ಫ್ಯಾಕ್ಟ್‌ಚೆಕ್: ವಂಚನೆ ಆರೋಪದ ಹಿನ್ನಲೆಯಲ್ಲಿ ಅದಾನಿ ಗ್ರೂಪ್ ವಿರುದ್ದ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆಯೇ?

ಹಿಂಡನ್‌ಬರ್ಗ್‌ ವರದಿಯ ನಂತರ ಅದಾನಿ ಗ್ರೂಪ್‌ನ ಷೇರುಗಳ ಬಹುತೇಕ ಕುಸಿತಗೊಂಡಿವೆ. ಜಗತ್ತಿನ ಮೊದಲ ಮೂವರು ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್‌ ಅದಾನಿ ವ್ಯಾಪಕ ಕುಸಿತ ಕಂಡಿದ್ದಾರೆ. ಅವರೀಗ ಮುಖೇಶ್‌ ಅಂಬಾನಿಗಿಂತಲೂ ಶ್ರೀಮಂತರ ಪಟ್ಟಿಯಲ್ಲಿ ಹಿಂದಿದ್ದಾರೆ. ಗೌತಮ್‌ ಅದಾನಿ ಒಡೆತನದ ಕಂಪನಿಗಳು ವಂಚನೆಯಲ್ಲಿ ತೊಡಗಿವೆ ಎಂದು ಹಿಂಡನ್‌ಬರ್ಗ್‌ ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಗೌತಮ್ ಅದಾನಿ ವಿರುದ್ಧ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ ನಡೆದಿದೆ ಎಂಬ ಹೇಳಿಕೆಯೊಂದಿಗೆ “Stop Adani” ಎಂಬ ಫಲಕಗಳನ್ನು ಹಿಡಿದು ಬೀಚ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜನವರಿ 24 ರಂದು ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಯ ನಂತರ ಫೋಟೋ ವೈರಲ್ ಆಗುತ್ತಿದೆ, ಅದಾನಿ ಗ್ರೂಪ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಷೇರು ಮಾರುಕಟ್ಟೆ ವಂಚನೆಯ ಆರೋಪಗಳನ್ನು ಎದುರಿಸುತ್ತಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳ ಪ್ರಕಾರ ವಂಚನೆ ಆರೋಪ ಎದುರಿಸುತ್ತಿರುವ ಗೌತಮ್ ಅದಾನಿ ವಿರುದ್ದ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆ ನಡೆದಿದೆಯೇ ಎಂದು ಪರಿಶೀಲಿಸೋಣ.

ಫ್ತಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಗೌತಮ್ ಅದಾನಿ ವಿರುದ್ದದ ಪ್ರತಿಭಟನೆ ಇತ್ತೀಚಿನದಲ್ಲ ಎಂದು ತಿಳಿದು ಬಂದಿದೆ.  2017ರಲ್ಲಿ ಗೌತಮ್ ಅದಾನಿ ವಿರುದ್ದ ಆಸ್ಟ್ರೇಲಿಯಾದಲ್ಲಿ ನಡೆದ ಪ್ರತಿಭಟನೆಯನ್ನು, ಈಗಿನ ವಂಚನೆ ಆರೋಪಕ್ಕೆ ಲಿಂಕ್‌ ಮಾಡಿ ಹಂಚಿಕೊಳ್ಳಲಾಗಿದೆ. 

ಆಸ್ಟ್ರೇಲಿಯಾದ ಪ್ರತಿಭಟನೆ 2017 ರದ್ದು:

2017ರಲ್ಲಿ ಆಸ್ಟ್ರೇಲಿಯಾದಲ್ಲಿ ಅತೀ ದೊಡ್ಡ ಕಾರ್ಮೈಕಲ್ ಕಲ್ಲಿದ್ದಲು ಗಣಿ ಆರಂಭಿಸಲು ಹೊರಟ ಭಾರತದ ಉದ್ಯಮಿ ಗೌತಮ್ ಅದಾನಿಗೆ ಭಾರೀ ಹಿನ್ನಡೆಯಾಗಿದೆ. ಗಣಿಗಾರಿಕೆ ಆರಂಭಿಸುವುದರಿಂದ ಪರಿಸರದ ಮೇಲೆ ತೀವ್ರತರದ ಪರಿಣಾಮ ಉಂಟಾಗಲಿದೆ ಎಂದು ಅಪಸ್ವರ ಎತ್ತಿರುವ ಆಸ್ಟ್ರೇಲಿಯಾದ ಪರಿಸರವಾದಿಗಳು ಮತ್ತು ಜನರು ಶನಿವಾರ ‘STOP ADANI’ (ಸ್ಟಾಪ್ ಅದಾನಿ) ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

STOP ADANI: Huge protest across Australia against Adani's coal mine project

ಪಾರ್ಕ್, ಬೀಚ್ ಗಳಲ್ಲಿ ‘STOP ADANI’ ಎಂಬ ಪ್ಲೇಕಾರ್ಡ್ ಗಳು, ಮಾನವ ಸರಪಳಿಗಳನ್ನು ರಚಿಸಿ ಆಸ್ಟ್ರೇಲಿಯಾದ ಜನರು ವಿನೂತನ ಪ್ರತಿಭಟನೆಗೆ ಇಳಿದಿದ್ದು ಜಗತ್ತಿನ ಗಮನ ಸೆಳೆದಿತ್ತು. ಕ್ವೀನ್ಸ್ ಲ್ಯಾಂಡ್ ನಲ್ಲಿ ಗಣಿಗಾರಿಕೆ ಆರಂಭಿಸುವುದರಿಂದ ಜಾಗತಿಕ ತಾಪಮಾನ ಏರಿಕೆಯಾಗುವುದಲ್ಲದೆ ಗ್ರೇಟ್ ಬ್ಯಾರಿಯರ್ ರೀಫ್ (ಹವಳದ ದಿಬ್ಬಗಳು)ಗೆ ಹಾನಿಯಾಗಲಿದೆ ಎಂದು ಪರಿಸರವಾದಿಗಳು ಪ್ರತಿಭಟನೆ ನಡೆಸಿದ್ದರು.

ದಿ ಗಾರ್ಡಿಯನ್, ಮಿಂಟ್ ಮತ್ತು ಸ್ಕ್ರಾಲ್‌ನಂತಹ ಹಲವಾರು ಮಾಧ್ಯಮಗಳು ಅಕ್ಟೋಬರ್ 2017 ರಲ್ಲಿ ಅದಾನಿ ಎಂಟರ್‌ಪ್ರೈಸಸ್ ವಿರುದ್ಧ ಆಸ್ಟ್ರೇಲಿಯಾದಾದ್ಯಂತ ನಡೆದ ಪ್ರತಿಭಟನೆಗಳ ಬಗ್ಗೆ ವರದಿ ಮಾಡಿವೆ. 14 ಅಕ್ಟೋಬರ್ 2017 ರಂದು ಪ್ರಕಟವಾದ ಇಂಡಿಯನ್ ಕಲ್ಚರಲ್ ಫೋರಂನ ವರದಿಯು ಇದೇ ರೀತಿಯ ಫೋಟೋವನ್ನು ಪ್ರಕಟಿಸಿದೆ.

STOP ADANI: Huge protest across Australia against Adani's coal mine project

 

2017ರಲ್ಲಿ ಆಸ್ಟ್ರೇಲಿಯಾದಲ್ಲಿ ಅದಾನಿ ಗ್ರೂಪ್ ವಿರುದ್ದ ಏಕ ಕಾಲಕ್ಕೆ ಸುಮಾರು 45 ಪ್ರತಿಭಟನೆಗಳು ನಡೆದಿದ್ದವು. ಸಿಡ್ನಿಯ ಬಿಂದಿ ಬೀಚ್ ನಲ್ಲಿ ಜನರು ‘STOP ADANI’ ಆಕಾರದಲ್ಲಿ ನಿಂತು ಪ್ರತಿಭಟನೆಯ ಬಸಿ ಮುಟ್ಟಿಸಿದ್ದರು. ಅದಾನಿ ಗಣಿಯನ್ನು ಅರ್ಧಕರ್ಧ ಆಸ್ಟ್ರೇಲಿಯಾದ ಜನರು ವಿರೋಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

ಸಂಸತ್‌ನಲ್ಲಿ ಪ್ರತಿಭಟನೆ

ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗಳು ಅದಾನಿ ಸಂಸ್ಥೆಯ ಜೊತೆಯಲ್ಲಿ ಹೂಡಿಕೆ ಮಾಡಿರುವುದರಿಂದ ಸಾಮಾನ್ಯ ನಾಗರಿಕರ ಹಣ ಕಳೆದುಹೋಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. “ಈ ಕುರಿತು ಸಂಪೂರ್ಣ ತನಿಖೆಯಾಗಬೇಕೆಂದು ವಿರೋಧ ಪಕ್ಷಗಳ ಒಕ್ಕೂಟವು ಒತ್ತಾಯಿಸುತ್ತವೆ” ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಅದಾನಿ ಗ್ರೂಪ್‌ನಿಂದ ದೊಡ್ಡ ಪ್ರಮಾಣದ ಕಾರ್ಪೊರೇಟ್ ವಂಚನೆ ನಡೆದಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿ ಶುಕ್ರವಾರ ಸಂಸತ್ತಿನಲ್ಲಿ ಸತತ ಎರಡನೇ ದಿನವೂ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ, 2017 ರಂದು ಆಸ್ಟ್ರೇಲಿಯಾದಲ್ಲಿ ಅದಾನಿ ಅವರ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆಯನ್ನು ಇತ್ತೀಚಿಗೆ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ವಿರುದ್ಧದ ಪ್ರತಿಭಟನೆ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

LIC ಮತ್ತು SBI ಸಂಸ್ಥೆಗಳು ಅದಾನಿ ಸಂಸ್ಥೆಯ ಜೊತೆಯಲ್ಲಿ ಹೂಡಿಕೆ ಮಾಡಿರುವುದರಿಂದ ಜನ ಸಾಮಾನ್ಯರ ಹಣ ಕಳೆದು ಹೋಗಬಹುದು ಎಂಬ ಆತಂಕ ಎದುರಾಗಿದ್ದು, ಈ ಕಾರಣಕ್ಕಾದರೂ ಭಾರತದಲ್ಲೂ ಜನಸಾಮಾನ್ಯರಿಂದ ಪ್ರತಿಭಟನೆಗಳು ವ್ಯಕ್ತವಾಗಬಹುದೇನೋ, ಆದರೆ ಭಾರತದಲ್ಲಿ ಇಲ್ಲಿಯ ವರೆಗೆ ಯಾವುದೇ ಪ್ರತಿಭಟನೆಗಳು ನಡೆದ ವರದಿ ಲಭ್ಯವಾಗಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಂದೂಗಳ ರ್‍ಯಾಲಿ ಮೇಲೆ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹಳೆಯ ವಿಡಿಯೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights