ವಲಸೆ ಕಾರ್ಮಿಕರ ಪ್ರಯಾಣ ವೆಚ್ಚವನ್ನು ನಾವೇ ಭರಿಸುತ್ತೇವೆ: ಬಿಎಸ್‌ವೈ!

ಹೊರ ರಾಜ್ಯಗಳಿಂದ ಕೂಲಿ ಹರಸಿ ರಾಜ್ಯಕ್ಕೆ ಬಂದಿದ್ದ ವಲಸೆ ಕಾರ್ಮಿಕರು ಕೊರೊನಾ ಲಾಕ್‌ಡೌನ್‌ನಿಂದಾಗಿ ತಮ್ಮೂರುಗಳಿಗೆ ಹೋಗಲಾರದೆ ರಾಜ್ಯದಲ್ಲೇ ಉಳಿದಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾರ್ಮಿಕರಿಗೆ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿ ಅವರ ರಾಜ್ಯಗಳಿಗೆ ಹಿಂದಿರುಗಿ ಕಳಿಸಲಾಗುತ್ತಿದೆ. ತಮ್ಮ ರಾಜ್ಯಗಳಿಗೆ ಮರಳುತ್ತಿರುವ ಕಾರ್ಮಿಕರ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಲು ಪ್ರಯಾಣದ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲವೆಂಬ ವಲಸೆ ಕಾರ್ಮಿಕರ ಮನವಿಯನ್ನು ಸರ್ಕಾರವು ಪರಿಗಣಿಸಿದೆ. ನಮ್ಮ ದೇಶದ ದೂರದ ಭಾಗಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ನಾವು ನಮ್ಮದೇ ರಾಜ್ಯದ ಜನರು ಎಂದು ಭಾವಿಸುತ್ತೇವೆ & ಅವರ ಕಷ್ಟಕ್ಕೆ ಸರ್ಕಾರವು ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಮೇ 31ರವರೆಗೆ ಶ್ರಮಿಕ್ ರೈಲುಗಳ ಮೂಲಕ ಸ್ವಗ್ರಾಮಗಳಿಗೆ ತೆರಳಬಯಸುವ ವಲಸೆ ಕಾರ್ಮಿಕರು ಹಾಗೂ ಲಾಕ್ ಡೌನ್‍ ನಲ್ಲಿ ಸಿಲುಕಿರುವವರ ಪ್ರಯಾಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ಈ ನಿರ್ಧಾರವನ್ನು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್ ಅವರು ಸ್ವಾಗತಿಸಿದ್ದು, ಕಾಂಗ್ರೆಸ್‌ನ ಬೇಡಿಕೆಗಳಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಆದರೆ, ಇದೂ ವರೆಗೂ ವಲಸೆ ಕಾರ್ಮಿಕರ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲಾದರೂ ತಮ್ಮ ನಿರ್ಧಾರದಂತೆ ನಡೆಯುತ್ತವೆಯೇ ಎಂದು ಕಾದುನೋಡಬೇಕಿದೆ. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರ ಪ್ರಯಾಣ ದರದ 85% ವೆಚ್ಚವನ್ನು ಭರಿಸುವುದಾಗಿಯೂ, ರಾಜ್ಯ ಸರ್ಕಾರಗಳು 15% ಭರಿಸುವುದಾಗಿಯೂ ಹೇಳಿತ್ತು. ಆದರೆ, ಇದೂವರೆಗೂ ಯಾವುದೇ ಕಾರ್ಮಿಕನೂ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿಲ್ಲ.

ಕರ್ನಾಟಕದಲ್ಲಿಯೇ ಕಾರ್ಮಿಕರ ರೈಲು ಪ್ರಯಾಣದರವನ್ನಷ್ಟೇ ಅಲ್ಲದೆ, ರೈಲು  ನಿಲ್ದಾಣಗಳಿಗೆ ಅವರನ್ನು ಕರೆದೊಯ್ಯುವ ಬಿಎಂಟಿಸಿ ಬಸ್‌ ದರವನ್ನೂ ಕಾರ್ಮಿಕರಿಂದಲೇ ವಸೂಲಿ ಮಾಡಲಾಗಿತ್ತು. ಇನ್ನೂ ಅದು ಮುಂದುವರೆದೇ ಇದೆ. ಹೀಗಿರುವಾಗ ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರದ ಘೋಷಣೆ ಜಾರಿಯಾಗುವುದೇ ಎಂಬುದು ಪ್ರಶ್ನಾರ್ಹವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights