ಫ್ಯಾಕ್ಟ್ಚೆಕ್ : ಇಂದಿರಾ ಗಾಂಧಿ ಪತಿ ಫಿರೋಜ್ ಗಾಂಧಿ ಮುಸ್ಲಿಮರೇ?
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪತಿ ಫಿರೋಜ್ ಗಾಂಧಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಗಾಂಧಿ ಹೆಸರಿನ ವೇಷ ಧರಿಸುವ ಮೂಲಕ ತಾನು ಮುಸ್ಲಿಂ ಅಲ್ಲ ಎಂದು ಬಿಂಬಿಸಿಕೊಂಡಿದ್ದರು ಎಂಬ ಹೇಳಿಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ನೆಹರೂ/ಖಾನ್ ಕುಟುಂಬಕ್ಕೆ ಗಾಂಧಿ ಸರ್ನೇಮ್ ಹೇಗೆ ಬಂತು ಎಂದು ಕಾಂಗ್ರೆಸ್ ನವರು ಮತ್ತು ಅದರ ಗುಲಾಮರು ವಿವರಣೆ ನೀಡಿದರೆ ನಮ್ಮ ಮತ ಕಾಂಗ್ರೆಸ್ಗೆ ಎಂಬ ಒಕ್ಕಣೆಯೊಂದಿಗೆ ಪೋಸ್ಟ್ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದೆ.
ಕಳೆದ ವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ, “ನಾವು ಎಲ್ಲಿಯಾದರೂ (ಜವಾಹರಲಾಲ್) ನೆಹರೂ ಅವರನ್ನು ಉಲ್ಲೇಖಿಸುವುದನ್ನು ತಪ್ಪಿಸಿದರೆ, ಅವರು (ಕಾಂಗ್ರೆಸ್) ಅಸಮಾಧಾನಗೊಳ್ಳುತ್ತಾರೆ. ನೆಹರೂ ಅಂತಹ ಮಹಾನ್ ವ್ಯಕ್ತಿ, ಹಾಗಾದರೆ ಅವರಲ್ಲಿ ಯಾರೂ ಕೂಡ ನೆಹರೂ ಅವರ ಉಪನಾಮವನ್ನು ಏಕೆ ಬಳಸುವುದಿಲ್ಲ ? ನೆಹರೂ ಹೆಸರನ್ನು ಬಳಸುವುದರಲ್ಲಿ ನಾಚಿಕೆ ಏನು? ಎಂದು ಪ್ರಧಾನಿ ಮೋದಿ ಪ್ರಶ್ನಿ ಮಾಡಿದ್ದರು.

ಫೆಬ್ರವರಿ 13 ರಂದು ರಾಹುಲ್ ಗಾಂಧಿಯವರ ಪ್ರತಿಕ್ರಿಯೆ :
“ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ ಮತ್ತು ಅದಾನಿ ಇಷ್ಟು ವೇಗವಾಗಿ ಬೆಳೆದದ್ದು ಹೇಗೆ ಎಂದು ನಾನು ಪ್ರಧಾನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ, ಆದರೆ ಒಂದೂ ಪ್ರಶ್ನೆಗೂ ಉತ್ತರಿಸದ ಮಾನ್ಯ ಪ್ರಧಾನಿಗಳು ನಿಮ್ಮನ್ನು ಏಕೆ ನೆಹರೂ ಎಂದು ಕರೆಯುವುದಿಲ್ಲ, ನಿಮ್ಮನ್ನು ಗಾಂಧಿ ಎಂದು ಏಕೆ ಕರೆಯುತ್ತಾರೆ ಎಂದು ಕೇಳಿದ್ದಾರೆ. ಇರಲಿ ನಾನು ಅವರಂತೆ ಉತ್ತರ ಕೊಡದೆ ನುಣುಚಿಕೊಳ್ಳುವುದಿಲ್ಲ “ನಾನು ಗಾಂಧಿ ಏಕೆಂದರೆ, ನನ್ನ ಅಜ್ಜನ ಉಪನಾಮ ನನ್ನ ತಂದೆಗೆ ಬಂದಿದೆ, ನನ್ನ ತಂದೆಯ ಉಪನಾಮ ನನಗೆ ಬರುತ್ತದೆ. ಇದೊಂದು ಸಾಮಾನ್ಯ ಸಂಗತಿಯಾಗಿದ್ದು ಪ್ರಧಾನಿಗೆ ಇಷ್ಟು ತಿಳಿದಿಲ್ಲವೇ? ಎಂದು ರಾಹುಲ್ ಗಾಂಧಿ ಕೇಳಿದ್ದರು.
ರಾಹುಲ್ ಗಾಂಧಿಯವರ ಹೆಸರಿನಲ್ಲಿರುವ ‘ಗಾಂಧಿ’ ಎಂಬ ಪದ ರಾಹುಲ್ ಅಜ್ಜ ಫಿರೋಜ್ ಗಾಂಧಿ ಅವರಿಂದ ಬಂದಿದ್ದು, ಅವರು ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಮತ್ತು ರಾಯ್ಬರೇಲಿಯ ಸಂಸತ್ ಸದಸ್ಯರಾಗಿದ್ದರು. ಫಿರೋಜ್ ಗಾಂಧಿ ಅವರು ತಮ್ಮ 48ನೇ ವಯಸ್ಸಿನಲ್ಲಿ ಅಂದರೆ 1960 ರಲ್ಲಿ ನಿಧನರಾದರು.
ಫಿರೋಜ್ ಗಾಂಧಿ ಮುಸ್ಲಿಮರೇ?
ಫಿರೋಜ್ ಗಾಂಧಿ ಅವರು ಸೆಪ್ಟೆಂಬರ್ 12, 1912 ರಂದು ಮುಂಬೈಯಲ್ಲಿ ಜನಿಸಿದರು. ಅವರ ಮೂಲ ಹೆಸರು ಫಿರೋಜ್ ಜಹಾಂಗೀರ್ ಘಾಂಡಿ. ಅವರ ತಾಯಿ ರತಿಮಾಯಿ ಮತ್ತು ತಂದೆ ಜಹಾಂಗೀರ್ ಫರೆಡೂನ್ ಘಾಂಡಿ.ಇವರು ಪಾರ್ಸಿಗಳು ಧರ್ಮವನ್ನು ಹೊಂದಿದ್ದರು. ತನ್ನ ತಂದೆ ಜಹಾಂಗೀರ್ ಫರೆಡೂನ್ ಘಾಂಡಿ ತೀರಿಕೊಂಡ ಬಳಿಕ, ಚಿಕ್ಕಮ್ಮ ಶಿರಿನ್ ಕಮಿಸ್ಸರಿಯಟ್ ಜೊತೆ ಅಲಹಾಬಾದ್ಗೆ ತೆರಳಿದರು.
ಫಿರೋಜ್ ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, 18 ನೇ ವಯಸ್ಸಿನಲ್ಲಿ, ಫಿರೋಜ್ ಅವರ ಬದುಕನ್ನು ಬದಲಾಯಿಸಲು ಕಾರಣವಾದ ಎರಡು ಶಕ್ತಿಗಳೆಂದರೆ – ಸ್ವಾತಂತ್ರ್ಯ ಹೋರಾಟ ಮತ್ತು ನೆಹರು ಕುಟುಂಬ.
BBC ವರದಿಯ ಪ್ರಕಾರ, ಒಮ್ಮೆ ಅಲಹಾಬಾದ್ನಲ್ಲಿ ಇಂದಿರಾ ಗಾಂಧಿಯವರ ತಾಯಿ ಕಮಲಾ ನೆಹರು ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು, ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತು. ಕಾಲೇಜಿನ ಗೋಡೆಯ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಫಿರೋಜ್ ಗಾಂಧಿ, ತಕ್ಷಣವೇ ಕಮಲಾ ಅವರ ನೆರವಿಗೆ ದಾವಿಸಿದ್ದರು. ಆ ಸಮಯದಲ್ಲಿ ಫಿರೋಜ್ ಗಾಂಧಿ ಕಮಲಾ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಕಮಲಾ ನೆಹರೂ ಅವರ ಯೋಗಕ್ಷೇಮವನ್ನು ತಿಳಿದುಕೊಳ್ಳಲು ಫಿರೋಜ್ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಈ ಮೂಲಕ ಫಿರೋಜ್ ಮತ್ತು ಇಂದಿರಾ ಪರಸ್ಪರ ಹತ್ತಿರವಾದರು.
ಫಿರೋಜ್ ಜಹಾಂಗೀರ್ ಘಾಂಡಿ, ಫಿರೋಜ್ ಗಾಂಧಿ ಆಗಿದ್ದು ಹೇಗೆ?
ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡ ಫಿರೋಜ್ ಘಾಂಡಿ, ಗಾಂಧೀಜಿಯವರ ಸ್ವಾತಂತ್ರ ಹೋರಾಟದಿಂದ ಪ್ರಭಾವಿತರಾದರು. ನಂತರ ಇದೇ ಸಮಯದಲ್ಲಿ ಅವರು ಮಹಾತ್ಮ ಗಾಂಧಿಯವರ ಗೌರವಾರ್ಥವಾಗಿ ತಮ್ಮ ಉಪನಾಮವನ್ನು ಘಂಡಿಯಿಂದ ಗಾಂಧಿ ಎಂದು ಬದಲಾಯಿಸಿಕೊಂಡರು.
1934-35ರಲ್ಲಿ ಇಂದಿರಾ ಶಾಂತಿನಿಕೇತನ ಪ್ರವೇಶಿಸಿದರು. ರವೀಂದ್ರನಾಥ ಠಾಕೂರರೇ ಆಕೆಗೆ “ಪ್ರಿಯದರ್ಶಿನಿ” ಎಂದು ಹೆಸರಿಟ್ಟರು. ನಂತರ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ಹೋದಾಗ, ಇಲ್ಲಿ ಫಿರೋಜ್ ಗಾಂಧಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಓದುತ್ತಿದ್ದರು. ಈ ಸಮಯದಲ್ಲಿ ಅವರು ಫಿರೋಜ್ ಗಾಂಧಿಯನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು.

ಜವಾಹರಲಾಲ್ ನೆಹರು ಅವರಿಗೆ ಇಂದಿರಾ ಗಾಂಧಿಯನ್ನು ಫಿರೋಜ್ ಗಾಂಧಿಗೆ ಮದುವೆ ಮಾಡಿಕೊಡಲು ಇಷ್ಟವಿರಲಿಲ್ಲ, ಆದರೆ ಗಾಂಧೀಜಿಯ ಮಧ್ಯಸ್ಥಿಕೆಯ ನಂತರ ಇಬ್ಬರೂ ಅಲಹಾಬಾದ್ನಲ್ಲಿ ವಿವಾಹವಾದರು.

ಫಿರೋಜ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಮತ್ತು ನವಜೀವನ್ನಂತಹ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು, ಎಂದು ಜನಸತ್ತಾ ವರದಿ ಮಾಡಿದೆ. ನಂತರ ರಾಜಕೀಯ ಪ್ರವೇಶ ಪಡೆದ ಫಿರೋಜ್ ಗಾಂಧಿ ಅವರು 1952 ರಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು. ನಂತರ ಅವರು ಈ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾದರು.
ಫಿರೋಜ್ ಗಾಂಧಿಯವರು 1958 ರಲ್ಲಿ ಸಂಸತ್ತಿನಲ್ಲಿ ಜೀವ ವಿಮಾ ನಿಗಮವು (ಎಲ್ಐಸಿ) ಸರ್ಕಾರದ ಉನ್ನತ ಅಧಿಕಾರಿಗಳ ಆಜ್ಞೆಯ ಮೇರೆಗೆ ಹರಿದಾಸ್ ಮುಂದ್ರಾ ಎಂಬ ದುರುಳ ಉದ್ಯಮಿ ಒಡೆತನದ ಆರು ಅನಾರೋಗ್ಯದ ಕಂಪನಿಗಳಲ್ಲಿ ಭಾರಿ ಹೂಡಿಕೆ ಮಾಡಿದೆ ಎಂದು ಸಾಬೀತುಪಡಿಸಿದರು.ಫಿರೋಜ್ ಅವರ ಪ್ರಚಾರದ ಪರಿಣಾಮವಾಗಿ ಹಣಕಾಸು ಸಚಿವ ಟಿಟಿ ಕೃಷ್ಣಮಾಚಾರಿ ರಾಜೀನಾಮೆ ನೀಡಬೇಕಾಯಿತು.
ಸೆಪ್ಟೆಂಬರ್ 8, 1960 ರಂದು ಫಿರೋಜ್ ಗಾಂಧಿ ಹೃದಯಾಘಾತದಿಂದ ನಿಧನರಾದರು. ಹಿಂದೂಸ್ತಾನ್ ಟೈಮ್ಸ್ ಅವರ ಅಂತ್ಯಕ್ರಿಯೆಯ ಬಗ್ಗೆ ವರದಿ ಮಾಡಿದೆ, ಅಂತಿಮ ಯಾತ್ರೆಯ ವಿಧಿ ವಿಧಾನಗಳ ಸಮಯದಲ್ಲಿ “ಗೀತಾ ಮತ್ತು ರಾಮಾಯಣದ ಶ್ಲೋಕಗಳ ಜೊತೆಗೆ ಕುರಾನ್ ಮತ್ತು ಬೈಬಲ್ಅನ್ನು ಪಠಿಸಲಾಯಿತು. ಪಾರ್ಸಿ ಪುರೋಹಿತರಿಂದ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಯಿತು. ಪ್ರಸ್ತುತ ಫಿರೋಜ್ ಗಾಂಧಿಯವರ ಸಮಾಧಿಯು ಅಲಹಾಬಾದ್ನಲ್ಲಿರುವ ಪಾರ್ಸಿ ಸ್ಮಶಾನದಲ್ಲಿದೆ. ಹಾಗಾಗಿ ಫಿರೋಜ್ ಗಾಂಧಿ ಮುಸ್ಲಿಂ ಅಲ್ಲ ಪಾರ್ಸಿ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಂದಿರಾ ಗಾಂಧಿಯವರ ಪತಿಯ ಪೂರ್ಣ ಹೆಸರು ಫಿರೋಜ್ ಜಹಾಂಗೀರ್ ಘಾಂಡಿ, ಅವರು ಮುಂಬೈನ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜಹಾಂಗೀರ್ ಮತ್ತು ತಾಯಿಯ ಹೆಸರು ರತಿಮಾಯಿ. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಒಲವು ಬೆಳಸಿಕೊಂಡು ಗಾಂಧೀಜಿಯವರ ಪ್ರೇರಣೆಯಿಂದಾಗಿ ಅವರ ಗೌರವಾರ್ಥವಾಗಿ ತಮ್ಮ ಹೆಸರನ್ನು ಫಿರೋಜ್ ಗಾಂಧಿ ಎಂದು ಬದಲಾಯಿಸಿಕೊಂಡು ರಾಜಕಾರಣಿ ಮತ್ತು ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಫಿರೋಜ್ ಗಾಂಧಿ ಮುಸ್ಲಿಂ ಧರ್ಮದವರು ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ಇಂಡಿಯನ್ ಎಕ್ಸ್ಪ್ರಸ್ ಮತ್ತು DFRC
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್ : ಮೈಸೂರಿನಲ್ಲಿ ನಾಳೆ(ಏ.9) ಮೋದಿ ತಮ್ಮ ಸ್ನಾತಕೋತ್ತರ ಪದವಿ ಪತ್ರವನ್ನು ಬಿಡುಗಡೆ ಮಾಡುವರೇ? ಈ ಸ್ಟೋರಿ ಓದಿ

