FACT CHECK | 6 ಜನ ಮುಸ್ಲಿಂ ಅಣ್ಣಂದಿರು ತಮ್ಮ ಸ್ವಂತ ಸಹೋದರಿಯರನ್ನು ಮದುವೆಯಾಗಿದ್ದಾರೆ ಎಂಬುದು ನಿಜವೇ?

6 ನವ ಜೋಡಿಗಳು ಮದು ಮಕ್ಕಳಂತೆ ಸಿಂಗಾರಗೊಂಡಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ವಧು-ವರರಂತೆ ಕಾಣಿಸಿಕೊಂಡಿರುವ 6 ಮಂದಿ ನಿಜವಾದ ಸಹೋದರರು ತಮ್ಮ 6 ಸಹೋದರಿಯರನ್ನು ವಿವಾಹವಾಗಿದ್ದಾರೆ ಎಂಬ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಸಾಮೂಹಿಕ ವಿವಾಹದ ಈ ಫೋಟೋ ಪಾಕಿಸ್ತಾನದ್ದು ಎಂದು ಹೇಳಲಾಗಿದೆ.

‘‘6 ಮುಸ್ಲಿಂ ಸಹೋದರರು ತಮ್ಮ ಸ್ವಂತ 6 ಮುಸ್ಲಿಂ ಸಹೋದರಿಯರನ್ನು ವಿವಾಹವಾಗಿದ್ದಾರೆ. ಇದು ಇಸ್ಲಾಮಿನ ಸೌಂದರ್ಯವೇ? ತನ್ನ ಸ್ವಂತ ಸಹೋದರಿಯರನ್ನು ಮದುವೆಯಾಗುವ ಯಾವುದೇ ಧರ್ಮ ಅಥವಾ ಧರ್ಮವು ಜಗತ್ತಿನಲ್ಲಿ ಇರುವುದಿಲ್ಲ, ಅದು ಕೂಡ 6 ಸಹೋದರರು ಮತ್ತು 6 ಸಹೋದರಿಯರನ್ನು ಮದುವೆಯಾಗೋದು’’ ಎಂದು ಬರೆದುಕೊಂಡು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

6  ಮುಸ್ಲಿಂ ಸಹೋದರರು ತಮ್ಮ ಸ್ವಂತ 6 ಮುಸ್ಲಿಂ ಸಹೋದರಿಯರನ್ನು ವಿವಾಹವಾಗಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಕೀವರ್ಡ್‌ ಸಹಾಯದಿಂದ ಗೂಗಲ್​ನಲ್ಲಿ ಸರ್ಚ್ ಮಾಡಿದಾಗ, ಪಾಕಿಸ್ತಾನಿ ಮಾಧ್ಯಮಗಳು ಈ ಕುರಿತು ಮಾಡಿರುವ ವರದಿಗಳು ಲಭ್ಯವಾಗಿದೆ.

ಜನವರಿ 8, 2025 ರ Express.pk ವರದಿಯ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೀರ್ವಾಲಾ, ಜಲಾಲ್‌ಪುರ ಪ್ರದೇಶದಲ್ಲಿ 6 ಸಹೋದರರು ಇನ್ನೊಂದು ಒಂದೇ ಕುಟುಂಬದ 6 ಸಹೋದರಿಯರನ್ನು ಸರಳ ಸಮಾರಂಭದಲ್ಲಿ ವಿವಾಹವಾದರು ಎಂದು ವರದಿಯಾಗಿದೆ. ಮದುವೆಯ ವೆಚ್ಚವನ್ನು ಕಡಿಮೆ ಮಾಡಲು ಸಾಮೂಹಿಕ ಮದುವೆಯನ್ನು ಮಾಡಲಾಯಿತು. ಈ ವಿವಾಹಕ್ಕೆ 1 ಲಕ್ಷ ಪಾಕಿಸ್ತಾನಿ ರೂಪಾಯಿ ವೆಚ್ಚವಾಗಿದೆ. ವಧುವಿನ ಕುಟುಂಬಕ್ಕೆ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ನಾವೇ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಮತ್ತು ಯಾವುದೇ ವರದಕ್ಷಿಣೆ ತೆಗೆದುಕೊಳ್ಳಲಿಲ್ಲ ಎಂದು ವರ ಕಮ್ರಾನ್ ಅಬ್ಬಾಸ್ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದು ವರದಿಯ ಪ್ರಕಾರ, ಮುಲ್ತಾನ್ ನಗರದ ದಕ್ಷಿಣಕ್ಕೆ ಸುಮಾರು 90 ಕಿಮೀ ದೂರದಲ್ಲಿರುವ ಜಲಾಲ್‌ಪುರ ಪೀರ್‌ವಾಲಾದಲ್ಲಿ ಈ ಸಾಮೂಹಿಕ ವಿವಾಹ ನಡೆದಿದೆ ಎಂದು ಈ ವರದಿಗಳಲ್ಲಿ ಹೇಳಲಾಗಿದೆ. ಮದುವೆಯ ಮೇಲಿನ ದುಂದು ವೆಚ್ಚವನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ವಧು-ವರರ ನಡುವಿನ ಪರಸ್ಪರ ಸಂಬಂಧದ ಬಗ್ಗೆ, ಎಲ್ಲಾ ಆರು ಸಹೋದರಿಯರು ಒಂದೇ ಕುಟುಂಬದವರು ಆದರೆ, ನಿಜವಾದ ಸಹೋದರಿಯರಲ್ಲ ಎಂದು ಹೇಳಲಾಗಿದೆ. ಮತ್ತೊಂದೆಡೆ, ಆರು ಸಹೋದರರು ಸಹ ಸಂಬಂಧ ಹೊಂದಿಲ್ಲ, ಅವರು ಒಂದೇ ಕುಟುಂಬಕ್ಕೆ ಸೇರಿದವರಷ್ಟೆ. ಅಂದರೆ, ಆರು ಸಹೋದರಿಯರು ಒಂದೇ ತಾಯಿಯ ಹೊಟ್ಟೆಯಿಂದ ಜನಿಸಿದವರಲ್ಲ. ಅವರ ನಡುವೆ ಅಣ್ಣ-ತಂಗಿ ಸಂಬಂಧ ಇದೆ, ಆದರೆ ಅವರು ರಕ್ತ ಸಂಬಂಧಿಗಳಲ್ಲ ಎಂದು ಹೇಳಲಾಗಿದೆ.

ಜನವರಿ 8, 2025 ರಂದು ಟಿವಿ9 ಕನ್ನಡ ಈ ಕುರಿತು ಸುದ್ದಿ ಪ್ರಕಟಿಸಿದ್ದು, ಒಟ್ಟಿಗೆ ಮದುವೆಯಾಗುವುದರಿಂದ ಖರ್ಚು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ಸಹೋದರಿಗೆ 18 ವರ್ಷ ತುಂಬುವವರೆಗೂ ಕಾದು ಎಲ್ಲರೂ ಒಟ್ಟಿಗೆ ವಿವಾಹವಾಗಿದ್ದಾರೆ. ಈ ಮದುವೆಗೆ ಯಾರೂ ವರದಕ್ಷಿಣೆ ತೆಗೆದುಕೊಂಡಿಲ್ಲ, ಪಾಕಿಸ್ತಾನದ ಮುಲ್ತಾನ್​ನಲ್ಲಿ ಈ ಘಟನೆ ನಡೆದಿದೆ. ವಧು-ವರರು ಸೋದರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ. ಈ ಸಾಮೂಹಿಕ ವಿವಾಹಕ್ಕೆ ಕೇವಲ 1 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚಾಗಿದೆ. ಭಾರತೀಯ ಕರೆನ್ಸಿಯಲ್ಲಿ ನೋಡಿದರೆ ಈ ಮೊತ್ತ ಕೇವಲ 30,000 ರೂ. ಆಗಿದೆ. ಇದೇ ವೇಳೆ ವರನ ತಂದೆಯನ್ನು ಈ ವಿಚಾರವಾಗಿ ಮಾತನಾಡಿಸಿದಾಗ, ಕೆಲವು ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇಂತಹ ಘಟನೆಗಳು ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರು ಎಂಬುದನ್ನು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದದರೆ, ಮದುವೆಯ ಖರ್ಚು ಕಡಿಮೆ ಮಾಡವ ಉದ್ದೇಶದಿಂದ, ಪಾಕಿಸ್ತಾನದಲ್ಲಿ 6 ಸಹೋದರರು ಇನ್ನೊಂದು ಒಂದೇ ಕುಟುಂಬದ 6 ಸಹೋದರಿಯರನ್ನು ಸರಳ ಸಮಾರಂಭದಲ್ಲಿ ಮದುವೆಯದ ಘಟನೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಫುಡ್‌ ಡೆಲಿವರಿ ಯುವತಿಯ ಮೇಲೆ ಅತ್ಯಾಚಾರ ಎಂದು ಸ್ಕ್ರಿಪ್ಟ್‌ ಮಾಡಿದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights