಬಂಧಿಕರೇ ಅಮಾನುಷವಾಗಿ ಥಳಿಸಿದ ಘಟನೆ ವೈರಲ್ ವೀಡಿಯೊದಲ್ಲಿದೆ” ಎಂದು ಹೇಳಿದೆ.

ಸೋದರ ಸಂಬಂಧಿಗಳಾದ ಇಬ್ಬರು ಬುಡಕಟ್ಟು ಮಹಿಳೆಯರನ್ನು ಅವರ ಕುಟುಂಬದ ಸದಸ್ಯರು ಸಾರ್ವಜನಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಮಹಿಳೆಯರಿಬ್ಬರು ತಮ್ಮ ತಾಯಿಯ ಸೋದರಸಂಬಂಧಿಗಳೊಂದಿಗೆ ಕುಟುಂಬವನ್ನು ಕೆರಳಿಸುವಂತೆ ಸ್ಪಷ್ಟವಾಗಿ ಮಾತನಾಡುತ್ತಿದ್ದರು ಎಂದು ಜುಲೈ 4, 2021 ರಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಘಟನೆಯು ಪಿಪಲ್ವಾ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ತಾಂಡಾದಲ್ಲಿ ನಡೆದಿರುವ ಈ ಘಟನೆಯನ್ನು ಅಲ್ಲಿ ಅನೇಕರು ಕಣ್ಣಾರೆ ನೋಡಿದ್ದಾರೆ ಮತ್ತೆ ಕೆಲವರು ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ.

 

ಈ ಘಟನೆ ಬಗ್ಗೆ  ಜುಲೈ 5, 2021 ರಂದು ಟೈಮ್ಸ್ ಆಫ್ ಇಂಡಿಯಾ ಕೂಡ ವರದಿ ಮಾಡಿದ್ದು, ”ಆರಂಭದಲ್ಲಿ ಕುಟುಂಬಸ್ಥರ ವಿರುದ್ಧ ದೂರು ನೀಡಲು ಬಾಲಕಿಯರು ಹಿಂದೇಟು ಹಾಕಿದ್ದರು ಆದರೆ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ನಂತರ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ತಾಂಡಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ವಿಜಯ್ ವಾಸ್ಕಲೆ ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಜೂನ್ 2021ರ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಇಬ್ಬರು  ಬುಡಕಟ್ಟು ಮಹಿಳೆಯರು ಮೊಬೈಲ್‌ನಲ್ಲಿ ಮಾತನಾಡಿದರು ಎಂಬ ಕಾರಣಕ್ಕೆ ಸೋದರ ಸಂಬಂಧಿಗಳು ಅಮಾನವೀಯವಾಗಿ ಥಳಿಸಿ ಸಾರ್ವಜನಿಕವಾಗಿ ಚಿತ್ರಹಿಂಸೆ ನೀಡಿದ ಘಟನೆಯನ್ನು, ಉತ್ತರ ಪ್ರದೇಶದಲ್ಲಿ ದಲಿತ ಯುವತಿ ನದಿಯ ನೀರನ್ನು ಬಳಸಿದ್ದಾರೆ ಎಂಬ ಕಾರಣಕ್ಕೆ ಸವರ್ಣೀಯರು ದಲಿತರಮೇಲೆ ಅಟ್ಟಹಾಸ ಮೆರೆದಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಯೋದ್ಯಯಲ್ಲಿ ಮಂಗವೊಂದು ಶ್ರೀರಾಮನ ದರ್ಶನಕ್ಕೆ ಪ್ರತಿದಿನ ಬರುತ್ತದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights