ಫ್ಯಾಕ್ಟ್‌ಚೆಕ್: ಕಾಂತಾರ ರಿಷಬ್ ಶೆಟ್ಟಿಗೆ ಸಿಕ್ಕಿದ್ದು ಅಸಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯಲ್ಲ, ಮತ್ತೆ?

ಕಾಂತಾರಾ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿಗೆ ಈಗ ಮತ್ತೊಂದು ಪ್ರಶಸ್ತಿ ಬಂದಿದ್ದಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ  ಹಂಚಿಕೊಂಡಿದ್ದಾರೆ.

“ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ” . ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ‘ಕಾಂತಾರ’ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್‌ಗೆ ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಅವಾರ್ಡ್‌ ಘೋಷಣೆ ಆಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ರಿಷಬ್ ಶೆಟ್ಟಿ ಹೇಳಿರುವಂತೆ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನಿಜವೇ ಎಂದು ಪರಿಶೀಲಿಸೋಣ.

ರಿಷಬ್‌ ಶೆಟ್ಟಿಗೆ ಸಿಕ್ಕಿರುವುದು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯಲ್ಲ!

ನಟ ರಿಷಬ್ ಶೆಟ್ಟಿ ಚಿತ್ರೋದ್ಯಮದ ಮತ್ತೊಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಾದಾ ಸಾಹೇಬ್‌ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ರಿಷಬ್ ಶೆಟ್ಟಿ ಭಾಜನರಾಗಿದ್ದು, ಅತ್ಯಂತ ಭರವಸೆಯ ನಟ ವಿಭಾಗದಲ್ಲಿ ಪ್ರಶಸ್ತಿ ಲಭ್ಯವಾಗಿದೆ. ಫೆ 20 ರಂದು ಮುಂಬೈನ ತಾಜ್‌ ಲ್ಯಾಂಡ್‌ ಎಂಡ್ ಹೋಟೆಲ್‌’ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಷಬ್‌ ಶೆಟ್ಟಿ  ಪ್ರಶಸ್ತಿ  ಸ್ವೀಕರಿಸಿದ್ದಾರೆ.

ದಾದಾ ಸಾಹೇಬ್ ಪಾಲ್ಕೆ ಮತ್ತು ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎರಡೂ ಪ್ರಶಸ್ತಿಗಳು ಬೇರೆ ಬೇರೆಯಾಗಿದ್ದು ಈಗ ರಿಶಬ್‌ ಶೆಟ್ಟಿಗೆ ಬಂದಿರುವುದು ದಾದಾ ಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂಬುದು ಗಮನಾರ್ಹ.

“ದಾದಾಸಾಹೇಬ್ ಪಾಲ್ಕೆ ಅವಾರ್ಡ್ಸ್ 2023” ಎಂಬ ಹ್ಯಾಷ್‌ಟ್ಯಾಗ್ ಮೂಲಕ ಕೆಲವೊಂದು ಗೊಂದಲವನ್ನು ಹರಿಬಿಡಲಾಗುತ್ತಿದೆ. ಸಿನಿಮಾ ಕ್ಷೇತ್ರದ ಜೀವನಮಾನ ಸಾಧನೆಗೆ ದೇಶದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿ ನೀಡಲಾಗುವ ‘ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ’ ಇದೆಂಬ ಭಾವನೆಯನ್ನು ಈ ಮೂಲಕ ತುಂಬಲಾಗುತ್ತಿದೆ.

‘ಕಾಂತಾರ’ದ ಸಿನಿಮಾದ ನಟ ರಿಷಬ್‌ ಶೆಟ್ಟಿ, ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ಮೊದಲಾದವರಿಗೆ ವಿವಿಧ ವಿಭಾಗಗಳಲ್ಲಿ ‘ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿಗಳು’ ದೊರೆತಿವೆ ಎಂದು ಸುದ್ದಿಯಾಗುತ್ತಿವೆ.

‘ದಾದಾಸಾಹೇಬ್ ಪಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು (ಡಿಪಿಐಎಫ್‌ಎಫ್‌) 2012 ರಲ್ಲಿ ಆರಂಭವಾಯಿತು. 2016ರಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಡಿಫಿಐಎಫ್‌ಎಫ್‌ ವೆಬ್‌ಸೈಟ್ ಹೇಳುತ್ತದೆ.

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು :

ಅಧಿಕೃತವಾಗಿ ‘ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ’ಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನೀಡುತ್ತದೆ. ಇಲ್ಲಿಯವರೆಗೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಇಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ.

ಡಾ.ರಾಜ್ ಕುಮಾರ್

ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ನಟ ಡಾ.ರಾಜ್ ಕುಮಾರ್. 1995ರಲ್ಲಿ ಡಾ.ರಾಜ್ ಅವರಿಗೆ ಭಾರತ ಸರ್ಕಾರ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದ್ಭುತ ಪಾತ್ರಗಳ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸಿ ಮರೆಯಾದ ಕನ್ನಡದ ಮಾಣಿಕ್ಯ ಡಾ.ರಾಜ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಬಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಡಾ.ರಾಜ್ ಕುಮಾರ್

ವಿ.ಕೆ ಮೂರ್ತಿ :

ಖ್ಯಾತ ಛಾಯಾಗ್ರಾಹಕ ವಿ.ಕೆ ಮೂರ್ತಿ ಮೈಸೂರಿನವರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವಿ.ಕೆ ಮೂರ್ತಿ ಬಳಿಕ ಛಾಯಾಗ್ರಾಹಕರಾಗಿ ಖ್ಯಾತಿಗಳಿಸಿದ್ದಾರೆ. ಖ್ಯಾತ ನಿರ್ದೇಶಕ ಗುರುದತ್ ಅವರ ಜೊತೆ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಭಾರತದ ಮೊದಲ ಸಿನಿಸ್ಕೋಪ್ ಚಿತ್ರವನ್ನು ಸೆರೆಹಿಡಿದ ಖ್ಯಾತಿ ಇವರದ್ದು. 2008ರಲ್ಲಿ ವಿ.ಕೆ ಮೂರ್ತಿ ಅವರಿಗೆ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿ.ಕೆ ಮೂರ್ತಿ

ಇದೇ ರೀತಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗಳ 52  ಪುರಸ್ಕೃತರ ಪಟ್ಟಿಯಲ್ಲಿ, ಸತ್ಯಜಿತ್ ರೇ, ನೌಶಾದ್ ಅಲಿ, ವಿ. ಶಾಂತಾರಾಮ್, ಲತಾ ಮಂಗೇಶ್ಕರ್, ದಿಲೀಪ್ ಕುಮಾರ್, ರಾಜ್ ಕಪೂರ್, ವಿನೋದ್ ಖನ್ನಾ, ಗುಲ್ಜಾರ್, ಶಶಿ ಕಪೂರ್, ಪ್ರಾಣ್, ಸೌಮಿತ್ರಾ ಚಟರ್ಜಿ, ಮನ್ನಾ ಡೇ, ಆನಂದ್, ಯಶ್ ಚೋಪ್ರಾ, ಆಶಾ ಬೋಂಸ್ಲೆ, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಮುಂತಾದವರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಪ್ರಶಸ್ತಿಗೂ 1969ರಲ್ಲಿ ಸ್ಥಾಪಿಸಲಾದ ವಾರ್ಷಿಕ ‘ದಾದಾ ಸಾಹೇಬ್ ಪಾಲ್ಕೆ’ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ಭಾರತೀಯ ಚಿತ್ರರಂಗಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಒಬ್ಬರನ್ನು ಆಯ್ಕೆ ಮಾಡಿ ಪ್ರತಿವರ್ಷ ಪ್ರಖ್ಯಾತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ. ಡಾ.ರಾಜ್‌ಕುಮಾರ್‌ (1995), ಆಶಾ ಪರೇಖ್ (2020), ರಜನಿಕಾಂತ್ (2019), ಗುಲ್ಜಾರ್ (2013), ಅಡೂರ್ ಗೋಪಾಲಕೃಷ್ಣನ್ (2004), ಸತ್ಯಜಿತ್ ರೇ (1984), ಪೃಥ್ವಿರಾಜ್ ಕಪೂರ್ (1971) ಮತ್ತು ದೇವಿಕಾ ರಾಣಿ (1969) ಮೊದಲಾದವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಧಿಕೃತವಾಗಿ ‘ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ’ಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನೀಡುತ್ತದೆ.

ವಾರ್ಷಿಕವಾಗಿ ಕೊಡುವ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯೆಂದೇ ಜನಸಾಮಾನ್ಯರು ಭಾವಿಸಿಬಿಡುವಂತೆ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ವಾರ್ಷಿಕ ಪ್ರಶಸ್ತಿಗೂ ಈಗ ರಿಷಬ್ ಪಡೆದಿರುವ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ  ರಿಷಬ್ ತಮ್ಮ ಟ್ವೀಟ್‌ನಲ್ಲಿ ಮಾಡಿಲ್ಲ.

ಕೆಲವು ದಿನಗಳ ಹಿಂದೆಯೂ ಇಂತಹದ್ದೆ ಹೇಳಿಕೆ ಮೂಲಕ ಕಾಂತಾರ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿತ್ತು. ಆದರೆ ಕಾಂತಾರ ಚಿತ್ರವನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಿರಲಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂತಾರ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ ಎಂದು ತಪ್ಪು ವರದಿ ಮಾಡಿದ ಕನ್ನಡ ಮಾಧ್ಯಮಗಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights