FACT CHECK | WhatsApp ಬಳಕೆದಾರರಿಗೂ ತಟ್ಟಲಿದೆಯೇ ಚುನಾವಣಾ ನೀತಿ ಸಂಹಿತೆಯ ಬಿಸಿ
ಭಾರತೀಯ ಚುನಾವಣಾ ಆಯೋಗವು (ECI) 2024ರ ಲೋಕಸಭೆ ಚುನಾವಣೆಗೆ ಏಳು ಹಂತದ ವೇಳಾಪಟ್ಟಿಯನ್ನು ಘೋಷಿಸಿದೆ, 19 ಏಪ್ರಿಲ್ 2024 ರಿಂದ 01 ಜೂನ್ 2024 ರವರೆಗೆ ವ್ಯಾಪಿಸಿದೆ, ಫಲಿತಾಂಶಗಳನ್ನು 04 ಜೂನ್ 2024 ರಂದು ಪ್ರಕಟಿಸಲಾಗುವುದು. ಪರಿಣಾಮವಾಗಿ, ಮಾದರಿ ನೀತಿ ಸಂಹಿತೆ ( MCC) ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ಸಂದೇಶವೊಂದು ರಾಜಕೀಯ ಪಕ್ಷಗಳು/ಅಭ್ಯರ್ಥಿಗಳ ವಿರುದ್ಧ ಭಿನ್ನಾಭಿಪ್ರಾಯ/ರಾಜಕೀಯ ಪ್ರೇರಿತ ಪೋಸ್ಟ್ಗಳನ್ನು ವ್ಯಕ್ತಪಡಿಸುವ ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಗಾ ಇಡುತ್ತಿದೆ ಎಂದು ಪ್ರತಿಪಾದಿಸಿ ವಾಟ್ಸಾಪ್ಗಳಲ್ಲಿ ಸಂದೇಶಗಳನ್ನು ಶೇರ್ ಮಾಡಲಾಗುತ್ತಿದೆ.
ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶದಲ್ಲಿ ಏನಿದೆ?
ಇಂದಿನಿಂದ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಯಾಗುವುದರಿಂದ ಎಲ್ಲ whatsapp ಗ್ರೂಪ್ಗಳ ಮೇಲೆ ಇಲಾಖೆಯು ನಿಗಾವಹಿಸುತ್ತಿದ್ದು ಯಾರು ಸಹ ಇಲಾಖೆಯ ವಿರುದ್ಧವಾಗಲಿ ಸರಕಾರದ ವಿರುದ್ಧವಾಗಲಿ ಅಥವಾ ಯಾವುದೇ ಗಣ್ಯ ವ್ಯಕ್ತಿಗಳ ವಿರುದ್ಧ ವಾಗಲಿ ಅವಹೇಳನಕಾರಿ ಹೇಳಿಕೆಗಳನ್ನು or ಪೋಸ್ಟ್ ಗಳನ್ನೂ ಹಾಕಬಾರದು ರಾಜಕೀಯ ಪ್ರೇರಿತ ಯಾವುದೇ ಮೆಸೇಜನ್ನು ಹಾಕಬಾರದು ಎಂದು ಕೇಳಿಕೊಳ್ಳುತ್ತೇವೆ.
* ನೀತಿ ಸಂಹಿತೆ ಪ್ರಾರಂಭವಾಗಿರುವುದರಿಂದ ನಮ್ಮ ದೇಶದ ಲೋಕಸಭಾ ಚುನಾವಣೆ ನಿಮಿತ್ಯ ವಾಟ್ಸಾಪ್ ಮತ್ತು ಫೋನ್ ಕರೆಗಳಿಗೆ ಅನ್ವಯವಾಗುವ ಹೊಸ ಸಂವಹನ ನಿಯಮಗಳು*
- ಎಲ್ಲಾ ಕರೆಗಳು ರೆಕಾರ್ಡಿಂಗ್ ಆಗುತ್ತಿವೆ.
- ಎಲ್ಲಾ ಕರೆ ರೆಕಾರ್ಡಿಂಗ್ಗಳನ್ನು ಉಳಿಸಲಾಗುತ್ತದೆ.
- WhatsApp, Facebook, Twitter ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
- ಗೊತ್ತಿಲ್ಲದ ಎಲ್ಲರಿಗೂ ತಿಳಿಸಿ.
- ನಿಮ್ಮ ಅಂತರ್ಜಾಲ ಸಾಧನಗಳು ಸಚಿವಾಲಯದ ವ್ಯವಸ್ಥೆಗೆ ಸಂಪರ್ಕಗೊಳ್ಳುತ್ತವೆ.
- ಯಾರಿಗೂ ತಪ್ಪು ಸಂದೇಶಗಳನ್ನು ಕಳುಹಿಸದಂತೆ ಎಚ್ಚರಿಕೆ ವಹಿಸಿ.
- ನಿಮ್ಮ ಮಕ್ಕಳು, ಸಹೋದರರು, ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರಿಗೆ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಕಡಿಮೆ ಸಾಮಾಜಿಕ ಜಾಲತಾಣಗಳನ್ನು ಬಳಸಬೇಕೆಂದು ತಿಳಿಸಿ.
- ರಾಜಕೀಯ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ಸರ್ಕಾರ ಅಥವಾ ಪ್ರಧಾನ ಮಂತ್ರಿಯ ಮುಂದೆ ನಿಮ್ಮ ಪೋಸ್ಟ್ ಅಥವಾ ವಿಡಿಯೊ ಇತ್ಯಾದಿ. ಕಳುಹಿಸಬೇಡಿ
- ಪ್ರಸ್ತುತ ಯಾವುದೇ ರಾಜಕೀಯ ಅಥವಾ ರಾಜಕೀಯ ಪ್ರೇರಿತ ಧಾರ್ಮಿಕ ವಿಷಯದ ಬಗ್ಗೆ ಸಂದೇಶಗಳನ್ನು ಬರೆಯುವುದು ಅಥವಾ ಕಳುಹಿಸುವುದು ಅಪರಾಧವಾಗಿದೆ …. ಮತ್ತು ವಾರಂಟ್ ಇಲ್ಲದೆ ಬಂಧಿಸಲು ಬಹುದು.
- ಪೋಲೀಸ್ ಅಧಿಸೂಚನೆ ಹೊರಡಿಸಿ… ಸೈಬರ್ ಕ್ರೈಮ್ ನಂತರ… ಕ್ರಮ ತೆಗೆದುಕೊಳ್ಳಬಹುದಾದ ತುಂಬಾ ಗಂಭೀರವಾದ ಕ್ರಮವಾಗಿದೆ.
- ದಯವಿಟ್ಟು ನೀವೆಲ್ಲರೂ, ಗುಂಪಿನ ಸದಸ್ಯರು, ನಿರ್ವಾಹಕರು (ಅಡ್ಮೀನ್ ಗಳು)….ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ.
- ತಪ್ಪು ಅಥವಾ ರಾಜಕೀಯ ಪ್ರೇರಿತ ಸಂದೇಶಗಳನ್ನು ಕಳುಹಿಸದಂತೆ ಎಚ್ಚರವಹಿಸಿ ಮತ್ತು ಎಲ್ಲರಿಗೂ ತಿಳಿಸಿ ಮತ್ತು ನೀವು ಎಚ್ಚರದಿಂದಿರಿ.
- ದಯವಿಟ್ಟು ಇದನ್ನು ಹಂಚಿಕೊಳ್ಳಿ.
ಗುಂಪುಗಳು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜಾಗರೂಕರಾಗಿರಲೆಬೇಕು.
ಗುಂಪಿನ ಸದಸ್ಯರಿಗೆ WhatsApp ಕುರಿತು ಪ್ರಮುಖ ಮಾಹಿತಿ…
ವಾಟ್ಸ್ ಆಪ್ ನಲ್ಲಿ ಮಾಹಿತಿ
- ✔ಒಂದು ಬಿಳಿ= ಸಂದೇಶ ಕಳುಹಿಸಲಾಗಿದೆ
- ✔✔ಎರಡು ಬಿಳಿ = ಸಂದೇಶವನ್ನು ತಲುಪಿಸಲಾಗಿದೆ
- ಎರಡು ನೀಲಿ ✔✔ = ಸಂದೇಶ ಓದಿದ್ದಾರೆ
- ಮೂರು ನೀಲಿ ✔✔✔= ಸರಕಾರ ಸಂದೇಶವನ್ನು ಗಮನಿಸಿದೆ
- ಎರಡು ನೀಲಿ ಮತ್ತು ಒಂದು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು
- ✔✔✔= ಒಂದು ನೀಲಿ ಮತ್ತು ಎರಡು ಕೆಂಪು ಸರ್ಕಾರವು ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ
- ಮೂರು ಕೆಂಪು ✔✔✔= ಸರ್ಕಾರವು ನಿಮ್ಮ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಶೀಘ್ರದಲ್ಲೇ ನೀವು ನ್ಯಾಯಾಲಯದ ಸಮನ್ಸ್ ಪಡೆಯುತ್ತೀರಿ. ಅರ್ಥ ಮಾಡಿಕೊಳ್ಳಿ ಜವಾಬ್ದಾರಿಯುತ ನಾಗರಿಕರಾಗಿರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಎಂಬಂತಹ ಸಂದೇಶವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಚುನಾವಣೆ ಘೋಷಣೆಯಾಗುತ್ತಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರ ರಹಿತವಾದ ಹಲವು ಸುದ್ದಿಗಳು ಪ್ರಸಾರವಾಗುತ್ತಿರುತ್ತವೆ. ಚುನಾವಣಾ ಘೋಷಣೆಯ ಪೂರ್ವದಲ್ಲಿಯೂ ಇಂತಹ ಸಂದೇಶಗಳು ಚಾಲ್ತಿಯಲ್ಲಿದ್ದವು. ಈಗ ಇಂತಹ ಪ್ರಸ್ತಾಪವನ್ನು ಚುನಾವಣಾ ಆಯೋಗ ಪ್ರಕಟಣೆ ಮೂಲಕ ಆದೇಶಿಸಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಇಂತಹ ಸಂದೇಶಗಳು ವಾಟ್ಸಾಪ್ ಬಳಕೆದಾರರನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡುತ್ತವೆ. ವಾಟ್ಸಾಪ್ ಬಳಕೆ ಈಗ ಸಾಮಾನ್ಯ, ಹಾಗಾಗಿ ಪ್ರಸರಾವಾಗುತ್ತಿರುವ ಸಂದೇಶದ ಸತ್ಯಾಸತ್ಯತೆಗಳೇನು ಎಂದು ತಿಳಿದುಕೊಳ್ಳೋಣ.
ಮಾದರಿ ನೀತಿ ಸಂಹಿತೆ (MCC)ಯಲ್ಲಿ ನಾಗರೀಕರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ನಿರ್ದೇಶನಗಳನ್ನು ನೀಡಿಲ್ಲ ಅಥವಾ ಯಾವುದೇ ರೀತಿಯ ಕಾನೂನು ಕ್ರಮವನ್ನು ಸೂಚಿಸುವುದಿಲ್ಲ. ಮುಖ್ಯವಾಗಿ, MCCಯು ಶಾಸನಬದ್ಧ ಬೆಂಬಲವನ್ನು ಹೊಂದಿಲ್ಲ, ಅದನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ಕೋಡ್ನ ಯಾವುದೇ ಷರತ್ತಿನ ಅಡಿಯಲ್ಲಿ ಬಂಧಿಸಲಾಗುವುದಿಲ್ಲ ಎಂದು ಸೂಚಿಸುತ್ತದೆ. ಆದರೆ, ಸರ್ವೋಚ್ಚ ನ್ಯಾಯಾಲಯವು ನೀತಿ ಸಂಹಿತೆಯನ್ನು ಹಲವು ಸಂದರ್ಭಗಳಲ್ಲಿ ಎತ್ತಿ ಹಿಡಿದಿದೆ.
ಕಾನೂನು ಜಾರಿ ಸಂಸ್ಥೆಗಳು ಮತ್ತು ಸಂಬಂಧಿತ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ದುರುಪಯೋಗ ತಡೆಗಟ್ಟಲು ಮೇಲ್ವಿಚಾರಣೆ ಮಾಡುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹರಡುವ ತಪ್ಪು ಮಾಹಿತಿ ಮತ್ತು ಸುಳ್ಳು ನಿರೂಪಣೆಗಳನ್ನು ಎದುರಿಸಲು ಚುನಾವಣಾ ಆಯೋಗ ಸಿದ್ದತೆ ನಡೆಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಪರಿಚ್ಛೇದ 69 ಮತ್ತು 73 (ಬಿ) ನಲ್ಲಿ ವಿವರಿಸಿರುವ ನಿಬಂಧನೆಗಳ ಅಡಿಯಲ್ಲಿ ಸಾಮಾಜಿಕ ಮಾಧ್ಯಮವನ್ನು ಮೇಲ್ವಿಚಾರಣೆ ಮಾಡುವ ಕಾರ್ಯದಲ್ಲಿರುವ ರಾಜ್ಯದ ಅಧಿಕಾರಿಗಳಿಗೆ ಸುಳ್ಳು ಮತ್ತು ತಪ್ಪಾದ ಪೋಸ್ಟ್ಗಳನ್ನು ತೆಗೆದುಹಾಕಲು ಅಧಿಕಾರ ನೀಡಲಾಗುತ್ತದೆ.
ಇನ್ನು ಸಿಂಗಲ್ ಟಿಕ್, ಡಬ್ಬಲ್ ಟಿಕ್ ಮತ್ತು ಮೂರು ಟಿಕ್ಗಳಿಗೆ ಸಂಬಂಧಿಸಿದಂತೆ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಎಂದು ಈ ಹಿಂದೆ ಎಂದು ಪಿಐಬಿ ತಿಳಿಸಿತ್ತು.
✔✔ ಟಿಕ್ ಚಿಹ್ನೆಗೆ ಸಂಬಂಧಿಸಿದಂತೆ, ಕರೆಗಳನ್ನು ರೆಕಾರ್ಡಿಂಗ್ ಮಾಡಲಾಗುತ್ತದೆ ಮತ್ತು ಪ್ರತಿ ಸಂದೇಶಗ ಮೇಲೂ ನಿಗಾ ಇಡಲಾಗಿದೆ ಎಂದು ಹಂಚಿಕೊಳ್ಳಲಾದ ಸಂದೇಶಗಳ ಹಿನ್ನಲೆಯ ವಾಸ್ತವವೇನು ಎಂದು ಪರಿಶೀಲಿಸಿದಾಗ ವೈರಲ್ ಸಂದೇಶಲ್ಲಿ ಹೇಳಿರುವ ಅಂಶಗಳು ಫೇಕ್ ಎಂದು ಪಿಐಬಿ ಫ್ಯಾಕ್ಟ್ಚೆಕ್ ತಿಳಿಸಿದೆ.
#Fake News Alert !
Messages circulating on Social Media reading 'WhatsApp info regarding √ tick marks' is #FAKE.#PIBFactCheck : No! The Government is doing no such thing. The message is #FAKE.
Beware of rumours! pic.twitter.com/GAGEnbOLdY
— PIB Fact Check (@PIBFactCheck) April 7, 2020
✔✔✔ ನ ಫೀಚರ್ಸ್ ಇಲ್ಲವೇ ಇಲ್ಲ!
ಟಿಕ್ ಮಾರ್ಕ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ‘WhatsApp’ ವೆಬ್ಸೈಟ್ನಲ್ಲಿ ನೋಡಬಹುದು. FAQ ವಿಭಾಗದಲ್ಲಿ, ಒಂದೇ ಟಿಕ್ ಮಾರ್ಕ್ ಮತ್ತು ಎರಡು ಟಿಕ್ ಮಾರ್ಕ್ಗಳ ಬಗ್ಗೆ ಮಾಹಿತಿ ಇದೆ, ಆದರೆ ಅವರ ಪ್ಲಾಟ್ಫಾರ್ಮ್ನಲ್ಲಿ ಮೂರು ಟಿಕ್ ಮಾರ್ಕ್ಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಾಗಿ ವಾಟ್ಸಾಪ್ ನಲ್ಲಿ ಅಂತಹ ಯಾವುದೇ ಫೀಚರ್ ಇಲ್ಲ.
ಇನ್ನು ಸಂದೇಶಗಳ ವಿನಿಮಯಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿ ಇಲ್ಲಿಯ ಸಂದೇಶಗಳನ್ನು ಓದಲು ಸಾಧ್ಯವೇ ಎಂದು ಪರಿಶೀಲಿಸಲು ವೆಬ್ಸೈಟ್ ಸರ್ಚ್ ಮಾಡಿದಾಗ ಅಂತಹ ಸಾಧ್ಯತೆಗಳಿಲ್ಲ ಎಂದು ಉಲ್ಲೇಖಿಸಿದೆ.

ವಾಟ್ಸಾಪ್ನಲ್ಲಿನ ಸಂದೇಶಗಳನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ನೊಂದಿಗೆ ರಕ್ಷಿಸಲಾಗಿದೆ ಎಂದು ಕಂಡುಬಂದಿದೆ, ಆದ್ದರಿಂದ ಸರ್ಕಾರ ಮಾತ್ರವಲ್ಲ, ವಾಟ್ಆಪ್ ಕಂಪನಿಯ ಅಧಿಕಾರಿಗಳು ಸಹ ಅವುಗಳನ್ನು ಓದಲು ಸಾಧ್ಯವಾಗುವುದಿಲ್ಲ. ಆದರೆ, ಆ್ಯಪ್ನಲ್ಲಿನ ಸ್ಪೈವೇರ್ ಮತ್ತು ಭದ್ರತಾ ದೋಷವನ್ನು ಬಳಸಿಕೊಂಡು ಕೆಲವು ವ್ಯಕ್ತಿಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮೇ 2019 ರಲ್ಲಿ ವರದಿಯಾಗಿದೆ.
ಅಲ್ಲದೆ, ಸರ್ಕಾರದ ಏಜೆನ್ಸಿಗಳೊಂದಿಗೆ ವಾಟ್ಸಾಪ್ ಯಾವ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂದು ಅದರ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ, ಪ್ರೊಫೈಲ್ ಫೋಟೋ, ಗ್ರೂಪ್ ಇನ್ಫೋ ಮತ್ತು address book ವಿವರಗಳ ಮಾಹಿತಿಯನ್ನು ಮಾತ್ರ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಕಾರಣಿ ಮತ್ತು ಅಧಿಕಾರಿಗಳು ಏನು ಮಾಡಬಾರದು :
ಯಾವುದೇ ರಾಜಕಾರಣಿ ಪ್ರಚೋದನಕಾರಿ ಹೇಳಿಕೆಗಳನ್ನ ನೀಡಬಾರದು. ಕೋಮು ಸಂಘರ್ಷಕ್ಕೆ ಕಾರಣ ಆಗುವಂತಾ ಘೋಷಣೆ ಹೊರಡಿಸಬಾರದು. ಮತದಾರರಿಗೆ ಲಂಚ, ಆಮಿಷ, ಉಡುಗೊರೆ ನೀಡಬಾರದು. ಸರ್ಕಾರಿ ಕಚೇರಿ, ವಾಹನ ಸೇರಿದಂತೆ ಸಾರ್ವಜನಿಕ ಸ್ವತ್ತನ್ನು ರಾಜಕಾರಣಿಗಳು ಬಳಸಬಾರದು. ಸಾರ್ವಜನಿಕ ಶಾಂತಿ ಕದಡುವ ಕೆಲಸ ಮಾಡಬಾರದು. ಪೋಸ್ಟರ್, ಬ್ಯಾನರ್, ಕರಪತ್ರ ಸೇರಿದಂತೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಪಕ್ಷ ಹಾಗೂ ರಾಜಕಾರಣಿಗಳಿಗೆ ಸಮಾನ ಅವಕಾಶ ಸಿಗಬೇಕು. ಮಾಧ್ಯಮಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ಪರ ಪ್ರಕಟಣೆ ಇರಬಾರದು. ಚುನಾವಣಾ ಪ್ರಕ್ರಿಯೆಗಳು ಪಾರದರ್ಶಕವಾಗಿ ಇರಬೇಕು. ಚುನಾವಣಾ ಪ್ರಣಾಳಿಕೆ ಮತದಾರರನ್ನು ಪ್ರಭಾವಿಸುವಂತೆ ಇರಬಾರದು. ಸರ್ಕಾರಿ ಯೋಜನೆಗಳನ್ನ ರಾಜಕಾರಣಿಗಳು ಉದ್ಘಾಟನೆ ಮಾಡಬಾರದು. ಚುನಾವಣೆ ವೇಳೆ ಸರ್ಕಾರಿ ನೇಮಕಾತಿಗೆ ಹಲವು ನಿರ್ಬಂಧ ಹೇರಲಾಗಿದೆ. ಪೂಜಾ ಸ್ಥಳಗಳಲ್ಲಿ ಪ್ರಚಾರಕ್ಕೆ ಅವಕಾಶ ಇಲ್ಲ. ಮತಗಟ್ಟೆಯ 100 ಮೀಟರ್ ದೂರದವರೆಗೆ ಪ್ರಚಾರಕ್ಕೆ ಅವಕಾಶವಿಲ್ಲ. ಇನ್ನು ಹಣ ಹಂಚಿಕೆ ತಡೆಯಲು ತೀವ್ರ ನಿಗಾ ವಹಿಸಲಾಗಿದೆ.
ಜನ ಸಾಮಾನ್ಯರು ಏನು ಅನುಸರಿಸಬೇಕು :
ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದಂತೆ ಹೆಚ್ಚು ಚಿಂತೆಗೀಡಾಗುವುದು ಮದುವೆ ತಯಾರಿಯಲ್ಲಿರುವವರು. ಮದುವೆ ಕಾರ್ಯಕ್ರಮ ನಡೆಸಬೇಕಿದ್ದರೆ ಸರ್ಕಾರದಿಂದ ಅನುಮತಿ ಪಡೆಯೋದು ಕಡ್ಡಾಯವಾಗಿದೆ. ಮದುವೆ ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದಲ್ಲಿ ಸೀರೆ, ಬಟ್ಟೆ ಸಾಗಾಟ ಮಾಡುವಾಗ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಆಗ ಅದಕ್ಕೆ ದಾಖಲೆಗಳನ್ನು ತೋರಿಸಬೇಕು.
ಮದುವೆ ಮಾತ್ರವಲ್ಲ ಯಾವುದೇ ಜಾತ್ರೆ, ಸಮಾರಂಭ, ನಡೆಸೋದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಎಆರ್ಒಗಳ ಬಳಿ ಮೊದಲೇ ಅನುಮತಿ ಪಡೆಯಬೇಕಿದೆ. ಇನ್ನು ಈ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವಂತಿಲ್ಲ.
ಒಟ್ಟಾರೆಯಾಗ ಹೇಳುವುದಾದರೆ, WhatsApp ನಲ್ಲಿ ಯಾವುದೇ ‘ಮೂರು ಟಿಕ್ ಮಾರ್ಕ್ಸ್’ ವೈಶಿಷ್ಟ್ಯವಿಲ್ಲ. ಅಲ್ಲದೆ, ಸರ್ಕಾರವು ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಈ ಸಂದೇಶ 2019ರಿಂದಲೂ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆಯೇ?

