ಫ್ಯಾಕ್ಟ್ಚೆಕ್ : ಶಾಲಾ ಬಾಲಕಿಗೆ ಕಿರುಕುಳ ನೀಡಿ ಪೋಷಕರಿಂದ ಏಟು ತಿಂದ ವ್ಯಕ್ತಿ ಮುಸ್ಲಿಂ ಅಲ್ಲ! ಮತ್ತ್ಯಾರು?
ವ್ಯಕ್ತಿಯೊಬ್ಬನನ್ನು ಮಹಿಳೆಯರು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಥಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಮುಸ್ಲಿಂ ಹುಡುಗನೊಬ್ಬ ಹೆಸರು ಬದಲಾಯಿಸಿಕೊಂಡು, ಹಿಂದೂ ಹುಡುಗಿಯನ್ನು ಪ್ರೀತಿಸಿ ಅವಳನ್ನ ಅಪಹರಣ ಮಾಡುವ ಯತ್ನದಲ್ಲಿದ್ದಾಗ ಹಿಂದೂ ಸಮಾಜದ ಮಹಿಳೆಯರು ಮತ್ತು ಜನರ ಕೈಗೇ ಸಿಕ್ಕು, ಆದ ಗತಿ ನೋಡಿ. ಹಿಂದೂ ಸಮಾಜ ಜಾಗೃತ ಆಗುತ್ತಿದೆ” ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ.
ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಾ, ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಎಂದು ನಟಿಸಿ ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿರುವಂತೆ ನಟಿಸಿದ್ದಾನೆ. ಇದು ಲವ್ ಜಿಹಾದ್ ಎಂದು ತಿಳಿದ ಕುಟುಂಬಸ್ಥರು ಹುಡುಗನಿಗೆ ಈ ರೀತಿ ಮಾಡಿದ್ದಾರೆ ಎಂದೂ ಬರೆಯಲಾಗಿದೆ. ಜೂನ್ 20, 2023 ರಂದು, ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್ಸುದ್ದಿ.ಕಾಂ ಗೆ ವಾಟ್ಸಾಪ್ ಮೂಲಕ ವಿನಂತಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಕಳೆದ ಎರಡು ಮೂರು ವರ್ಷದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಜನವರಿ 20, 2020 ರಂದು, ಟೈಮ್ಸ್ ಆಫ್ ಇಂಡಿಯಾ ವೈರಲ್ ವೀಡಿಯೊವನ್ನು ಒಳಗೊಂಡಿರುವ ವರದಿಯನ್ನು ಪ್ರಕಟಿಸಿತು. ಈ ಲೇಖನದ ಶೀರ್ಷಿಕೆ, “ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಬೆತ್ತಲೆ ಮಾಡಿ ಥಳಿಸಿದ ಕುಟುಂಬಸ್ಥರು” ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ.
ಘಟನೆಯ ವಿವರ:
ಹರಿಯಾಣದ ಅಂಬಾಲ ಎಂಬಲ್ಲಿ ಶಾಲಾ ಬಾಲಕಿಯರು ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ, ಪವನ್ ಎಂಬ ವ್ಯಕ್ತಿಯು (ವಿಡಿಯೋದಲ್ಲಿ ಸಾರ್ವಜನಿಕವಾಗಿ ಥಳಿಸಲಾಗುತ್ತಿರುವ ವ್ಯಕ್ತಿ) ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದನು. ಇದು ಪುನರಾವರ್ತನೆಯಾದಾಗ, ಬಾಲಕಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ, ಪೋಷಕರು ಮಗುವನ್ನು ವಿಚಾರಿಸಿದಾಗ, ಶಾಲೆಯಿಂದ ಹಿಂತಿರುಗುವಾಗ ಪವನ್ ಎಂಬುವವನ ಉಪಟಳದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ.

ಬೆಳಗ್ಗೆ ಮನೆಯಿಂದ ಹೊರಡುವಾಗ ಮೂವರು ಹುಡುಗಿಯರು ಒಟ್ಟಿಗೆ ಹೋಗುತ್ತಿದ್ದರು, ಆದರೆ ಒಂದು ಹುಡುಗಿಯ ತರಗತಿಗಳು ಬೇಗನೆ ಮುಗಿಯುತ್ತಿದ್ದರಿಂದ, ಒಬ್ಬಂಟಿಯಾಗಿ ಮನೆಗೆ ಹೋಗಬೇಕಾಗಿತ್ತು. ಈ ವೇಳೆ ಪವನ್ ಹುಡುಗಿಯನ್ನು ನಿರಂತರವಾಗಿ ಕಾಡಲು ಶುರು ಮಾಡಿದ್ದಾನೆ. ಇದು ವಿಪರೀತ ಎನ್ನಿಸಿದಾಗ ಕೊನೆಗೆ ಬಾಲಕಿ ತನ್ನ ತಾಯಿಗೆ ಪವನ್ ಬಗ್ಗೆ ತಿಳಿಸಿದ್ದು, ಆಕೆಯ ತಾಯಿ ತನ್ನ ಸ್ನೇಹಿತರ ಜೊತೆಗೂಡಿ ಬಾಲಕಿಯನ್ನು ಹಿಂಬಾಲಿಸಲು ನಿರ್ಧರಿಸಿದ್ದಾರೆ. ಅವರು ಪವನ್ನನ್ನು ಹಿಡಿದಿದ್ದಾರೆ ಮತ್ತು ನಂತರದ ಘಟನೆಯನ್ನು ವಿಡಿಯೊದಲ್ಲಿ ನೋಡಬಹುದು.
ಮೂವರು ಅಪ್ರಾಪ್ತ ಬಾಲಕಿಯರ ಕುಟುಂಬದ ಸದಸ್ಯರು, ಬಾಲಕಿಗೆ ಕಿರುಕುಳ ನೀಡಿದ್ದಕ್ಕಾಗಿ ಯುವಕನಿಗೆ ಥಳಿಸಿದ್ದಾರೆ. ಬಾಲಕಿ ಶಾಲೆಗೆ ಹೋಗುವಾಗ ಅಶ್ಲೀಲವಾಗಿ ಪದ ಮತ್ತು ಸನ್ನೆಗಳನ್ನು ಪವನ್ ಎಂಬ ವ್ಯಕ್ತಿಯು ಮಾಡುತ್ತಿದ್ದನು ಎಂದು ಮಹಾರಾಷ್ಟ್ರ ಟೈಮ್ಸ್ ವರದಿ ಮಾಡಿದೆ.
ಘಟನೆ ಕುರಿತು ಚಂಡೀಗಢದ ಅಂಬಾಲಾದ ಮಹಿಳಾ ಪೊಲೀಸ್ ಪೇದೆ ಸುನಿತಾ ಢಾಕಾ ಆಲ್ಟ್ ನ್ಯೂಸ್ಗೆ ಮಾಹಿತಿ ನೀಡಿದ್ದು, ಈ ಪ್ರಕರಣ 2020 ಜನವರಿ 20ರಂದು ನಡೆದಿದೆ. ಈ ಪ್ರಕಣದಲ್ಲಿ “ಪವನ್ ಎಂಬವನನ್ನು ಬಂಧಿಸಲಾಗಿದ್ದು ಈ ಪ್ರಕರಣದಲ್ಲಿ ಯಾವುದೇ ಅತ್ಯಾಚಾರ ನಡೆದಿಲ್ಲ ಮತ್ತು ಆರೋಪಿ ಮುಸ್ಲಿಂ ಅಲ್ಲ ಎಂದು ಖಚಿತಪಡಿಸಿದ್ದಾರೆ. ಪೋಕ್ಸೋ ಕಾಯ್ದೆ 12 ಮತ್ತು ಐಪಿಸಿ ಸೆಕ್ಷನ್ 506 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
मेरठ वैली बाजार में महिलाओं को छेड़ते युवक की पिटाई के वायरल वीडियो का मेरठ पुलिस द्वारा खंडन ।#MeerutPolice #UPPolice pic.twitter.com/iklfAsAwAz
— MEERUT POLICE (@meerutpolice) February 8, 2023
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋ 2020 ಜನವರಿ 20ರಲ್ಲಿ ಹರಿಯಾಣದ ಅಂಬಾಲದಲ್ಲಿ ನಡೆದ ಘಟನೆ ಎಂದು ಮೀರತ್ ಪೊಲೀಸರು ಟ್ವೀಟ್ ಮೂಲಕ ಸ್ಪಷ್ಟಪರಿಸಿದ್ದಾರೆ. ಅಲ್ಲದೆ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿಲ್ಲ, ಸಂತ್ರಸ್ತೆ ಮತ್ತು ಆರೋಪಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಖಚಿತ ಪಡಿಸಿದ್ದಾರೆ. ಪವನ್ ಎಂಬ ವ್ಯಕ್ತಿ ಶಾಲಾ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆತನನ್ನು ಬಾಲಕಿ ಕುಟುಂಬದವರು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಥಳಿಸಿರುವ ಹಳೆಯ ಘಟನೆಯನ್ನು, ಮುಸ್ಲಿಂ ವ್ಯಕ್ತಿಗೆ ಥಳಿತ ಎಂದು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ಒಡಿಶಾ ರೈಲು ದುರಂತಕ್ಕೂ ಈ ವಿಡಿಯೋಗೂ ಸಂಬಂಧವಿಲ್ಲ – ಇದು ಮೆಕ್ಸಿಕೋ ದೇಶದ್ದು

