FACT CHECK | ಲವ್ ಜಿಹಾದ್ ಎಂದು ಸಂಬಂಧವಿಲ್ಲದ ಹಳೆಯ ವಿಡಿಯೋ ಹಂಚಿಕೆ

ವ್ಯಕ್ತಿಯೊಬ್ಬ ಯುವತಿಯನ್ನು ಮನಬಂದಂತೆ ಥಳಿಸಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ, ಪುರುಷ ಮೊದಲು ಮಹಿಳೆಗೆ ಕಪಾಳಮೋಕ್ಷ ಮಾಡಿ ನಂತರ ಆಕೆಯ ಮುಖ ಮತ್ತು ದೇಹಕ್ಕೆ ಒದ್ದು ಗುದ್ದುತ್ತಾನೆ. ದೃಶ್ಯದ ಕೊನೆಯಲ್ಲಿ, ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಘಟನೆ ಲವ್ ಜಿಹಾದ್ ಪ್ರಕರಣವಾಗಿದೆ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಲವ್ ಜಿಹಾದ್​ಗೆ ಬಲಿಯಾದ ಹಿಂದೂ ಹೆಣ್ಣುಮಗಳ ಪರಿಸ್ಥಿತಿ ನೋಡಿ. ಎಚ್ಚರ ಹಿಂದೂ, ಪೋಷಕರೇ ಮತ್ತು ಸಹೋದರರೇ ನಿಮ್ಮ ಹೆಣ್ಣುಮಕ್ಕಳ ಬಗ್ಗೆ ಜಾಗ್ರತೆ ಇರಲಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು, ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 25 ಡಿಸೆಂಬರ್ 2022 ರಂದು ಆಜ್ ತಕ್ ವೈರಲ್ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

ಸುದ್ದಿ ವರದಿಯ ಪ್ರಕಾರ, ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮೌಗಂಜ್ ಪ್ರದೇಶದ 19 ವರ್ಷದ ಬಾಲಕಿಯನ್ನು ಆಕೆಯ ಪ್ರಿಯಕರ ಪಂಕಜ್ ತ್ರಿಪಾಠಿ ಕ್ರೂರವಾಗಿ ಥಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸರು 24 ವರ್ಷದ ತ್ರಿಪಾಠಿಯನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಕ್ಲಿಪ್ ಅನ್ನು ಚಿತ್ರೀಕರಿಸಿದ ಹುಡುಗ ಭರತ್ ಸಾಕೇತ್ ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಬರೆಯಲಾಗಿದೆ.

25 ಡಿಸೆಂಬರ್ 2022 ರಂದು ಎನ್​ಡಿಟಿವಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ವರದಿ ಮಾಡಿದ್ದು, “ಯುವಕ ಮತ್ತು ಮಹಿಳೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದರು. ಯುವಕ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದನು ಆದರೆ ಹುಡುಗಿಯ ಸಂಬಂಧಿಕರು ಒಪ್ಪುತ್ತಿರಲಿಲ್ಲ, ಆದ್ದರಿಂದ ಅವಳು ಕೂಡ ಆತನನ್ನು ಮದುವೆಯಾಗಲು ನಿರಾಕರಿಸಿದಳು. ಇದು ಯುವಕನ ಕೋಪಕ್ಕೆ ಕಾರಣವಾಗಿ ಆಕೆಗೆ ಹೊಡೆದಿದ್ದಾನೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ಇಂಡಿಯಾ ವರದಿ ಮಾಡಿದೆ.

25 ಡಿಸೆಂಬರ್ 2022 ರಂದು ಎಬಿಪಿ ಲೈವ್ ಪ್ರಕಟಿಸಿದ ವರದಿಯಲ್ಲಿ, ‘‘19 ವರ್ಷದ ಮಹಿಳೆಯನ್ನು ಥಳಿಸಿದ ಆರೋಪದ ಮೇಲೆ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧೇರಾದಲ್ಲಿರುವ ತಮ್ಮ ಊರಿಗೆ ಹೋಗುತ್ತಿದ್ದಾಗ, ಆರೋಪಿ ಪಂಕಜ್ ತ್ರಿಪಾಠಿ ದಾರಿಯಲ್ಲಿ ಆಕೆಯನ್ನು ತೀವ್ರವಾಗಿ ಥಳಿಸಿದ್ದಾನೆ. ಈ ಪ್ರಕರಣದಲ್ಲಿ ಮೌಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ, ಆರೋಪಿ ಪಂಕಜ್ ತ್ರಿಪಾಠಿಯನ್ನು ಬಂಧಿಸಲಾಗಿದೆ’’ ಎಂದು ಬರೆಯಲಾಗಿದೆ.

ಇತರೆ ಹಲವಾರು ಮಾಧ್ಯಮ ವರದಿಗಳಲ್ಲಿ ಆರೋಪಿಯನ್ನು ಪಂಕಜ್ ತ್ರಿಪಾಠಿ ಎಂದು ಗುರುತಿಸಿರುವುದನ್ನು ನೀವು  ಇಲ್ಲಿ,  ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದ ರೇವಾದಲ್ಲಿ ಪಂಕಜ್ ತ್ರಿಪಾಠಿ ಎಂಬ ವ್ಯಕ್ತಿ ತನ್ನ 19 ವರ್ಷದ ಗೆಳತಿಯನ್ನು ಕ್ರೂರವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೋವನ್ನು ಬಳಕೆದಾರರು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಆದರೆ ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬ್ರಾಹ್ಮಣ ಹೆಣ್ಣುಮಕ್ಕಳನ್ನು ವಂಚಿಸಲು ಮುಸ್ಲಿಂ ಯುವಕನೊಬ್ಬ Brahmin_Unity ಎಂಬ ಫೇಸ್‌ಬುಕ್ ಪೇಜ್‌ ತೆರೆದಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights