ಸುಗಂಧಿ ಬೇರು-12: ಇಂದಿಗೂ ಪ್ರಸ್ತುತ ಭೀಷ್ಮ ಸಾಹನಿಯವರ ‘ತಮಸ್: ದೇಶ ವಿಭಜನೆಯ ಕರಾಳ ಕಥನ’

“ಏನೀಗ? ವಿರೋಧ ಮಾಡ್ತಾರಂತ?

ಮಾಡ್ಲಿ ಬಿಡು, ಅವರೇನ್ ನಮಗ ಜೀವಕ್ಕ

ಜೀವಾ ಕೊಡವರದಾರು?

ಇಲ್ಲಲಾ?

 

ಇದೆಲ್ಲಾ ಬರೇ ಒಣಾ ಧೂಳು-ಹೊಗಿ ಅಷ್ಟ.

ಇದನ್ನ ಏನರ ಆಕಾಶ ಅಂತ ತಿಳ್ಕೊಂಡೀಯೇನು ಮತ್ತ?

ಇಲ್ಲಲಾ?

 

ಒಮ್ಮೆ ಬೆಂಕಿ ಬಿತ್ತೆಪಾ ಅಂದರ

ಎಲ್ಲಾರ ಮನಿಗೂ ಉರಿ ಹತ್ತತೇತಿ

ಇಲ್ಲೇನು ಬರೇ ನಮ್ಮವ ಮನೀ ಅದಾವೇನು?

ಇಲ್ಲಲಾ?

 

ಇವತ್ತೇನು ಗಾದಿ ಮ್ಯಾಲೆ ಕುತಗೊಂಡು

ಮೆರಿಲಾಕ ಹತ್ಯಾರಲಾ, ಅವರು ಇಲ್ಲೆ ಬಾಡಿಗೀಗೆ ಬಂದಾವರು

ಅವರು ನಾಳೇನೂ ಇರಾಂಗಿಲ್ಲಾ

ಈ ಮನಿ ಏನು ಇವರ ಸ್ವಂತದ್ದೇನು ಅಲ್ಲಲಾ?

 

ಈ ಎಲ್ಲಾರ ರಕ್ತ ಬಿದ್ದು ಬಿದ್ದು ಕೆಂಪಾಗೇತಿ

ಈ ಮಣ್ಣು, ಯಾರದರ ಅಪ್ಪನ ಮನಿದೇನು

ಈ ದೇಶಾ? ಇಲ್ಲಲಾ?”

            -ರಾಹತ್ ಇಂದೋರಿ

ಅನು: ರಿಶಿಕೇಶ್ ಬಹಾದೂರ್ ದೇಸಾಯಿ

 

ಇದು ಪ್ರಖ್ಯಾತ ಉರ್ದು ಕವಿ ರಾಹತ್ ಇಂದೋರಿಯವರ ಅತ್ಯಂತ ಜನಪ್ರಿಯ ಕವಿತೆಯಾಗಿದೆ. ಅವರು ಸಾವಿರಾರು ಮುಶೈಯಿರಾಗಳಲ್ಲಿ ತಮ್ಮದೇ ವಿಶಿಷ್ಟವಾದ ಧ್ವನಿಯಲ್ಲಿ ಕವಿತೆಗಳನ್ನು ವಾಚನ ಮಾಡುತ್ತಿದ್ದರು. ಆಗಸ್ಟ್ 11ರಂದು ರಾಹತ್ ಇಂದೋರಿಯವರು ಹೃದಯಾಘಾತದಿಂದ ತೀರಿಕೊಂಡರು. ಲಕ್ಷಾಂತರ ಜನರ ಹೃದಯಾಂತರಂಗದಲ್ಲಿ ಹುದುಗಿ ಹೋಗಿದ್ದ ಈ ಕವಿತೆಯು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹರಿದಾಡಿತು. ಫೇಸ್‌ಬುಕ್‌ನಲ್ಲಿ ಇದರ ಮೂರು ಕನ್ನಡಾನುವಾದಗಳು ಕಾಣಿಸಿಕೊಂಡವು. ದೂರದರ್ಶನದ ಅನೇಕ ವಾಹಿನಿಗಳು ಇದೇ ಕವಿತೆಯನ್ನು ರಾಹತ್‌ರವರ ಧ್ವನಿಯಲ್ಲಿ ಮರು ಪ್ರಸಾರ ಮಾಡಿದವು. ಇದು ಸಮಾನತೆಗಾಗಿ ಸೆಣಸುವ ಅಸಂಖ್ಯಾತ ಹೋರಾಟಗಾರರ ಧ್ವನಿಯಾಗಿದೆ. ಆಳುವ ಪ್ರಭುತ್ವವು ‘ದೇಶ’ದ ಹೆಸರಿನಲ್ಲಿ ನಡೆಸುವ ಹಿಂಸೆಯನ್ನು ಇದು ವ್ಯಂಗ್ಯದ ಧ್ವನಿಯಲ್ಲಿ ಪ್ರಶ್ನಿಸುತ್ತದೆ; ಹಾಗೆ ಪ್ರಶ್ನಿಸುತ್ತಲೇ ಈ ‘ದೇಶ’ ಎಲ್ಲರಿಗೂ ಸೇರಿದ್ದು ಎಂಬ ‘ಜಾತ್ಯತೀತ’ ಪ್ರಜ್ಞಾವಂತಿಕೆಯನ್ನೂ ಪ್ರಕಟಿಸುತ್ತದೆ; ಅದೇ ಈ ಕವಿತೆಯ ಬಹುದೊಡ್ಡ ಶಕ್ತಿಯಾಗಿದೆ. ರಾಹತ್ ಇಂದೋರಿಯವರ ಈ ಕವಿತೆಯನ್ನು ಕೇಳಿಸಿಕೊಂಡಾಗ ಮತ್ತು ಓದಿದಾಗ ನನಗೆ ವೈಯಕ್ತಿಕವಾಗಿ ಹಿಂದಿಯ ಪ್ರಖ್ಯಾತ ಲೇಖಕರಾದ ಭೀಷ್ಮ ಸಾಹನಿಯವರ ‘ತಮಸ್’(1973) ಕಾದಂಬರಿಯು ನೆನಪಾಯಿತು. ಇದರ ವಿನ್ಯಾಸವು ಜಾತ್ಯತೀತ ನಿಲವುಗಳೊಂದಿಗೆ ತಳಕು ಹಾಕಿಕೊಂಡಿದೆ. ಭೀಷ್ಮ ಸಾಹನಿಯವರು ಹುಟ್ಟಿದ್ದೂ ಆಗಸ್ಟ್ ತಿಂಗಳಲ್ಲಿಯೇ.

ಈಗಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಲ್ಲಿ ಜನಿಸಿದ ಭೀಷ್ಮ ಸಾಹನಿಯವರು (1915-2003) ಪ್ರಖ್ಯಾತ ಸಿನಿಮಾ ನಟ ಬಲರಾಜ್ ಸಾಹನಿಯವರ ಕಿರಿಯ ಸಹೋದರ. ಅವರ ಮಾತೃ ಭಾಷೆ ಪಂಜಾಬಿ; ಶಾಲೆಯಲ್ಲಿ ಕಲಿತದ್ದು ಉರ್ದು; ಅವರು ವೃತ್ತಿಯಿಂದ ಪತ್ರಕರ್ತ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು; ಹಿಂದಿ ಭಾಷೆಯಲ್ಲಿ ಸಾಹಿತ್ಯ ರಚಿಸಿದವರಾಗಿದ್ದಾರೆ. ಅವರು ತಮ್ಮನ್ನು ಪ್ರಗತಿಶೀಲ ಲೇಖಕನೆಂದು ಗುರುತಿಸಿಕೊಂಡವರು. ಸಮತಾವಾದಿಯಾಗಿದ್ದ ಅವರು 20ಕ್ಕೂ ಹೆಚ್ಚು ರಷ್ಯನ್ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಬಹುಮುಖ ಪ್ರತಿಭೆಯ ಭೀಷ್ಮ ಸಾಹನಿಯವರು ಕತೆ, ಕಾದಂಬರಿ, ನಾಟಗಳನ್ನು ಬರೆದಿದ್ದಾರೆ. ಅವರ ‘ತಮಸ್’ ಕಾದಂಬರಿಗೆ 1975ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಈ ಕಾದಂಬರಿಯು ಇಂಗ್ಲಿಷ್ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಶ್ರೀಮತಿ ಶಾರದಾ ಸ್ವಾಮಿ ಮತ್ತು ಡಾ.ಎಸ್.ಎಂ. ರಾಮಚಂದ್ರ ಸ್ವಾಮಿಯವರು ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಕಾದಂಬರಿಯ ಹೆಣಿಗೆಯು ಒಂದು ದೊಡ್ಡ ಕೌದಿಯಂತಿದೆ. ಕೌದಿಯಲ್ಲಿರುವ ಹಲವು ಬಣ್ಣಗಳೇ ಅದಕ್ಕೊಂದು ವೈವಿಧ್ಯಮಯ ಆಕಾರವನ್ನು ನೀಡಿರುತ್ತವೆ. ಈ ದೇಶದಲ್ಲಿರುವ ಬೇರೆ ಬೇರೆ ಮತ, ಧರ್ಮ, ಜಾತಿ, ವರ್ಗ, ಸಮುದಾಯಗಳು ಕೂಡ ಈ ಕೌದಿಯಂತೆಯೇ ಬೆಸೆದುಕೊಂಡಿವೆ. ಇವೆಲ್ಲ ಸಮುದಾಯಗಳು ನೂರಾರು ವರ್ಷಗಳಿಂದ ಸಂಘರ್ಷಗಳೊಂದಿಗೆ ಸಹಬಾಳ್ವೆಯನ್ನೂ ನಡೆಸುತ್ತ ಬಂದಿವೆ. ಆದ್ದರಿಂದಲೇ ಭಾರತವು ಬಹುತ್ವವನ್ನು ಪ್ರತಿನಿಧಿಸುತ್ತದೆ. ಈ ಬಹುತ್ವದ ಕೌದಿಯನ್ನು ತೆರೆಯ ಮರೆಯಲ್ಲಿದ್ದುಕೊಂಡು ಛಿದ್ರಗೊಳಿಸುವ ವ್ಯವಸ್ಥೆಯನ್ನು ‘ತಮಸ್’ ಕಾದಂಬರಿಯು ಸಿನಿಮಾ ದೃಶ್ಯಗಳಂತೆ ಕಟ್ಟಿಕೊಟ್ಟಿದೆ. ಗೋವಿಂದ ನಿಹಲಾನಿಯವರು 1988ರಲ್ಲಿ ಈ ಕಾದಂಬರಿಯನ್ನು ‘ತಮಸ್’ ಶೀರ್ಷಿಕೆಯಲ್ಲಿ ಧಾರಾವಾಹಿಯಾಗಿ ನಿರ್ಮಿಸಿದ್ದರು. ಕನ್ನಡಿಗರಾದ ವಿ.ಕೆ. ಮೂರ್ತಿಯವರ ಛಾಯಾಗ್ರಹಣವು ಪರಿಣಾಮಕಾರಿಯಾಗಿ ಈ ಕತೆಯನ್ನು ನಿರೂಪಿಸಿದೆ.

‘ತಮಸ್’ ಕಾದಂಬರಿಯು 1940ರ ದಶಕದಲ್ಲಿ ನಡೆದ ಕೋಮು ಹತ್ಯಾಕಾಂಡದ ವಸ್ತುವನ್ನು ಒಳಗೊಂಡಿದೆ. ಉತ್ತರ ಭಾರತದಲ್ಲಿ ಮತ, ಧರ್ಮ, ಜಾತಿಗಳ ಹೆಸರಿನಲ್ಲಿ ವಿಕೃತ ಹಿಂಸೆಗಳು ನಡೆದವು; ಅದೇ ಊರಿನಲ್ಲಿ ಸೌಹಾರ್ದತತೆಯಿಂದ ಬದುಕುತ್ತಿದ್ದ ಬೇರೆ ಬೇರೆ ಸಮುದಾಯಗಳ ಜನಗಳೇ ರಾತ್ರೋರಾತ್ರಿ ಶತ್ರುಗಳಾದರು; ಹಿಂದೂ, ಸಿಖ್, ಕ್ರೈಸ್ತ, ಮುಸಲ್ಮಾನ, ತಳಸಮುದಾಯಗಳ ನಡುವೆ ಅಡ್ಡ ಗೋಡೆಗಳು ಎದ್ದು ನಿಂತವು. ಮತಾಂಧತೆಯು ಮನುಷ್ಯರ ನೆತ್ತರನ್ನು ನೆಲಕ್ಕೆ ಚೆಲ್ಲುವಂತೆ ಮಾಡಿತು. ಇದೆಲ್ಲ ನಡೆದು ಏಳು ದಶಕಗಳೇ ಕಳೆದು ಹೋಗಿವೆ. ಆದರೂ ಆ ವಿಭಜನೆಯ ಗಾಯದ ನೆನಪುಗಳು ಇಂದಿಗೂ ಮಾಸಿಲ್ಲ. ಒಂದಲ್ಲ ಒಂದು ರೂಪದಲ್ಲಿ ಆ ನೆನಪಿನ ಗಾಯಗಳು ಇಂದಿಗೂ ಸುಡುತ್ತಿವೆ.

ಭೀಷ್ಮ ಸಾಹನಿಯವರು ‘ತಮಸ್’ ಕೃತಿಯ ವಸ್ತು ವಿನ್ಯಾಸದಲ್ಲಿ ತೋರಿರುವ ಕಲಾತ್ಮಕ ಸಂಯಮ ಬೆರಗುಗೊಳಿಸುತ್ತದೆ. ಒಬ್ಬರಿಗೆ ಒಳ್ಳೆಯವನಾಗಿ ಕಾಣುವ ಮನುಷ್ಯನೊಳಗೂ ಗುಪ್ತವಾಗಿರುವ ಕ್ರೌರ್ಯದ ಪರಾಕಾಷ್ಠೆಯನ್ನು ಈ ಕೃತಿಯು ಮರೆಮಾಚುವುದಿಲ್ಲ. ಗಲಭೆಯ ಸಂದರ್ಭದಲ್ಲಿ ರಘುನಾಥ ಮತ್ತು ಅವನ ಹೆಂಡತಿ ತಮ್ಮ ಮನೆಯನ್ನು ತೊರೆದು ಬೇರೊಂದು ಊರಿಗೆ ಹೋಗುತ್ತಾರೆ. ರಘುನಾಥನ ಹೆಂಡತಿಯ ಚಿನ್ನದ ಒಡವೆಗಳು ಆ ಮನೆಯ ಟ್ರಂಕಿನಲ್ಲಿ ಉಳಿದು ಬಿಡುತ್ತವೆ. ಆಗ ರಘುನಾಥನ ಸ್ನೇಹಿತನಾದ ಶಾಹ್‌ನಾಜ್ ಆ ಮನೆಗೆ ಹೋಗಿ ಆ ಒಡವೆಯ ಗಂಟನ್ನು ತರುತ್ತಾನೆ. ಆ ಮನೆಯ ಬೀಗ ತೆಗೆಯಲು ಸಹಾಯ ಮಾಡುವ ಮಿಲ್‌ಖಿಯನ್ನು ಇದೇ ಶಾಹ್‌ನಾಜ್ ಅಟ್ಟದ ಮೇಲಿನಿಂದ ಜಾಡಿಸಿ ಒದೆಯುತ್ತಾನೆ. ಆತನ ತಲೆ ಜಜ್ಜಿಹೋಗುತ್ತದೆ. ಉಳ್ಳವರಿಗೆ ನೆರವು ನೀಡುವ ಈ ಶಾಹ್‌ನಾಜ್ ದಿಕ್ಕಿಲ್ಲದ ಅಮಾಯಕನ ಮೇಲೆ ನಡೆಸುವ ಕ್ರೌರ್ಯವು ತಣ್ಣಗೆ ಇರಿಯುತ್ತದೆ. ಒಬ್ಬನೇ ಮನುಷ್ಯನೊಳಗೆ ಅಡಗಿರುವ ಒಳಿತು ಮತ್ತು ಕೇಡಿನ ವೈರುಧ್ಯಗಳನ್ನು ಈ ಕೃತಿಯು ತೆರೆದಿಡುವ ರೀತಿಯು ವಿಶಿಷ್ಟವಾಗಿದೆ.

ಈ ಕಾದಂಬರಿಯಲ್ಲಿ ಮರೆಯಲಾಗದ ಹಲವು ಮಾನವೀಯ ಸನ್ನಿವೇಶಗಳಿವೆ. ಜೀವನೋಪಾಯಕ್ಕಾಗಿ  ಚಹಾದಂಗಡಿಯನ್ನು ನಡೆಸುತ್ತಿದ್ದ ಹರ್‌ನಾಮ್ ಸಿಂಹ ಮತ್ತು ಆತನ ಹೆಂಡತಿ ಬಂತೋ ಇದ್ದಕ್ಕಿದ್ದಂತೆ ತಮ್ಮ ಅಂಗಡಿಯನ್ನು ಬಿಟ್ಟು ಹೋಗಬೇಕಾಗುತ್ತದೆ. ಕರೀಮ್‌ಖಾನನು ದಂಗೆ ನಡೆಯುವ ಸುಳಿವನ್ನು ನೀಡಿರುತ್ತಾನೆ. ವಯಸ್ಸಾದ ಹರ್‌ನಾಮ್ ಸಿಂಹ ತನ್ನ ಹೆಂಡತಿಯೊಂದಿಗೆ ಜೀವವನ್ನು ಉಳಿಸಿಕೊಳ್ಳುವ ಭರದಲ್ಲಿ ತಪ್ಪಿಸಿಕೊಂಡು ಓಡುವ ಸನ್ನಿವೇಶವನ್ನು ಮರೆಯಲು ಸಾಧ್ಯವಾಗದು. ಆ ಗಲಭೆಯ ಸಂದರ್ಭದಿಂದ ಅವರ ಬದುಕಿನುದ್ದಕ್ಕೂ ಭಯ ಮತ್ತು ಆತಂಕಗಳೇ ಆವರಿಸಿಕೊಳ್ಳುತ್ತವೆ; ನೆಲೆಯಿಲ್ಲದೇ ಊರೂರು ಅಲೆಯಬೇಕಾಕುತ್ತದೆ. ಯಾರದೋ ಒಂದು ಮನೆಯಲ್ಲಿ ಆಶ್ರಯ ಸಿಗುತ್ತದೆ; ಆ ಮನೆಯ ಯಜಮಾನ ಅದೇ ದಿನ ರಾತ್ರಿಯಾಗುತ್ತಿದ್ದಂತೆ ಒಂದು ದೊಡ್ಡ ಟ್ರಂಕನ್ನು ಹೊತ್ತು ತಂದಿರುತ್ತಾನೆ. ಅವರು ಅದರ ಬೀಗವನ್ನು ಒಡೆದು ಅದರೊಳಗಿನ ಮಾಲನ್ನು ವಶಪಡಿಸಿಕೊಳ್ಳಲು ಕಾತುರರಾಗಿರುತ್ತಾರೆ. ಅಟ್ಟದ ಮೇಲಿದ್ದ ಹರ್‌ನಾಮ್ ಬಾಗಿಲ ಸಂಧಿಯಿಂದ ನೋಡಿದಾಗ ಆ ಟ್ರಂಕು ತಮ್ಮದೇ ಎಂದು ತಿಳಿಯುತ್ತದೆ. ಆಗ ಹರ್‌ನಾಮ್ ಅದರ ಬೀಗವನ್ನು ನೀಡುತ್ತಾನೆ. ಆ ವ್ಯಕ್ತಿಯು ಈ ಮುಂಚೆ ಹರ್‌ನಾಮ್‌ನಲ್ಲಿ ಸಣ್ಣಪುಟ್ಟ ಸಾಲ ಪಡೆದವನಾಗಿದ್ದ. ಹರ್‌ನಾಮ್ ಆಶ್ರಯ ನೀಡಿದ್ದಕ್ಕಾಗಿ ಋಣಿಯಾಗಿದ್ದೇನೆ ಎಂದು ಹೇಳುತ್ತಾನೆ. ಬದುಕಿನ ವೈಚಿತ್ರö್ಯವೆಂದರೆ ಇದಲ್ಲವೇ? ಇಂತಹ ಸನ್ನಿವೇಶಗಳಲ್ಲಿ ಕಾದಂಬರಿಯು ತೋರಿರುವ ಮಾನವೀಯ ಸಂವೇದನೆ ಅಪೂರ್ವವಾಗಿದೆ. ಭೀಷ್ಮ ಸಾಹನಿಯವರು ಮಾನವೀಯ ಮೌಲ್ಯಗಳಲ್ಲಿ ಅಪಾರ ನಂಬಿಕೆ, ವಿಶ್ವಾಸಗಳುಳ್ಳ ಮಾನವತಾವಾದಿ ಲೇಖಕರಾಗಿದ್ದಾರೆ.

ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಮತ್ತು ‘ತಮಸ್’ ಕಾದಂಬರಿಗಳ ಮಧ್ಯೆ ಕೆಲವು ಸಾಮ್ಯತೆಗಳಿರುವುದನ್ನು ಗುರುತಿಸಬಹುದು. ‘ಮಲೆಗಳಲ್ಲಿ ಮದುಮಗಳು’ ಕೃತಿಯು ಕೆಳಜಾತಿಯ ನಾಯಿಗುತ್ತಿಯೊಂದಿಗೆ ಪ್ರಾರಂಭವಾಗುತ್ತದೆ; ‘ತಮಸ್’ ಕೂಡ ಕೆಳಜಾತಿಯ ನತ್ಥೂವಿನ ಮೂಲಕ ತೆರೆದುಕೊಳ್ಳುತ್ತದೆ. ‘ಮಲೆಗಳಲ್ಲಿ ಮದುಮಗಳು’ ಪಾತ್ರಗಳ ದೃಷ್ಟಿಯಿಂದ ಇದು ‘ಮುಖ್ಯ’ ಹಾಗೂ ‘ಅಮುಖ್ಯ’ ಎನ್ನುವ ಧೋರಣೆಯನ್ನು ಅನುಸರಿಸಿದ ಕೃತಿಯಲ್ಲ; ಇಂತಹ ತರತಮ ದೃಷ್ಟಿಕೋನವನ್ನು ಬಿಟ್ಟುಕೊಟ್ಟಿದೆ; ಇದರಂತೆಯೇ ‘ತಮಸ್’ನಲ್ಲಿ ಯಾವುದೋ ಒಂದು ಅಥವಾ ಕೆಲವು ಪ್ರಧಾನ ಪಾತ್ರಗಳನ್ನಿಟ್ಟುಕೊಂಡು ರಚನೆಯಾದ ಕೃತಿಯಲ್ಲ. ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಮುಖ್ಯವಾಗಿವೆ. ಇದರಲ್ಲಿ ಬರುವ ಅನಾಮಧೇಯ ವ್ಯಕ್ತಿಗಳಿಗೂ ಮಹತ್ವವಿದೆ. ಸಿಖ್ಖರು ಗುರುದ್ವಾರದಲ್ಲಿ ಸಭೆಯನ್ನು ಸೇರಿ ಸ್ವಯಂ ರಕ್ಷಣೆಯನ್ನು ಪಡೆಯುವ ಮತ್ತು ಪ್ರತಿ ದಾಳಿ ಮಾಡುವುದರ ಬಗ್ಗೆ ಚರ್ಚೆ ನಡೆಯುವ ಸನ್ನಿವೇಶವಿದೆ. ಆಗ ಯುವಕನೊಬ್ಬ ಎದ್ದು ನಿಂತು ಆ ಸಬೆಯಲ್ಲಿ “ನಮ್ಮನ್ನು ಮುಸಲ್ಮಾನರ ವಿರುದ್ಧವಾಗಿಯೂ, ಮುಸಲ್ಮಾನರನ್ನು ನಮ್ಮ ವಿರುದ್ಧವಾಗಿಯು ಎತ್ತಿಕಟ್ಟುತ್ತಿರುವವರು ಆಂಗ್ಲರು ಎಂಬುದನ್ನು ನಾವು ಮರೆಯಬಾರದು. ಸುಳ್ಳು ಸುದ್ದಿಗಳನ್ನು ಕೇಳಿ ನಾವು ರೊಚ್ಚಿಗೇಳುತ್ತಿದ್ದೇವೆ; ನಮ್ಮ ನಮ್ಮಲ್ಲೇ ಕಚ್ಚಾಡುತ್ತಿದ್ದೇವೆ. ಮುಸಲ್ಮಾನ ಬಂಧುಗಳೊಡನೆ ಸೌಹಾರ್ದವನ್ನುಳಿಸಿಕೊಂಡು ಊರಿನಲ್ಲಿ ಗಲಭೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ..” ಎಂದು ಹೇಳುತ್ತಾನೆ. ಈ ಹೆಸರಿಲ್ಲದ ಹುಡುಗನ ಮಾತುಗಳಿಗೆ ಸಭೆಯ ಮುಖಂಡ ಯಾವುದೇ ಕಿಮ್ಮತ್ತು ನೀಡುವುದಿಲ್ಲ. ಆತನನ್ನು ಕುಳಿತುಕೊಳ್ಳು ಎಂದು ನಿರಾಕರಿಸುತ್ತಾನೆ. ಆದರೆ ಕಾದಂಬರಿಯಲ್ಲಿ ಈ ಹುಡುಗನ ವಿವೇಕದ ಮಾತಿಗೂ ಮಹತ್ವವಿದೆ.

ಭಾರತದ ವಿಭಜನೆಯ ಕ್ರೌರ್ಯವನ್ನು ಆಧರಿಸಿ ಬಂದಿರುವ ಕತೆ, ಕಾದಂಬರಿಗಳಲ್ಲಿ ಭೀಷ್ಮ ಸಾಹನಿಯವರ ‘ತಮಸ್’ ಕೃತಿಯೇ ಮೊದಲಿನದೇನಲ್ಲ. ಈ ಮುಂಚೆಯೇ ಹಿಂದಿ, ಇಂಗ್ಲಿಷ್, ಉರ್ದು ಮತ್ತು ಪಂಜಾಬಿ ಭಾಷೆಗಳಲ್ಲಿ ಅನೇಕ ಕೃತಿಗಳು ಬಂದಿದ್ದವು. ಅಮೃತಾ ಪ್ರೀತಮ್ ಅವರು ‘ಪಿಂಜರ’ (1950) ಕಾದಂಬರಿಯನ್ನು ಬರೆದಿದ್ದರು. ಖುಶವಂತ ಸಿಂಗ್ ಅವರ ‘ಟ್ರೇನ್ ಟು ಪಾಕಿಸ್ತಾನ’ (1956) ವಾಸ್ತವ ಘಟನೆಗಳನ್ನು ಆಧರಿಸಿದ ಕೃತಿಯಾಗಿದೆ. ಯಶಪಾಲ್ ಅವರು ದೇಶ ವಿಭಜನೆಯ ರಕ್ತಪಾತವನ್ನು ಕುರಿತು ‘ಝೂಠಾ ಸಚ್’ (1958) ಎಂಬ ಎರಡು ಸಂಪುಟಗಳ ಕಾದಂಬರಿಯನ್ನು ಬರೆದಿದ್ದರು. ಕೃಷ್ಣಚಂದರ್ ಅವರ ‘ಪೇಶಾವರ್ ಎಕ್ಸ್ಪ್ರೆಸ್’ ಸೇರಿದಂತೆ ಅನೇಕ ಸಣ್ಣ ಕತೆಗಳು ಆ ಕಾಲದ ತಲ್ಲಣಗಳನ್ನು ಚಿತ್ರಿಸಿವೆ. ಸದತ್ ಹಸನ್ ಮಂಟೋನ ‘ತೋಬಾ ಟೇಕ್ ಸಿಂಗ್’ ಮತ್ತು ಎಷ್ಟೋ ಕತೆಗಳು ವಿಭಜನೆಯ ಅಮಾನುಷವಾದ ಕ್ರೌರ್ಯಗಳನ್ನು ತೆರೆದಿಟ್ಟಿವೆ. ಆ ಕಾಲದ ಸಂವೇದನಶೀಲ ಬರಹಗಾರ/ರ್ತಿಯರು ಈ ವಿಭಜಿತ ಭಾರತದ ಹಿಂದೆ ಅಡಗಿದ್ದ ಧಾರ್ಮಿಕ ಹಿಂಸೆಯ ಬೇರೆ ಬೇರೆ ರೂಪಗಳನ್ನು ತಮ್ಮ ಸಾಹಿತ್ಯದ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಸಿದರು. ಜನರನ್ನು ರಕ್ಷಿಸಬೇಕಾಗಿದ್ದ ರಾಜಕೀಯ ವ್ಯವಸ್ಥೆಯನ್ನು ವಿಡಂಬನೆ ಮಾಡಿದರು; ಹಿಂದೂ-ಮುಸಲ್ಮಾನರನ್ನು ಪರಸ್ಪರ ಖಳನಾಯಕರಂತೆ ನೋಡುವ ಪೂರ್ವಗ್ರಹ ಪೀಡಿತ ಮನೋವ್ಯಾದಿಗೆ ಪ್ರತಿರೋಧ ತೋರಿಸಿದರು; ಸಾಹಿತ್ಯದ ಸೃಜನಶೀಲತೆಯಿಂದ ರೂಪಕಗಳನ್ನು ಸೃಷ್ಟಿಸಿ ಜನರಲ್ಲಿ ಅರಿವನ್ನು ಮೂಡಿಸಿದರು. ಈ ಹಿನ್ನೆಲೆಯಲ್ಲಿ ‘ತಮಸ್’ ಅನೇಕ ನೈಜ ಘಟನೆಗಳ ನೆಲೆಯಲ್ಲಿಯೇ ರಚನೆಯಾದ ಮಹತ್ವದ ಕೃತಿಯಾಗಿದೆ.

ಭೀಷ್ಮ ಸಾಹನಿಯವರ ಹಲವು ಕೃತಿಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ‘ತಮಸ್’ ಕೃತಿಯ ಅನುವಾದಕರಾದ ಶ್ರೀಮತಿ ಶಾರದಾ ಸ್ವಾಮಿ ಮತ್ತು ಡಾ. ಎಸ್.ಎಂ. ರಾಮಚಂದ್ರ ಸ್ವಾಮಿಯವರು     ಭೀಷ್ಮ ಸಾಹನಿಯವರ ‘ಬಸಂತಿ’ ಹಾಗೂ ‘ಗವಾಕ್ಷಿ’ ಎಂಬ ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ದಾಕ್ಷಾಯಣಿ ಸೋಮಶೇಖರ್ ಎಂಬವರು ‘ಹಾನೂಶ್’ ಎಂಬ ನಾಟಕವನ್ನು ಕನ್ನಡೀಕರಿಸಿದ್ದಾರೆ. ಶ್ರೀಮತಿ ಅಶ್ವಿನಿ ರಂಗ ಎಂಬವರು ‘ಪರಿಹಾರ’ ಎನ್ನುವ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಡಿ.ಎನ್. ಶ್ರೀನಾಥ್‌ರವರು ಭೀಷ್ಮ ಸಾಹನಿಯವರ ಪ್ರಾತಿನಿಧಿಕ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಗೋಪಾಲ ವಾಜಪೇಯಿ ಅವರು ‘ಕಬೀರ್ ಖಡಾ ಬಾಜಾರ ಮೆ’ ನಾಟಕವನ್ನು ‘ಸಂತೆಯಲ್ಲಿ ನಿಂತ ಕಬೀರ’ ಎಂದು ಅನುವಾದಿಸಿದ್ದರು. ಅದು ಚಲನಚಿತ್ರವಾಗಿಯೂ ಮೂಡಿಬಂತು. ಹೀಗೆ ಭೀಷ್ಮ ಸಾಹನಿಯವರ ಕತೆ, ಕಾದಂಬರಿ, ನಾಟಕಗಳು ಕನ್ನಡಕ್ಕೆ ಬಂದಿವೆ.

 

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights