FACT CHECK | ಹೋಳಿ ಹಬ್ಬದಲ್ಲಿ ಕಲ್ಲು ತೂರಿದ ಮುಸ್ಲಿಂ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು ನಿಜವೇ?
ಹೋಳಿ ಹಬ್ಬದ ಸಂದರ್ಭದಲ್ಲಿ ಕಲ್ಲು ತೂರಿದ ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಲಾಠಿಯಿಂದ ಹೊಡೆಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ನಿರೂಪಣೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಮಾರ್ಚ್ 15, 2025 ರಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗುಜರಾತ್ ಪೊಲೀಸರು ಹೋಳಿ ಹಬ್ಬದಲ್ಲಿ ಕಲ್ಲು ಎಸೆದ ದುಷ್ಕರ್ಮಿಗಳಿಗೆ ಆಂಟಿಡೋಸ್ ಕೊಡ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive) ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ Live Mint ಮಾರ್ಚ್ 15, 2025 ರಂದು ‘‘ಗುಜರಾತ್ ಪೊಲೀಸರು ಅಹಮದಾಬಾದ್ನಲ್ಲಿ ಗೂಂಡಾಗಳನ್ನು ಥಳಿಸಿದ್ದಾರೆ’’ ಎಂಬ ಶೀರ್ಷಿಕೆದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಗುರುವಾರ ಅಹಮದಾಬಾದ್ನ ವಸ್ತ್ರಲ್ ಪ್ರದೇಶದಲ್ಲಿ ಕೆಲವರ ಮೇಲೆ ಹಲ್ಲೆ ನಡೆಸಿ, ವಾಹನಗಳನ್ನು ಕೋಲು ಮತ್ತು ಕತ್ತಿಗಳಿಂದ ಧ್ವಂಸ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಗೂಂಡಾಗಳನ್ನು ಥಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹೋಳಿ ಆಚರಣೆಗೆ ಒಂದು ದಿನ ಮೊದಲು, ಮಾರ್ಚ್ 13 ರಂದು, ಪ್ರತ್ಯಕ್ಷದರ್ಶಿಯೊಬ್ಬರು ಚಿತ್ರೀಕರಿಸಿದ ವೀಡಿಯೊದಲ್ಲಿ, 20 ಜನರ ಗುಂಪೊಂದು ಎಸ್ಯುವಿ ಮಾಲೀಕರ ಮೇಲೆ ದಾಳಿ ಮಾಡಿ ಸುತ್ತಮುತ್ತಲಿನ ಇತರ ವಾಹನಗಳಿಗೆ ಕತ್ತಿ ಮತ್ತು ಕೋಲುಗಳನ್ನು ಬಳಸಿ ಹಾನಿಗೊಳಿಸುವುದನ್ನು ತೋರಿಸಲಾಗಿದೆ. ಘಟನೆಯ ನಂತರ, ಇದುವರೆಗೆ ಕನಿಷ್ಠ 14 ಜನರನ್ನು ಬಂಧಿಸಲಾಗಿದೆ’’ ಎಂದು ಬರೆಯಲಾಗಿದೆ.
ಹಾಗೆಯೆ ಉಪ ಪೊಲೀಸ್ ಆಯುಕ್ತ ಬಲದೇವ್ ದೇಸಾಯಿ ಅವರು ಪಿಟಿಐಗೆ ನೀಡಿದ ಮಾಹಿತಿಯನ್ನು ಮಿಂಟ್ ಕೋಟ್ ಮಾಡಿದ್ದು, ‘‘ವಸ್ತ್ರಲ್ ಪ್ರದೇಶದ ವಾಣಿಜ್ಯ ಸಂಕೀರ್ಣದ ಬಳಿ ಆಹಾರ ಮಳಿಗೆ ತೆರೆಯುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ದ್ವೇಷದ ಪರಿಣಾಮವಾಗಿ ಈ ಹಿಂಸಾಚಾರ ನಡೆದಿದೆ. ಪಂಕಜ್ ಭಾವಸರ್ ಎಂಬುವರು ತಮ್ಮ ಪ್ರತಿಸ್ಪರ್ಧಿ ಸಂಗ್ರಾಮ್ ಸಿಕಾರ್ವಾರ್ ಪ್ರದೇಶದಲ್ಲಿ ಆಹಾರ ಮಳಿಗೆ ತೆರೆಯಲು ಅವಕಾಶ ನೀಡದಿದ್ದಕ್ಕಾಗಿ ದ್ವೇಷ ಹೊಂದಿದ್ದರು’’ ಎಂದು ಅವರು ಹೇಳಿದ್ದಾರೆ.

ಇದೇವೇಳೆ ನಮಗೆ Free Press Journal ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಮಾರ್ಚ್ 15, 2025 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ‘‘ಕೆಲವು ದಿನಗಳ ಹಿಂದೆ ಸಿಕಾರ್ವಾರ್ ಜೈಲಿನಿಂದ ಬಿಡುಗಡೆಯಾಗಿದ್ದಾನೆಂದು ತಿಳಿದ ನಂತರ, ಭಾವಸರ್ ತನ್ನ ಸಹಚರರನ್ನು ಅವನ ಮೇಲೆ ದಾಳಿ ಮಾಡಲು ಕಳುಹಿಸಿದ್ದಾಗಿ ವರದಿಯಾಗಿದೆ. ಆದಾಗ್ಯೂ, ಸಿಕಾರ್ವಾರ್ ಅವರ ನಿವಾಸದಲ್ಲಿ ಇಲ್ಲದಿದ್ದಾಗ, ದಾಳಿ ಮಾಡಲು ಬಂದಿದ್ದ ಗುಂಪು ಇತರೆ ಜನರ ಮೇಲೆ ಹಲ್ಲೆ ನಡೆಸಿದೆ ಮತ್ತು ವಾಹನಗಳಿಗೆ ಹಾನಿ ಮಾಡಿದೆ. ಅಂತಿಮವಾಗಿ ಸ್ಥಳೀಯ ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸ್ ತಂಡವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಎಸ್ಯುವಿ ಮಾಲೀಕರ ದೂರಿನ ಮೇರೆಗೆ, ಅಧಿಕಾರಿಗಳು ಗಲಭೆ, ಕೊಲೆಯತ್ನ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ, ಅದರ ನಂತರ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ 14 ಜನರನ್ನು ಬಂಧಿಸಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಹಾಗೆಯೆ ‘‘ಘಟನೆಯ ನಂತರ, ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ದೃಶ್ಯಾವಳಿಗಳಲ್ಲಿ, ಅಧಿಕಾರಿಗಳು ಯುವಕನನ್ನು ಬಂಧಿಸುವಾಗ ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದು. ಆರೋಪಿಗಳ ವಿರುದ್ಧ ಅಧಿಕಾರಿಗಳು ಅತಿಯಾದ ಬಲಪ್ರಯೋಗ ಮಾಡುತ್ತಿರುವುದನ್ನು ವೀಡಿಯೊಗಳು ತೋರಿಸಿದ್ದರಿಂದ, ಪೊಲೀಸರ ನಡವಳಿಕೆಯ ಬಗ್ಗೆ ವಿವಾದವನ್ನು ಹುಟ್ಟುಹಾಕಿತು’’ ಎಂದು ಬರೆಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ವರದಿಯನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹೋಳಿ ಹಬ್ಬದ ಸಂದರ್ಭ ಕಲ್ಲು ಎಸೆದವನಿಗೆ ಪೊಲೀಸರು ಹೊಡೆದಿದ್ದಾರೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು . ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರಂಜಾನ್ ಮಾಸದಲ್ಲಿ ಹಿಜಾಬ್ ಧರಿಸಿರುವ ಬಾಲಿವುಡ್ ನಟಿಯರ ಫೋಟೊ ವೈರಲ್! ವಾಸ್ತವವೇನು

