ಪರೀಕ್ಷಾ ದಿನಾಂಕ ಪ್ರಕಟಿಸದ ಕಾನೂನು ವಿವಿ; ಗೊಂದಲದಲ್ಲಿ ವಿದ್ಯಾರ್ಥಿಗಳು

ಜೂನ್‌-ಜುಲೈನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳು ಕೊರೊನಾ ಕಾರಣದಿಂದಾಗಿ ಮುಂದೂಡಲಾಗಿದೆ. ಲಾಕ್‌ಡೌನ್‌ ನಂತರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕೆಗಳು ಮತ್ತು ಪೂರಕ ಪರೀಕ್ಷೆಗಳು, ಪದವಿ ಪರೀಕ್ಷೆಗಳು ಮುಗಿದಿವೆ. ಆದರೆ, ಕಾನೂನು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗಳು ಯಾವಾಗ ನಡೆಯುತ್ತವೇ ಎಂಬುದೇ ಗೊತ್ತಿಲ್ಲದೆ ಗೊಂದಲದಲ್ಲಿದ್ದಾರೆ. ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ನಿರ್ಲಕ್ಯತನದಿಂದಾಗಿ  ಪರೀಕ್ಷೆಯ ಬಗೆಗೆ ನಿಖರ ಮಾಹಿತಿ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಕೊರೊನಾ ಪರಿಸ್ಥಿತಿಯಲ್ಲಿ ಎಲ್ಲಾ ವೃತ್ತಿಪರ ವಿಶ್ವವಿದ್ಯಾನಿಲಯಗಳು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಲ್ಲದೇ ತೇರ್ಗಡೆಗೊಳಿಸಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆಗಳನ್ನು ಈಗಾಗಲೇ ನಡೆಸಿವೆ. ಆದರೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ (ಕೆಎಸ್‍ಎಲ್‍ಯು)ವು ಮೊದಲ ವರ್ಷದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳೆಲ್ಲರಿಗೂ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಆದರೆ, ಪರೀಕ್ಷಾ ದಿನಾಂಕವನ್ನು ಮಾತ್ರ ನಿಗದಿ ಮಾಡಿಲ್ಲ.

ಅದರಲ್ಲೂ, ಉನ್ನತ ವಿದ್ಯಾಭ್ಯಾಸ ಮತ್ತು ವೃತ್ತಿಗಾಗಿ ತೆರಳಬೇಕಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆಯ ದಿನಾಂಕದಲ್ಲಿ ಯಾವುದೇ ಸ್ಪಷ್ಟತೆಯಿಲ್ಲದೆ ಸಂಕಟಕ್ಕೀಡಾಗಿದ್ದಾರೆ. ಮುಂದಿನ ಉನ್ನತ ಶಿಕ್ಷಣ ಹಾಗೂ ನಂತರದ ಉದ್ಯೋಗದ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗದ ಸಂಧಿಗ್ಧತೆಯಲ್ಲಿದ್ದಾರೆ.

ಲಾಕ್‌ಡೌನ್‌ ನಂತರದಲ್ಲಿ ಕಾನೂನು ಸಚಿವರಾದ ಮಾಧುಸ್ವಾಮಿಯವರು ಪತ್ರಿಕಾಗೋಷ್ಠಿ ನಡೆಸಿ ‘ಸ್ವಲ್ಪ ದಿನಗಳ ಕಾಲ ತರಗತಿಗಳನ್ನು ನಡೆಸಿ ನಂತರ ಪರೀಕ್ಷೆಗಳನ್ನು ನಡೆಸಲಾಗುವುದು’ ಎಂದು ತಿಳಿಸಿದರೂ ಪರೀಕ್ಷಾ ದಿನಾಂಕದ  ಬಗ್ಗೆ ಯಾವುದೇ ನಿಖರವಾದ ಮಾಹಿತಿಯನ್ನು ನೀಡಿಲ್ಲ. ಅಲ್ಲದೇ ಅವರು ಪತ್ರಿಕಾಗೋಷ್ಠಿ ನಡೆಸಿ ಸುಮಾರು ಒಂದೂವರೆ ತಿಂಗಳುಗಳು ಕಳೆದರೂ ಈವರೆಗೆ ಕಾನೂನು ವಿಶ್ವವಿದ್ಯಾಲಯದಿಂದಾಗಲಿ, ಕಾನೂನು ಮಂತ್ರಿಗಳಿಂದಾಗಲಿ ಯಾವುದೇ ಸ್ಪಷ್ಟತೆ ಬಂದಿರದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪರೀಕ್ಷೆಗಳು ಮುಗಿಯದ ಕಾರಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆಎಂದು ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ. ಇದಷ್ಟೇ ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಪರೀಕ್ಷಾ ಶುಲ್ಕವನ್ನು ಪಾವತಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಯಾವುದೇ ಉತ್ತರ ಬರುತ್ತಿಲ್ಲ ಮತ್ತು ಕಾಲೇಜು ಆಡಳಿತ ಮಂಡಳಿಯವರೂ ಸಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗದೆ ಕೈಚೆಲ್ಲಿ ಕುಳಿತಿದ್ದಾರೆ ಎಂದು ಕಾನೂನು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕೆಎಸ್‍ಎಲ್‍ಯು ಉಪಕುಲತಿಗಳಾದ ಪಿ.ಈಶ್ವರ್ ಭಟ್‍ರು ಪರೀಕ್ಷೆಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಈ ಕೂಡಲೇ ಸ್ಪಷ್ಟವಾದ ಮಾಹಿತಿ ನೀಡಬೇಕು. ಆದಷ್ಟು ಬೇಗ ಪರೀಕ್ಷಾ ವೇಳಾಪಟ್ಟಿಯನ್ನು ಅಂತಿಮಗೊಳಿಸಿ, ಪ್ರಕಟಿಸಬೇಕು ಎಂದು ಕೆವಿಎಸ್(ಕರ್ನಾಟಕ ವಿದ್ಯಾರ್ಥಿ ಸಂಘಟನೆ) ಆಗ್ರಹಿಸಿದೆ.


ಇದನ್ನೂ ಓದಿ: ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆಯನ್ನು ರದ್ದುಗೊಳಿಸಲು KVS ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights