ಯುದ್ದವೆಂಬುದು ವ್ಯಾಪಾರ ಮತ್ತು ಬೃಹತ್‌ ಉದ್ಯಮವಾಗಿದೆ: ಬರಗೂರು ರಾಮಚಂದ್ರಪ್ಪ..

ಯುದ್ಧ ಎಂಬುದು ವ್ಯಾಪಾರೀಕರಣವಾಗಿದ್ದು, ಬೃಹತ್ ರಾಷ್ಟ್ರಗಳಿಗೆ ಒಂದು ಉದ್ಯಮವಾಗಿದೆ. ಹಾಗಾಗಿ ಸೈನಿಕನ ಬಲಿದಾನಕ್ಕೆ ಬೆಲೆಯೇ ಇಲ್ಲದಂತಾಗಿ, ಬಲಿದಾನ ಮತ್ತು ಮತದಾನ ಒಂದೇ ರೀತಿಯಂತಾಗುವ ಸಂಕಟದ ಕಾಲದಲ್ಲಿ ಹಾದು ಹೋಗುತ್ತಿದ್ದೇವೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಪ್ರೆಸ್‍ಕ್ಲಬ್‍ನಲ್ಲಿ ಚಿಂತನ ಚಿಲುಮೆ ವತಿಯಿಮದ ಆಯೋಜಿಸಿದ್ದ ಲೇಖಕ ಯಡೂರ ಮಹಾಬಲರವರ ಪುಸ್ತಕಗಳ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಪ್ರಭುತ್ವದಲ್ಲಾಗುತ್ತಿದ್ದ ಯುದ್ಧಗಳಲ್ಲಿ ರಾಜರು ಭಾಗವಹಿಸುವವರು. ಆದರೆ ಇಂದಿನ ಯುದ್ಧಗಳಲ್ಲಿ ಯಾವ ಆಡಳಿತಗಾರನೂ ಯುದ್ಧ ಭೂಮಿಗೆ ಹೋಗದೆ ಕೂತಲ್ಲೇ ತಮಗೆ ಅನುಕೂಲವಾಗುವ ರೀತಿಯಲ್ಲಿ ಸೂತ್ರವಾಡಿಸುತ್ತಾರೆ ಎಂದಿದ್ದಾರೆ.

ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಕಾಲದಲ್ಲೂ ಯುದ್ಧಗಳು ನಡೆಯುತ್ತಿವೆ. ಆದರೆ ಯುದ್ಧಗಳನ್ನು ನಡೆಸುತ್ತಲೇ ಶಾಂತಿಮಂತ್ರವನ್ನು ಪಠನೆ ಮಾಡುವಂತಹ ವೈರುಧ್ಯದ ಮತ್ತು ವಿಪರ್ಯಾಸದ ನಡುವೆ ನಮ್ಮ ರಾಜಕಾರಣ ಹಾದು ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ಬೃಹತ್ ರಾಷ್ಟ್ರಗಳು ಶಾಂತಿಯ ಮಾತನ್ನು ಆಡುತ್ತಲೇ ಯುದ್ಧವನ್ನು ಪ್ರಚೋದಿಸುವ ಬೃಹತ್ ರಾಷ್ಟ್ರಗಳು ನಮ್ಮೊಂದಿಗಿವೆ. ಜೊತೆಗೆ ನಾವು ಯುದ್ಧವನ್ನು ದೇಶ ಪ್ರೇಮ ಎಂದು ಹೇಳುತ್ತಿದ್ದೇವೆ. ಆದರೆ ಯುದ್ಧಗಳಿಗಿರುವ ವಿವಿಧ ಆಯಾಮಗಳ ನೆಲೆಯನ್ನು ಗ್ರಹಿಸಿ ಯುದ್ಧಗಳನ್ನು ವಿಶ್ಲೇಷಣೆ ಮಾಡಬೇಕು ಎಂದರು.

ಕನ್ನಡದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕೃತಿಗಳು ತೀರಾ ಕಡಿಮೆ. ಇರುವ ಕೆಲವೊಂದು ಕೃತಿಗಳು ಸಹ ಅತಿರಂಜನೀಯವಾಗಿ ಯುದ್ಧವನ್ನು ವಿಜೃಂಭಿಸುತ್ತಲೇ ಅಂದಿನ ಸರ್ವಾಧಿಕಾರ ಮನೋಧರ್ಮವನ್ನು ಎತ್ತಿಹಿಡಿದಿವೆ. ಆದರೆ ಲೇಖಕ ಯಡೂರ ಮಹಾಬಲ ಅವರು ವಾಸ್ತವಿಕ ನೆಲೆಗಟ್ಟಿನಲ್ಲಿ, ಅಪಾರ ಓದು ಮತ್ತು ಸಂಶೋಧನೆಯೊಂದಿಗೆ ಕನ್ನಡದಲ್ಲಿ ಯುದ್ಧದ ಬಗ್ಗೆ ಕೃತಿ ರಚಿಸಿರುವುದು ಅಭಿನಂದನಾರ್ಹ ಎಂದರು.

ಒಬ್ಬ ಸಂಶೋಧಕನಿಗೆ ಅಧ್ಯಯನಶೀಲತೆ, ಪದಬಳಕೆ, ಭಾಷಾ ಪ್ರಬುದ್ಧತೆ ಅಗತ್ಯ. ಆದರೆ ಇತ್ತೀಚೆಗೆ ಸಂಶೋಧನೆ ಎಂಬುದು ಕೇವಲ ಪಿಎಚ್‍ಡಿಗೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ. ಲೇಖಕನು ಸೂಕ್ಷ್ಮ ಸಂವೇದನೆಶೀಲತೆಯೊಂದಿಗೆ ಕೃತಿಗಳನ್ನು ರಚಿಸಿಬೇಕು. ಜೊತೆಗೆ ಭೂತ, ವರ್ತಮಾನ ಕಾಲದ ನಡುವಿನ ಅನುಸಂಧಾನ ಚರಿತ್ರೆಯನ್ನು ಮರುಚಿಂತನೆಗೆ ಒಳಪಡಿಸಿ ಕೃತಿ ರಚಿಸಿದರೆ ಅದಕ್ಕೆ ಒಂದು ಅರ್ಥಪೂರ್ಣ ಗೌರವ ಸಲ್ಲುತ್ತದೆ ಎಂದರು.

ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ರಾಜರು ನಡೆಸಿದ ಯುದ್ಧಗಳು ಸಾಮ್ರಾಜ್ಯ ವಿಸ್ತರಣೆಗೆ ಮಾಡಿದರೆ, ಪ್ರಜಾಪ್ರಭುತ್ವದಲ್ಲಿ ಗಡಿ ವಿವಾದ, ವ್ಯಾಪಾರಕ್ಕಾಗಿ ನಡೆಯುತ್ತಿವೆ. ಈ ಬಗ್ಗೆ ಭಾರತ ಮತ್ತು ಚೀನಾ ನಡುವಿನ ಯುದ್ಧವನ್ನು ಯಡೂರ ಮಹಾಬಲ ಅವರು ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ಯುದ್ಧ ಬೇಡ ಎಂಬುವವರನ್ನು ದೇಶದ್ರೋಹಿಗಳು ಎಂಬ ಪಟ್ಟಿಗೆ ಸೇರಿಸುವ ಕಾಲದಲ್ಲಿ ಇಂತಹ ಪುಸ್ತಕಗಳ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಯಡೂರು ಮಹಾಬಲ ಬರೆದಿರುವ ಯುದ್ಧ ಪೂರ್ವ ಕಾಂಡ (1962ರ ಭಾರತ- ಚೀನಾ ಯುದ್ಧದ ಹಿಂದಿನ ಬೆಳವಣಿಗೆಗಳು), ಯುದ್ಧ ಕಾಂಡ (1962ರ ಭಾರತ- ಚೀನಾ ಯುದ್ಧದ ವಿವರಗಳು) ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಲೇಖಕರಾದ ಯಡೂರು ಮಹಾಬಲ, ಹೊಸತು ಮಾಸ ಪತ್ರಿಕೆ ಸಂಪಾದಕರಾದ ಸಿದ್ಧನಗೌಡ ಪಾಟೀಲ, ಬರಹಗಾರ ಬಿ.ಆರ್.ಮಂಜುನಾಥ್ ಮತ್ತಿತರರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights