ಫ್ಯಾಕ್ಟ್‌ಚೆಕ್ : ಆಸ್ಟ್ರೇಲಿಯಾ ವಿರುದ್ದ ಕ್ರಿಕೆಟ್‌ನಲ್ಲಿ ಹೋದ ಮಾನ ಹಾಕಿಯಲ್ಲಿ ಬಂತೆ?
ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆತಿಥೇಯ ಟೀಮ್ ಇಂಡಿಯಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕ್ರಿಕೆಟ್ ವಿಶ್ವಕಪ್ ಟೂರ್ನಿ 2023 ಮುಗಿದರೂ ಅದಕ್ಕೆ ಸಂಬಂಧಿಸಿದಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹರಿದಾಡುತ್ತಲೇ ಇವೆ. ಅಂತಹದೇ ಒಂದು ಕೆಳಗಿನಂತಿದೆ.
ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು “ಭಾರತ ಮಹಿಳಾ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದೆ. ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯದಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಆಸ್ಟ್ರೇಲಿಯನ್ನರ ವಿರುದ್ಧ ಸೋತ ನಂತರ ಆಸ್ಟ್ರೇಲಿಯನ್ನರ ವಿರುದ್ಧ ಈಗ ಸೇಡು ತೀರಿಸಿಕೊಳ್ಳಲಾಗಿದೆ.” ಎಂದು ಪ್ರತಿಪಾಧಿಸಿ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇತ್ತೀಚೆಗೆ, ವಿಶ್ವ ಚಾಂಪಿಯನ್‌ಶಿಪ್ ಎಂಬ ಹೆಸರಿನ ಯಾವುದೇ ಹಾಕಿ ಪಂದ್ಯಾವಳಿ ನಡೆದಿಲ್ಲ. 2023 ರ ನವೆಂಬರ್ 19 ರಂದು ನಡೆದ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ 2023 ರ ನವೆಂಬರ್ 5 ರಂದು ನಡೆದ ಫೈನಲ್‌ನಲ್ಲಿ ಜಪಾನ್ ಅನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.

ಆದರೆ ಸುಳ್ಳನ್ನು ಪ್ರತಿಪಾದಿಸಲು ಕೊಲ್ಯಾಜ್ ಮಾಡಲಾದ ಪೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗೂ ಅಲ್ಲಿ ಬಳಸಿಕೊಳ್ಳಲಾಗಿರುವ ಪೋಟೋಗಳು ಇತ್ತೀಚಿನದಾಗಿರದೆ ಟೋಕಿಯೊ 2020ರ ಒಲಂಪಿಕ್ ಸಂದರ್ಭದ್ದಾಗಿದೆ. ಆದ್ದರಿಂದ, ಭಾರತ ಮಹಿಳಾ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ದ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದೆ ಎಂಬುದು ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಹಾಕಿ ವಿಶ್ವಕಪ್ 2022 ಜುಲೈ ನಲ್ಲಿ ನಡೆಯಿತು. ಅದರಲ್ಲಿ ಅರ್ಜೆಂಟೀನಾ ವಿರುದ್ಧ ನೆದರ್ಲ್ಯಾಂಡ್ಸ್ ಗೆದ್ದಿತು. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಯಾವ ಪಂದ್ಯಗಳು ನಡೆದಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವಂತೆ 2023ರಲ್ಲಿ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ದ ಭಾರತದ ಮಹಿಳೆಯರು ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಇಂದಿರಾ ಗಾಂಧಿ ತಿನ್ನುತ್ತಿರುವುದು ‘ಫಿಶ್’ ಅಲ್ಲ! ಹಾಗಿದ್ದರೆ ಮತ್ತೇನು?

