FACT CHECK | ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬ ವಿಡಿಯೋದ ಅಸಲೀಯತ್ತೇನು?
ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬ 28 ಸೆಕೆಂಡ್‌ಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, ಘಟಕವೊಂದು ಸ್ಫೋಟಗೊಳ್ಳುವುದು ಕಾಣಿಸುತ್ತದೆ.
![]()
ಇರಾನ್‌ನಲ್ಲಿ ಅಣ್ವಸ್ತ್ರ ಘಟಕವನ್ನು ಧ್ವಂಸ ಮಾಡಿದ ಇಸ್ರೇಲ್ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿದಾಗ, ಯೂಟ್ಯೂಬ್ ನಲ್ಲಿ ವೀಡಿಯೋ ಒಂದು ಕಂಡುಬಂದಿದ್ದು, ಇದು ಚೀನದ ವೀಡಿಯೋ ಎಂದು ಹೇಳಿದೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಚೀನದಲ್ಲಿ ರಾಸಾಯನಿಕ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ದುರಂತವಾಗಿದೆ. ಇದು ಇಸ್ರೇಲ್ ದಾಳಿಯ ವೀಡಿಯೋ ಅಲ್ಲ ಎಂದು ತಿಳಿಸಿದೆ.
2015 ನವೆಂಬರ್ 19ರಂದು Ahmed Treiban ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಆದ ವಿಡಿಯೋದಲ್ಲಿ ವೈರಲ್ ವಿಡಿಯೋ ಹೋಲುವ ದೃಶ್ಯಗಳಿದ್ದು, ಚೀನಾದ ಕೆಮಿಕಲ್ ಪ್ಲಾಂಟ್ ಸ್ಫೋಟ ಎಂಬ ಶೀರ್ಷಿಕೆ ಇದೆ. ಈ ಕುರಿತು ಹೆಚ್ಚಿನ ಶೋಧನೆ ನಡೆಸಿದಾಗ, 2015 ನವೆಂಬರ್ 26ರಂದು ಮಿರರ್ ವರದಿ ಲಭ್ಯವಾಗಿದೆ.
![]()
“ಚೀನಾದ ರಾಸಾಯನಿಕ ಸ್ಥಾವರದಲ್ಲಿ ಮತ್ತೊಂದು ದೊಡ್ಡ ಸ್ಫೋಟ ಸಂಭವಿಸಿದೆ. ಝೆಜಿಯಾಂಗ್ ಪ್ರಾಂತ್ಯದ ಕಾರ್ಖಾನೆಯೊಂದು ದೈತ್ಯ ಬೆಂಕಿಯ ಉಂಡೆಯಾಗಿ ಸ್ಫೋಟಗೊಳ್ಳುವ ಕ್ಷಣದ ಅದ್ಭುತ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮೊದಲಿಗೆ ಕ್ಲಿಪ್ ಕಟ್ಟಡವು ಹೊತ್ತಿ ಉರಿಯುತ್ತಿರುವುದನ್ನು ತೋರಿಸುತ್ತದೆ, ತುರ್ತು ಸೈರನ್‌ಗಳ ಶಬ್ದದ ನಡುವೆ ಛಾವಣಿಯ ಮೇಲೆ ಹೊತ್ತಿಕೊಂಡ ಜ್ವಾಲೆಗಳನ್ನು ನಂದಿಸಲು ಅಗ್ನಿಶಾಮಕ ಕೊಳವೆಗಳು ಪ್ರಯತ್ನಿಸುತ್ತಿವೆ. ಇದ್ದಕ್ಕಿದ್ದಂತೆ ಇಡೀ ಕಟ್ಟಡವು ಕಿವಿಗಡಚಿಕ್ಕುವಷ್ಟು ಸ್ಫೋಟದೊಂದಿಗೆ ಮೇಲಕ್ಕೆ ಏರುತ್ತದೆ, ದೊಡ್ಡ ಜ್ವಾಲೆಗಳು ಮತ್ತು ಕಪ್ಪು ಹೊಗೆ ಆಕಾಶಕ್ಕೆ ಹಾರುತ್ತದೆ. ಈ ವಿಡಿಯೋವನ್ನು ರಾಸಾಯನಿಕ ಸ್ಥಾವರದ ಮೇಲಿರುವ ಬಾಲ್ಕನಿಯಿಂದ ಮತ್ತು ತುಂಬಾ ಹತ್ತಿರದಿಂದ ಚಿತ್ರೀಕರಿಸಲಾಗಿದೆ ಎಂದಿದೆ.”
![]()
2015 ನವೆಂಬರ್ 30ರ ಮ್ಯಾನ್ಯುಫ್ಯಾಕ್ಚರಿಂಗ್ ನೆಟ್ ವರದಿ ಪ್ರಕಾರ, “ಕಳೆದ ವಾರ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊವುದೇಶದ ರಾಸಾಯನಿಕ ವಲಯವನ್ನು ಬೆಚ್ಚಿಬೀಳಿಸಿದ ಮಾರಕ ಸ್ಫೋಟಗಳ ಕೆಲವೇ ವಾರಗಳ ನಂತರ ಚೀನಾದ ರಾಸಾಯನಿಕ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿದೆ ಎಂದು ಹೇಳುತ್ತದೆ. 52 ಸೆಕೆಂಡುಗಳ ಈ ಕ್ಲಿಪ್, ಸ್ಥಾವರದ ಮೇಲಿರುವ ವೇದಿಕೆಯಿಂದ ದೃಶ್ಯಗಳನ್ನು ತೋರಿಸುತ್ತದೆ, ಇದು ಚೀನಾದ ಮಧ್ಯ ಕರಾವಳಿಯ ಝೆಜಿಯಾಂಗ್ ಪ್ರಾಂತ್ಯದಲ್ಲಿದೆ ಎಂದು ವರದಿಯಾಗಿದೆ.” ಎಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇರಾನ್ ನಲ್ಲಿ ಅಣ್ವಸ್ತ್ರ ಘಟಕವನ್ನು ಇಸ್ರೇಲ್ ಧ್ವಂಸ ಮಾಡಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡ ವಿಡಿಯೋ ವಾಸ್ತವವಾಗಿ ಚೀನಾದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದ್ದಾಗಿದೆ ಎಂದು ದೃಢಪಟ್ಟಿದೆ. ಹಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ FACT CHECK | ಬಾಂಗ್ಲಾದೇಶದ ಧ್ವಜ ಮಾರುತ್ತಿದ್ದ ವ್ಯಕ್ತಿ ಮೇಲೆ ಭಾರತೀಯ ಸೈನಿಕನಿಂದ ಹಲ್ಲೆ ನಡೆದಿದೆಯೇ?

