ಅಳಿದು ಉಳಿದವರು ಟ್ರೈಲರ್ ರಿಲೀಸ್ : ಟಿವಿ ಶೋವೊಂದರ ತಾಕಲಾಟಗಳನ್ನು ತೆರೆದಿಡುವ ಚಿತ್ರ
ಹೊಸ ನಿರ್ದೇಶಕರ ಪ್ರಯತ್ನದ ಚಿತ್ರ ಅಳಿದು ಉಳಿದವರು ಟ್ರೈಲರ್ ಬುಧವಾರ, ನ.20 ರ ಸಂಜೆ ಬಿಡುಗಡೆಯಾಗಿದೆ. ನಿರ್ದೇಶಕ, ನಟ ಪವನ್ ಕುಮಾರ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟ್ರೈಲರ್ ಅನಾವರಣಗೊಳಿಸಿದ್ದಾರೆ.
ನಿರ್ಮಾಪಕ ಅಶು ಬೆದ್ರ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿರುವ ಅಳಿದು ಉಳಿದವರು ಚಿತ್ರವು ಒಂದು ಪ್ರಸಿದ್ಧ ಟಿವಿ ವಾಹಿನಿಯ ಕಾರ್ಯಕ್ರಮದ ಸುತ್ತ ಸುತ್ತುತ್ತದೆ. ಕಾರ್ಯಕ್ರಮದ 100ನೇ ಸಂಚಿಕೆಯನ್ನು ರೂಪಿಸಲು ಎದುರಾಗುವ ತೊಂದರೆಗಳು, ವಾಹಿನಿಯ ಟಿಆರ್ ಪಿಗಾಗಿ ಪಡುವ ಪಾಡು ಇವುಗಳನ್ನೆಲ್ಲ ಭಾವನೆಗಳ ಏರಿಳಿತಗಳೊಂದಿಗೆ ಚಿತ್ರವು ನಿರೂಪಿತವಾಗುತ್ತದೆ.
ಟ್ರೈಲರ್ ನಲ್ಲಿ ಏನಿದೆ?
ಸ್ಕ್ರಿಪ್ ಬರೆಯುವ ದೃಶ್ಯದ ಮೂಲಕ ಪ್ರಾರಂಭವಾಗುವ ಟ್ರೈಲರ್ ವಾಹಿನಿಯ ಕಾರ್ಯಕ್ರಮವನ್ನು ರೂಪಿಸಲು ಎದುರಾಗುವ ಸವಾಲುಗಳು, ನಾಯಕನ ತಾಕಲಾಟ, ಎರಡು ದೃಶ್ಯಗಳಲ್ಲಿ ನಾಯಕಿಯ ಹಿತ ನುಡಿಗಳು, 100ನೇ ಸಂಚಿಕೆಯನ್ನು ತಯಾರಿಸಲು ನಡೆಸುವ ಸಿದ್ಧತೆಗಳು ಇವುಗಳನ್ನು ಟ್ರೈಲರ್ ತೆರೆದಿಡುತ್ತದೆ. ಟ್ರೈಲರ್ ಹೆಚ್ಚು ವಾಹಿನಿಯ ಕಾರ್ಯಕ್ರಮದ ಸಿದ್ಧತೆಯನ್ನು ಹೆಚ್ಚು ತೋರಿಸುತ್ತದೆ. ಆಕರ್ಷಕ ಶೀರ್ಷಿಕೆಯ ಮೂಲಕ ಭಾವನೆಗಳ ಏರಿಳಿತವನ್ನು ತೆರೆದಿಟ್ಟಿರುವ ಟ್ರೈಲರ್ ಚಿತ್ರದ ಬಗ್ಗೆ ಭರವಸೆ ಮೂಡಿಸಿದೆ.
ನಟ ರಕ್ಷಿತ್ ಶೆಟ್ಟಿ ಮಕ್ಕಳ ದಿನಾಚರಣೆಯ ದಿನ ನ.14 ರಂದು ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ್ದರು. ಟ್ರೈಲರ್ ನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವುದಾಗಿ ಚಿತ್ರತಂಡವು ಪೋಸ್ಟರ್ ನಲ್ಲಿ ಹೇಳಿಕೊಂಡಿತ್ತು. ಇದಕ್ಕೂ ಮುನ್ನ ಕಹಿ ಸಿನಿಮಾ ನಿರ್ದೇಶಿಸಿ ಭರವಸೆ ಮೂಡಿಸಿದ್ದ ಅರವಿಂದ್ ಶಾಸ್ತ್ರಿ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದು ಚಿತ್ರಕಥೆಯನ್ನೂ ರಚಿಸಿದ್ದಾರೆ. ಅಶು ಬೆದ್ರ ವೆನ್ಚರ್ಸ್ ಮತ್ತು ಪಿವಿಆರ್ ಪಿಕ್ಚರ್ಸ್ ಸಂಸ್ಥೆಗಳು ಚಿತ್ರದ ನಿರ್ಮಾಣದ ಹೊಣೆಯನ್ನು ವಹಿಸಿಕೊಂಡಿವೆ.
ಬೆದ್ರ ನಿರ್ಮಾಪಕರಾಗುವ ಜೊತೆಗೆ ಮೊದಲ ಬಾರಿಗೆ ಅಳಿದು ಉಳಿದವರು ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ. ಸಂಗೀತ ಭಟ್ ಬೆದ್ರ ಅವರಿಗೆ ಜೋಡಿಯಾಗಿದ್ದಾರೆ. ಬೆದ್ರ ಅವರು ಈ ಹಿಂದೆ ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ ಚಿತ್ರದ ನಿರ್ಮಾಣ ಮಾಡಿದ್ದರು.
ಚಿತ್ರದಲ್ಲಿ ಪ್ರತಿಭಾವಂತ ನಟರಿದ್ದಾರೆ. ಬೆದ್ರ, ಹಿರಿಯ ನಟ ಅತುಲ್ ಕುಲಕರ್ಣಿ, ಲೂಸಿಯಾ ಖ್ಯಾತಿಯ ಪವನ್ ಕುಮಾರ್, ಬಿ ಸುರೇಶ್, ಸಂಗೀತಾ ಭಟ್, ಅರವಿಂದ್ ರಾವ್ ಮುಂತಾದವರು ತಾರಾಗಣದಲ್ಲಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ. ಮಿಥುನ್ ಮುಕುಂದ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅಳಿದು ಉಳಿದವರು ಟ್ರೈಲರ್ ಭಿನ್ನ ಕಥೆಯನ್ನು ತೆರೆದಿಡುವ ಮೂಲಕ ಗಮನ ಸೆಳೆದಿದೆ. ಹೊಸ ನಿರ್ದೇಶಕ ಮತ್ತು ನುರಿತ ಕಲಾವಿದರನ್ನು ಹೊಂದಿರುವ ಚಿತ್ರವು ಮುಂದಿನ ತಿಂಗಳು ಡಿಸೆಂಬರ್ 6 ರಂದು ತೆರೆಗೆ ಲಗ್ಗೆ ಇಡಲಿದೆ.
ಹೆಚ್ಚು ಕಮರ್ಷಿಯಲ್ ಅಂಶಗಳನ್ನು ಹೊಂದಿಲ್ಲದಿರುವ ಈ ಚಿತ್ರವನ್ನು ಪ್ರೇಕ್ಷಕ ಪ್ರಭು ಎಷ್ಟರ ಮಟ್ಟಿಗೆ ಸ್ವೀಕರಿಸಲಿದ್ದಾನೆ ಎಂಬುದನ್ನು ನೋಡಬೇಕಿದೆ.