FACT CHECK | 76 ವರ್ಷದ ಮುಸ್ಲಿಂ ಮುದುಕ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದು ನಿಜವೇ?

ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಒಬ್ಬ ಹಿರಿಯ ವ್ಯಕ್ತಿ ಮತ್ತು ಹುಡುಗಿ ಎರಡು  ಕುರ್ಚಿಗಳ ಮೇಲೆ ಕುಳಿತಿರುವುದನ್ನು ಕಾಣಬಹುದು.

‘‘ಬಾಂಗ್ಲಾದೇಶ: 76 ವರ್ಷದ ಮೊಹಮ್ಮದ್ ರೋಜೋಬ್ ಅಲಿ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ವಿವಾಹವಾದರು. ಅವಳಿಗೆ ಯಾರೂ ಇಲ್ಲ; ಅವಳು ಅನಾಥೆ, ಹಾಗಾಗಿ ಅವಳನ್ನು ನನ್ನ ಹೆಂಡತಿಯಾಗಿ ಮಾಡಿಕೊಂಡೆ ಎಂದು ಮೊಹಮ್ಮದ್ ರೋಜಾಬ್ ಹೇಳಿದ್ದಾರೆ. ಇವರೆಲ್ಲ ಮೊದಲು ಮನೆಯವರನ್ನೆಲ್ಲ ಕೊಂದು ಆಮೇಲೆ ಅದೇ ರೀತಿ ಸಣ್ಣ ಪುಟ್ಟ ಮುಗ್ಧ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ’’ ಎಂದು ಎಕ್ಸ್‌ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಬಾಂಗ್ಲಾದೇಶದಲ್ಲಿ ಇಂತಹ ಗಟನೆ ನಿಜವಾಗಿಯೂ ನಡೆದಿದೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆಯಂತೆ ಬಾಂಗ್ಲಾದೇಶದಲ್ಲಿ 76 ವರ್ಷದ ಮುದುಕ 12 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಂಡ ಪೋಸ್ಟ್‌ಅನ್ನು ಪರಿಶೀಲಿಸಿದಾಗ  ಅಸಲಿಗೆ ಇದು ನಿಜವಾಗಿ ನಡೆದ ಘಟನೆಯೇ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಎಂದು ತಿಳಿದು ಬಂದಿದೆ.

ವೈರಲ್ ವಿಡಿಯೋದ ವಾಸ್ತವವನ್ನು ತಿಳಿಯಲು ವಿಡಿಯೋದ ಕೀಪ್ರೇಮ್‌ಗಳ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  26 ಸೆಪ್ಟೆಂಬರ್ 2024 ರಂದು MB TV ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಇದರಲ್ಲಿ ಸ್ಪಷ್ಟವಾಗಿ ಮನರಂಜನಾ ವಿಡಿಯೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಈ ಚಾನಲ್‌ನಲ್ಲಿ ಮಾಹಿತಿ ನೀಡಲಾಗಿದೆ.

ಇದಲ್ಲದೆ, Mkd bd Tv ಎಂಬ ಹೆಸರಿನ ಮತ್ತೊಂದು ಯೂಟ್ಯೂಬ್ ಚಾನಲ್‌ನಲ್ಲಿ ಇದೇ ವಿಡಿಯೋ ಲಭ್ಯವಾಗಿದೆ. ಇದೇ ಚಾಲೆಲ್​ನಲ್ಲಿ ಕಿರು ಚಿತ್ರಗಳು ಮತ್ತು ಮನರಂಜನಾ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಮನರಂಜನೆಗಾಗಿ ಈ ಎರಡೂ ಚಾನೆಲ್‌ಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ಇತರ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದನ್ನು ಕಾಣಬಹುದು. ಇದರಲ್ಲಿ ಕಾಣಿಸುವ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವವರು ಹಿರಿಯ ವಯಸ್ಸಿನವರೇ ಆಗಿದ್ದಾರೆ. ಒಂದು ವಿಡಿಯೋದ ಶೀರ್ಷಿಕೆಯಲ್ಲಿ ’95 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ’ ಎಂದು ಬರೆಯಲಾಗಿದೆ.

ಇತ್ತೀಚೆಗಷ್ಟೆ ತಂದೆ-ಮಗಳ ಮದುವೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ವೈರಲ್ ಆಗಿತ್ತು. ಮಗಳು ಹೆಂಡತಿಯಾದಳು! ತಂದೆ ಪತಿಯಾದರು! ಹಿಂದಿ-ಭಾರತೀಯರಲ್ಲಿ ಇದು ಸಾಮಾನ್ಯ ಸಂಗತಿಯೇ? ಅವರು ಬಿಹಾರಿಗಳೇ? ಎಂಬ ಪೋಸ್ಟ್ ಈ ವಿಡಿಯೋದೊಂದಿಗೆ ವೈರಲ್ ಆಗಿತ್ತು. ಆದರೆ, ಇದು ಕೂಡ ಸ್ಕ್ರಿಪ್ಟ್ ಮಾಡಲಾದ ವಿಡಿಯೋ ಆಗಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆ ಸುಳ್ಳು. ವಾಸ್ತವವಾಗಿ ಈ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದ್ದು, ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ವಿಡಿಯೋದಲ್ಲಿ ಡಿಸ್‌ಕ್ಲೈಮರ್‌ನಲ್ಲಿ ತಿಳಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಎಡಿಟ್ ಮಾಡಿದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights