FACT CHECK | ಲೋಕಸಭೆ ಕಲಾಪದ ವೇಳೆ ನಿದ್ದೆ ಮಾಡಿದ್ರಾ ರಾಹುಲ್? ವೈರಲ್ ವಿಡಿಯೋದ ವಾಸ್ತವವೇನು?
ಇತ್ತೀಚೆಗೆ ನಡೆಯುತ್ತಿರುವ ಲೋಸಭೆಯ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ನಿದ್ದೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
This man sleeps during Parliament proceedings and debates and he wants to become Prime Minister of India.
Rahul Gandhi is just a Joke in Indian Politics. pic.twitter.com/paANOZnWv1
— Sunanda Roy (@SaffronSunanda) December 3, 2024
ಈ ವಿಡಿಯೋದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಭಾಷಣ ಮಾಡುವಾಗ ರಾಹುಲ್ ಗಾಂಧಿ ನಿದ್ರೆಗೆ ಜಾರಿರುವ ದೃಶ್ಯ ಇದೆ. ಈ ವಿಡಿಯೋವನ್ನು ಡಿಸೆಂಬರ್ 3ರಿಂದ ಹಲವು ಎಕ್ಸ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.
“ಈ ವ್ಯಕ್ತಿ ಸಂಸತ್ತಿನ ಕಲಾಪಗಳು ಮತ್ತು ಚರ್ಚೆಗಳ ಸಮಯದಲ್ಲಿ ನಿದ್ರಿಸುತ್ತಾನೆ. ಈತ ಭಾರತದ ಪ್ರಧಾನಿಯಾಗಲು ಬಯಸುತ್ತಾನೆ. ರಾಹುಲ್ ಗಾಂಧಿ ಭಾರತೀಯ ರಾಜಕೀಯದ ಜೋಕ್,” ಎಂದು ಬರೆದುಕೊಂಡಿರುವ ಸುನಂದಾ ರಾಯ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೆಂಕಟೇಶ್ ಬಂಗ್ ಎನ್ನುವ ಇನ್ನೋರ್ವ ಬಳಕೆದಾರರು, “ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷವನ್ನು ನಾಶಪಡಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಶಾಂತಿಯುತವಾಗಿ ಮಲಗಿದ್ದಾರೆ,” ಎಂದು ಲೇವಡಿ ಮಾಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಇದಲ್ಲದೆ ಇನ್ನೂ ಹಲವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ಹಲವು ವಿಡಿಯೋಗಳು ಲಭ್ಯವಾಗಿದೆ. ಈ ವರ್ಷದ ಆಗಸ್ಟ್ ತಿಂಗಳಿನದ್ದಾಗಿವೆ. ಈಗ ನಡೆಯುತ್ತಿರುವ ಸಂಸತ್ ಅಧಿವೇಶನಕ್ಕೂ ಈ ವಿಡಿಯೋಗೂ ಯಾವುದೇ ಸಂಬಂಧ ಇಲ್ಲ.
ವರದಿಗಳ ಪ್ರಕಾರ ಈ ಘಟನೆ ಆಗಸ್ಟ್ 8ರಂದು ನಡೆದ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ವಿಧೇಯಕ ಮಂಡಿಸುವಾಗ ರಾಹುಲ್ ಗಾಂಧಿ ಅವರು ಮಲಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್ 8ರಂದು ಮಾಡಲಾದ ಹಲವು ಟ್ವೀಟ್ಗಳೂ ಲಭ್ಯವಾಗಿದೆ..
ಒಟ್ಟಾರೆಯಾಗಿ ಹೇಳುವುದಾದದರೆ, ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಲಗಿದ್ದಾರೆ ಎನ್ನಲಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ವೈರಲ್ ವಿಡಿಯೋ ಹಳೆಯದಾಗಿದ್ದು, ಪ್ರಸ್ತುತ ಲೋಕಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭಕ್ಕೆ ಲಿಂಕ್ ಮಾಡಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಇಸ್ಕಾನ್ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಪರ ವಕಾಲತ್ತು ವಹಿಸಿದ ಮುಸ್ಲಿಂ ವಕೀಲನನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡಲಾಗಿದೆಯೇ?

