ಡ್ರಗ್ಸ್ ಮಾಫಿಯಾ; ನಟಿ ರಾಗಿಣಿ ಬಂಧನದ ಬೆನ್ನಲ್ಲೇ 12 ಮಂದಿ ವಿರುದ್ಧ FRI
ಸ್ಯಾಂಡಲ್ವುಡ್ನಲ್ಲಿ ಮಾದಕ ವ್ಯಸನದ ವಿರುದ್ಧ ಬಲೆ ಬೀಸಿರುವ ಸಿಸಿಬಿ ಪೊಲೀಸರ ಮುಂದೆ ಮತ್ತುಷ್ಟು ಹೆಸರುಗಳು ಕೇಳಿ ಬಂದಿವೆ. ಈಗಾಗಲೇ ಡ್ರಗ್ಸ್ ಮಾಫಿಯಾ ವಿಚಾರವಾಗಿ ನಟಿ ರಾಗಿಣಿ, ಅವರ ಆಪ್ತ ರವಿಶಂಕರ್ ಹಾಗೂ ಸಂಜನಾ ಅವರ ಒಡನಾಡಿ ರಾಹುಲ್ ಎಂಬುವವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅವರ ಮೊಬೈಲ್ ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ರಾಗಿಣಿಯನ್ನು ಬಂಧಿಸಿದ್ದಾರೆ. ನಟಿ ರಾಗಿಣಿ ಬಂಧನದೊಂದಿಗೆ ಮಹತ್ವದ ತಿರುವು ಪಡೆದುಕೊಂಡಿರುವ ಡ್ರಗ್ಸ್ ಕೇಸಿನಲ್ಲಿ ಜಾಗತಿಕ ಮಟ್ಟದ ಪೆಡ್ಲರುಗಳ ಬೇಟೆಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರೂ ಸೇರಿದಂತೆ ದೇಶದ ಹಲವು ಕಡೆ ಜಾಲ ವಿಸ್ತರಿಸಿರುವ ಮಾರಾಟಗಾರರ ಬಗ್ಗೆ ಬಂಧಿತರಿಂದ ಸುಳಿವು, ಮಾಹಿತಿ ಪಡೆದಿರುವ ಪೊಲೀಸರು ಅವರ ಹೆಡೆಮುರಿ ಕಟ್ಟಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಬಂಧನಕ್ಕೆ ಒಳಗಾಗಿರುವ ವೀರೇನ್ ಖನ್ನಾ ಮೂಲಕ ಇತರ ಜಾಗತಿಕ ಮಟ್ಟದ ಪೆಡ್ಲರುಗಳಿಗೆ ಪೊಲೀಸರು ಗಾಳ ಹಾಕಲಿದ್ದಾರೆ ಎನ್ನುವ ಮಾಹಿತಿ ಇದೆ.
ಈ ಮಧ್ಯೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಮೇಲೆ ಪ್ರಕರಣ ದಾಖಲಾಗಿದ್ದು, ಅವರನ್ನು ಎರಡನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣದ ಸಂಬಂಧ ಒಟ್ಟು 12 ಮಂದಿ ವಿರುದ್ಧ ಪೊಲೀಸರು ಪ್ರಥಮ ವರದಿ ದಾಖಲಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲದೇ ಈ ಜಾಲ ದೇಶದ ವಿವಿಧೆಡೆ ಹಾದಿ ತಪ್ಪಿದ ಗಣ್ಯರಿಗೆ ನಶೆ ನಂಟು ಹಚ್ಚುವ ಕೆಲಸದಲ್ಲಿ ಈ ಜಾಲ ನಿರತವಾಗಿದೆ ಎಂಬ ಅಂಶ ಈಗ ಬಯಲಾಗಿದೆ. ಆರೋಪ ಪಟ್ಟಿಯಲ್ಲಿ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ವಿದೇಶಿ ಪ್ರಜೆಗಳು ಸಹ ಇದ್ದು, ಜಾಗತಿಕ ಮಟ್ಟದಲ್ಲಿ ಅವರು ಮಾದಕ ಪೂರೈಕೆದಾರರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
Read Also: ಗಡಿ ವಿವಾದಗಳ ಮಧ್ಯೆ ಚೀನಾ ಪ್ರಜೆಗಳ ಪ್ರಾಣ ಕಾಪಾಡಿದ ಭಾರತೀಯ ಸೇನೆ..!

