Covid in State : ನೇರವಾಗಿ ರೈತರಿಂದ ಖರೀದಿಸಿ ಬಡಜನರಿಗೆ ಹಂಚಿದ ನಾಯಕರು….

ಕೊರೋನಾ ಮಾರಿಯ ಅಟ್ಟಹಾಸದ ನಡುವೆಯೇ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ರೈತರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಅತ್ತ ರೈತರು ಬೆಳೆದ ಬೆಳೆ ಮಾರಲಾಗದೇ ಸಂಕಷ್ಟದಲ್ಲಿದ್ದರೇ ಇತ್ತ ನಗರ ವಾಸಿ ಬಡವರು ಆಹಾರವಿಲ್ಲದೇ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರವನ್ನೇ ನೆಚ್ಚಿಕೊಳ್ಳದೇ ಕೆಲ ಕಾಂಗ್ರೆಸ್ ನಾಯಕರು ನೇರವಾಗಿ ರೈತರಿಂದ ಬೆಳೆ ಖರೀದಿ ಮಾಡಿ ತಮ್ಮ ಕ್ಷೇತ್ರಗಳ ಬಡವರಿಗೆ ಉಚಿತವಾಗಿ ಹಂಚಿಕ ಮಾಡಲು ಮುಂದಾಗಿದ್ದಾರೆ.

ಬೆಂಗಳೂರಿನ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡರು ಈ ಕಾರ್‍ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರು ಹೊರವಲಯದ ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪು ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕೃಷ್ಣ ಬೈರೇಗೌಡರು ಮತ್ತವರ ತಂಡದವರು ಕಳೆದ ಮುರು ದಿನಗಳಲ್ಲಿ ಸುಮಾರು 20 ಟನ್ ತರಕಾರಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಿದ್ದಾರೆ.

ಇದನ್ನು ಚೀಲಕ್ಕೆ ಹಾಕಿ ತಮ್ಮ ಕ್ಷೇತ್ರ ಬ್ಯಾಟರಾಯನಪುರದ ಬಡವರಿಗೆ ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಬೈರೇಗೌಡರು ಟ್ವಿಟರಿನಲ್ಲಿ ಹೇಳಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರು ಹಾಗೂ ಬಳಲಿರುವ ಬಡವರಿಗೆ ಸಹಾಯ ಹಸ್ತ ಚಾಚುವ ಉದ್ದೇಶದಿಂದ ತಾವು ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಸಹ ಇದೇ ರೀತಿಯ ಕೆಲಸ ಮಾಡಿದ್ದಾರೆ. ದೇವನಹಳ್ಳಿ ತಾಲೂಕಿನ ರೈತರಿಂದ 10 ಟನ್ನಿನಷ್ಟು ವಿವಿಧ ತರಕಾರಿಗಳನ್ನು ನೇರವಾಗಿ ಖರಿದಿ ಮಾಡಿ ಅದನ್ನು ತಮ್ಮ ಕ್ಷೇತ್ರದಲ್ಲಿ ಬಡಬಗ್ಗರಿಗೆ ಹಂಚಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ದಿನೇಶ್ ಗುಂಡೂರಾವ್ ಅವರು ತಮ್ಮ ಕ್ಷೇತ್ರದಲ್ಲಿ ವೈರಾಣು ನಾಶಕ ಔಷಧಿಯನ್ನು ರಸ್ತೆಗಳಲ್ಲಿ ಖುದ್ದು ಸಿಂಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.  ರಾಜ್ಯದಲ್ಲಿ ಒಟ್ಟು 279 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಈ ಪೈಕಿ 80 ಮಂದಿ ಗುಣಮುಖರಾಗಿದ್ದಾರೆ. ಸದ್ಯ 187 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 12 ಮಂದಿ ಮೃತರಾಗಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಈವರೆಗೆ 71 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದರಲ್ಲಿ 35 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights