ಫ್ಯಾಕ್ಟ್‌ಚೆಕ್: ಸಂತೋಷ್‌ ಟ್ರೋಫಿ ಗೆದ್ದ ಕರ್ನಾಟಕ ಫುಟ್ಬಾಲ್ ತಂಡದ ಆಟಗಾರರನ್ನು ರಸ್ತೆಯಲ್ಲಿ ಕೂರಿಸಿ ಅಗೌರವ ತೋರಿಸಿದ್ದು ಸಿದ್ದರಾಮಯ್ಯ ಸರ್ಕಾರ ಅಲ್ಲ ಬೊಮ್ಮಾಯಿ ಸರ್ಕಾರ!

54 ವರ್ಷ​ಗಳ ಬಳಿ​ಕ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ ತಂಡವನ್ನು ಮುಖ್ಯಮಂತ್ರಿಗಳು ರಸ್ತೆಯಲ್ಲಿ ಕೂರಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಫುಟ್ಬಾಲ್ ತಂಡ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಸಂತೋಷ್ ಟ್ರೋಫಿ ಗೆದ್ದುಕೊಂಡಿತು. ಆದರೆ ಈ ಆಟಗಾರರನ್ನು ಮುಖ್ಯಮಂತ್ರಿಗಳು ಹೀಗೆ ನಡೆಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.

https://twitter.com/Somashekar2054/status/1668045308230766592

ಈ ವಿಡಿಯೋವನ್ನು ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಟ್ರೋಫಿ ಗೆದ್ದ ಕರ್ನಾಟಕ ತಂಡದ ಆಟಗಾರರು ಟ್ರೋಫಿಯೊಂದಿಗೆ ರಸ್ತೆಯ ಫುಟ್‌ಪಾತ್ ಮೇಲೆ ಕುಳಿತಿರುವುದನ್ನು ಕಾಣಬಹುದು.

ಹಾಗಿದ್ದರೆ 54 ವರ್ಷದ ನಂತರ ಕರ್ನಾಟಕ ತಂಡವೊಂದು ಸೌದಿ ಅರೇಬಿಯಾ ನೆಲದಲ್ಲಿ ಸಂತೋಷ್ ಟ್ರೋಫಿ ಗೆದ್ದುಕೊಂಡು ಬಂದಿರುವ ತಂಡವನ್ನು ಸಿದ್ದರಾಮಯ್ಯ ಸರ್ಕಾರ ಇಷ್ಟು ತಾತ್ಸಾರದಿಂದ ನಡೆಸಿಕೊಂಡಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಭಾರತದಲ್ಲಿ ಫುಟ್ಬಾಲ್ ಅಭಿಮಾನಿಗಳ ಸಂಖ್ಯೆ ಅಪಾರವಿದೆ. ವಿಶ್ವಕಪ್‌ ಮಟ್ಟದಲ್ಲಿ ಆಡುವ ಮಟ್ಟಕ್ಕೆ ಭಾರತ ಬೆಳೆದಿಲ್ಲವಾದರೂ, ಪ್ರತಿಭಾನ್ವಿತ ಫುಟ್ಬಾಲ್‌ ಆಟಗಾರರು ನಮ್ಮಲ್ಲಿದ್ದಾರೆ. ಅದರಲ್ಲೂ ಫುಟ್ಬಾಲ್‌ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ. ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ಕರ್ನಾಟಕವು ಫುಟ್ಬಾಲ್ ರಂಗದಲ್ಲಿ ಗುರುತಿಸಿಕೊಂಡಿದ್ದ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿತ್ತು. ಆ ನಂತರದ ವರ್ಷಗಳಲ್ಲಿ ಕನ್ನಡನಾಡು ಹಲವಾರು ಫುಟ್ಬಾಲ್ ಆಟಗಾರರನ್ನು ದೇಶಕ್ಕೆ ಕೊಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸುವಲ್ಲಿ ಕರ್ನಾಟಕದ ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ.

ದೇಶೀಯ ಫುಟ್ಬಾಲ್ ಟೂರ್ನಿಯಾಗಿರುವ ಸಂತೋಷ್ ಟ್ರೋಫಿ, ಭಾರತದ ವಿವಿಧ ರಾಜ್ಯಗಳ ಪ್ರತಿಭಾವಂತ ಕಾಲ್ಚೆಂಡು ಆಟಗಾರನ್ನು ಮೇಲ್ಪಂಕ್ತಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಲವು ದಶಕಗಳಿಂದ ಈ ಟೂರ್ನಿಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಒಂದು ಕಾಲದಲ್ಲಿ ಕರ್ನಾಟಕವು ಬಲಿಷ್ಠ ಫುಟ್ಬಾಲ್‌ ತಂಡ ಎನಿಸಿಕೊಂಡಿತ್ತು. ಆದರೆ, ಕಳೆದ ಐದು ದಶಕಗಳಿಂದ ಕರ್ನಾಟಕವು ಫುಟ್ಬಾಲ್‌ ಆಡುತ್ತಿದೆಯೋ ಇಲ್ಲವೋ ಎಂಬ ಗೊಂದಲ ಮೂಡುವಂತೆ, ರಾಜ್ಯದ ಆಟಗಾರರ ಪ್ರತಿಭೆಗಳು ಕಣ್ಮರೆಯಾಗಿತ್ತು. ಆದರೆ, ಈಗ ಮತ್ತೆ ಇದೇ ಫುಟ್ಬಾಲ್‌ ಆಟದಲ್ಲಿ ರಾಜ್ಯ ಗುರುತಿಸಿಕೊಳ್ಳುತ್ತಿದೆ. 1975-76ರ ಸಂತೋಶ್‌ ಟ್ರೋಫಿಯ ಋತುವಿನಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿದ್ದ ಕರ್ನಾಟಕ, ಇದೀಗ ಮತ್ತೆ ಅಂತಿಮ ಸುತ್ತಿನಲ್ಲಿಸಂತೋಷ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

2023ರ ಸಂತೋಷ್ ಟ್ರೋಫಿ ಫೆಬ್ರವರಿ 10 ರಿಂದ ಮಾರ್ಚ್ 04 ರ ವರೆಗೆ ಪಂದ್ಯ ನಡೆದಿದೆ. ಕೊನೆಯ ಪಂದ್ಯದಲ್ಲಿ ಮೇಘಾಲಯ ವಿರುದ್ಧ ಕರ್ನಾಟಕ ತಂಡ 3-2 ಗೋಲುಗಳ ಅಂತರದಲ್ಲಿ ಗೆದ್ದು ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು. 76ನೇ ಆವೃತ್ತಿಯ ಟೂರ್ನಿಯುದ್ಧಕ್ಕೂ ಆಕರ್ಷಕ ಪ್ರದರ್ಶನ ನೀಡಿದ ರಾಜ್ಯ ತಂಡ ಕೊನೆಗೂ ಐದು ದಶಕಗಳ ಪ್ರಶಸ್ತಿ ಬರ ನೀಗಿಸಿಕೊಂಡಿತ್ತು.

ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ ಬೊಮ್ಮಾಯಿ

ಮಾಚ್‌ 4 ರಂದು ಪಂದ್ಯ ಗೆದ್ದು ಕರ್ನಾಟಕಕ್ಕೆ ಆಗಿಮಿಸಿದ ತಂಡವನ್ನು ರಸ್ತೆಯಲ್ಲಿ ಕೂರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಗೌರವ ತೋರಿದ್ದಾರೆ. ಸಂತೋಷ್ ಟ್ರೋಫಿಯನ್ನು ಗೆದ್ದು ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ತಂಡಕ್ಕೆ ನೀಡುವ ಗೌರವ ಇದೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಈ ಸಂದರ್ಭದಲ್ಲಿ ಅಂದರೆ ಕರ್ನಾಟಕ ತಂಡ ಫೈನಲ್‌ನಲ್ಲಿ ಗೆದ್ದು ಕರ್ನಾಟಕಕ್ಕೆ ಬಂದಾಗ ಇಲ್ಲಿ ಅಧಿಕಾರದಲ್ಲಿದ್ದದ್ದು BJP ನೇತೃತ್ವದ ಬಸವರಾಜ ಬೊಮ್ಮಾಯಿ ಸರ್ಕಾರ.

ವಾಸ್ತವವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಮೇ 20. ಈ ಘಟನೆ ನಡೆದಾಗ ಸಿದ್ದರಾಮಯ್ಯ ಮುಖ್ಯಂತ್ರಿಯಾಗಿರಲೇ ಇಲ್ಲ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ:  ಫ್ಯಾಕ್ಟ್‌ಚೆಕ್ : ರೈಲಿಗೆ ಕಲ್ಲು ತೂರುತ್ತಿರುವ ಹಳೆಯ ವಿಡಿಯೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights