ಫ್ಯಾಕ್ಟ್‌ಚೆಕ್ : ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಪಿಲ್ ಸಿಬಲ್ ಹೇಳಿದ್ದರೆ?

ಅಯೋಧ್ಯೆಯಲ್ಲಿನ ರಾಮಮಂದಿರದ  ಉದ್ಘಾಟನೆಯನ್ನು ಜನವರಿ 22, 2024 ಕ್ಕೆ ನಿಗದಿಪಡಿಸಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ‘ರಾಮ ಮೂರ್ತಿ’ಯ ಪ್ರತಿಷ್ಠಾಪನಾ ಸಮಾರಂಭಕ್ಕಾಗಿ ಆಮಂತ್ರಣ ಪತ್ರಿಕೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ.

ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ಹಿಂದೆ ಹೇಳಿದ್ದರು ಅದನ್ನು ಯಾರಾದರೊಬ್ಬರು ಅವರಿಗೆ ನೆನಪು ಮಾಡಿ ಎಂಬ ಹೇಳಿಕೆಯಿರುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಕಪಿಲ್ ಸಿಬಲ್ ನಿಜವಾಗಿಯೂ ಇಂತಹ ಹೇಳಿಕೆ ನೀಡಿದ್ದರೆ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ ಮೂಲಕ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಕಾಂಗ್ರೆಸ್‌ ನಾಯಕ ಕಪಿಲ್ ಸಿಬಲ್ ಅಂತಹ ಹೇಳಿಕೆ ನೀಡಿರುವ ಯಾವ ವರದಿಗಳಾಗಲಿ, ಸುದ್ದಿಗಳಾಗಲಿ ಲಭ್ಯವಾಗಿಲ್ಲ. ಒಂದುವೇಳೆ ಕಪಿಲ್ ಸಿಬಲ್ ಇಂತಹ ಹೇಳಿಕೆಯನ್ನು ನೀಡಿರುತ್ತಿದ್ದರೆ ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ, ದೊಡ್ಡ ಚರ್ಚೆಯಾಗಿರುತ್ತಿತ್ತು ಆದರೆ ಅಂತಹ ಯಾವುದೇ ಹೇಳಿಕೆಯನ್ನು ನೀಡಿರುವ ಬಗ್ಗೆ ಮಾಹಿತಿಗಳು ಪತ್ತೆಯಾಗಿಲ್ಲ.

ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಕಪಿಲ್ ಸಿಬಲ್ ಅವರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ (‘ನಾನು ಬದುಕಿರುವವರೆಗೂ ರಾಮಮಂದಿರವನ್ನು ನಿರ್ಮಿಸಲು ನಾನು ಬಿಡುವುದಿಲ್ಲ’) ಎಂದು ಹೇಳುವ ಪೋಸ್ಟ್‌ಗಳನ್ನು ನವೆಂಬರ್ 2019 ರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

ಅಲ್ಲದೆ, ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಪಿಲ್ ಸಿಬಲ್, ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ತೀರ್ಪು ನೀಡುವ ಮುನ್ನ ಕಪಿಲ್ ಸಿಬಲ್ ಅವರು ‘ದೇವರು ಇಚ್ಛಿಸಿದಾಗ ಮಾತ್ರ ರಾಮಮಂದಿರ ನಿರ್ಮಾಣವಾಗಲಿದೆ. ಇದನ್ನು ಮೋದಿಯವರ ಇಚ್ಛೆಯಂತೆ ನಿರ್ಮಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಜನವರಿ 2024ಕ್ಕೆ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಕಾಂಗ್ರೆಸ್ ನಾಯಕರನ್ನು ರಾಮಮಂದಿರ ನಿರ್ಮಾಣದ ವಿರೋಧಿಗಳೆಂಬಂತೆ ಬಿಂಬಿಸುವ ಸಲುವಾಗಿ ಸುಳ್ಳು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : 2013ರಲ್ಲಿ ಕಾಂಗ್ರೆಸ್‌ ಮಂಡಿಸಿದ ಮಸೂದೆ ಬಗ್ಗೆ ಸುಳ್ಳು ಹೇಳಿದ ಯೂಟ್ಯೂಬ್ ನ ನಿರೂಪಕಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights