ಭಾರತದಲ್ಲಿ ಕೋಮು ಹಿಂಸೆ: ಅಮೆರಿಕಾದ ವರದಿಯನ್ನು ತಿರಸ್ಕರಿಸಿದ ವಿದೇಶಾಂಗ ಸಚಿವಾಲಯ

“ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ -2019 ವರದಿಯಲ್ಲಿ ಅಮೆರಿಕಾ ಭಾರತದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧದ ದಾಳಿ ಮತ್ತು ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವುದನ್ನು  ಭಾರತ ತಿರಸ್ಕರಿಸಿದೆ.

“ನಮ್ಮ ನಾಗರಿಕರ ಸಾಂವಿಧಾನಿಕವಾಗಿ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡಲು ವಾಶಿಂಗ್ಟನ್ ಗೆ ಯಾವುದೇ ಅಧಿಕಾರವಿಲ್ಲ ಎಂಬುದು ನಮ್ಮ ತತ್ವಬದ್ಧ ನಿಲುವಾಗಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

“ಭಾರತದ್ದು ಕ್ರಿಯಾಶೀಲ ಪ್ರಜಾಪ್ರಭುತ್ವ.  ನಮ್ಮ ಪ್ರಜಾಸತ್ತಾತ್ಮಕ ಆಡಳಿತದ ಬಗ್ಗೆ  ದೇಶದ ಜನರು ಮತ್ತು ಸರ್ಕಾರಕ್ಕೆ ಹೆಮ್ಮೆಯಿದೆ” ಎಂದು ಅವರು ಹೇಳಿದ್ದಾರೆ.

ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಬಿಡುಗಡೆ ಮಾಡಿದ್ದ ‘2019 ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ’ಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರೇರಣೆಯ ಗುಂಪು ಹಿಂಸಾಚಾರ, ಲಿಂಚಿಂಗ್, ಕೋಮು ಹಿಂಸೆ ಹಾಗೂ ಬಿಜೆಪಿಯನ್ನೂ ಸೇರಿದಂತೆ ಹಿಂದೂ ಬಹುಸಂಖ್ಯಾತ ಪಕ್ಷಗಳ ಕೆಲವು ಅಧಿಕಾರಿಗಳು ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆಯನ್ನು ನೀಡಿರುವ, ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಬರೆದಿರುವ ಬಗ್ಗೆ ಚರ್ಚಿಸಲಾಗಿತ್ತು.

ಭಾರತದಲ್ಲಿ ಕೊರೊನಾ ಸೋಂಕು ಹರಡಲು ಅಲ್ಪಸಂಖ್ಯಾತರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತಿದೆ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಯದ ವಾತಾವರಣ ಇದೆ ಎಂದು ಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ರಾಯಭಾರಿಯಾಗಿರುವ ಸ್ಯಾಮುಯೆಲ್ ಬ್ರೌನ್​ಬ್ಯಾಕ್ ಹೇಳಿದ್ದರು.

ಕಳೆದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದು ಮತ್ತು ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಸಂಸತ್ತು ಅಂಗೀಕರಿಸುವುದು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಕಳವಳಕ್ಕೆ  ಪ್ರಮುಖ ಕಾರಣಗಳೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ “ಭಾರತದಲ್ಲಿ ಕ್ರಿಯಾಶೀಲ ಸಾರ್ವಜನಿಕ ಸಂವಾದಕ್ಕೆ ಅವಕಾಶ ಇದೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮಗಳ ರಕ್ಷಣೆಯನ್ನು ಕಡ್ಡಾಯವಾಗಿ ಖಾತರಿಪಡಿಸುವ ಸಾಂವಿಧಾನಿಕ ಸಂಸ್ಥೆಗಳನ್ನು ಹೊಂದಿದ್ದೇವೆ” ಎಂದು ಹೇಳಿದೆ.

“ಯುಎಸ್ ಕಾಂಗ್ರೆಸ್‌ಗೆ ಅದರ ಕಾನೂನು ಅವಶ್ಯಕತೆಯ ಭಾಗವಾಗಿ ವರದಿಯನ್ನು ವಾರ್ಷಿಕವಾಗಿ ರಾಜ್ಯ ಇಲಾಖೆಯು ಪ್ರಕಟಿಸುತ್ತದೆ ಮತ್ತು ಇದು ಯುಎಸ್ ಸರ್ಕಾರದ ಆಂತರಿಕ ದಾಖಲೆಯಾಗಿದೆ” ಎಂದು ಶ್ರೀವಾಸ್ತವ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights