ಶಿರಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ? ವಿಡಿಯೋ ವೈರಲ್

ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದೆ ಎಂಬ ಆರೋಪ ಚುನಾವಣೆ ಘೋಷಣೆಯಾದಾಗಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿರಾ ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿದ ಬಿಜೆಪಿ ಮುಖಂಡರು ಸ್ತ್ರೀಶಕ್ತಿ ಸ್ವಸಹಾಯ ಸಂಘ ಮಹಿಳೆಯರಿಗೆ ರಾತ್ರಿ ವೇಳೆ ಹಣ ಹಂಚುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್‌‌ನಿಂದ ಆಕ್ರೋಶ ವ್ಯಕ್ತವಾಗಿದೆ.

ಹುಲಿಕುಂಟೆ ಹೋಬಳಿಯ ಜವಾಬ್ದಾರಿಯನ್ನು ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ ಅವರಿಗೆ ವಹಿಸಲಾಗಿದ್ದು ಈ ಹೋಬಳಿಯಲ್ಲಿ ಬಿಜೆಪಿಯಿಂದ ಮತದಾರರಿಗೆ ಹಣದ ಆಮಿಷವೊಡ್ಡುವುದು ಹೆಚ್ಚಾಗಿದೆ ಎಂದು ಆರೋಪಿಸಲಾಗಿದೆ. ಉಗೇನಕಟ್ಟೆ ಗೇಟ್ ಬಳಿ ಅಕ್ಟೋಬರ್ 26 ರಂದು ರಾತ್ರಿ ವೇಳೆ ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸನ ಮತ್ತು ಮಂಡ್ಯದಿಂದ ಬಂದವರು ರಾತ್ರಿ 10 ಗಂಟೆ ನಂತರವೂ ಗ್ರಾಮಗಳಲ್ಲಿ ಮಹಿಳೆಯರನ್ನು ಸೇರಿಸಿ ಹಣ ಹಂಚುತ್ತಿದ್ದ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ.

ಕೇಸರಿಶಾಲು ಹಾಕಿಕೊಂಡ ಮುಖಂಡರೊಬ್ಬರು ಮಹಿಳೆಯರನ್ನು ಸೇರಿಸಿ ಹಣ ಹಂಚುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಮಹಿಳೆಯರು ನನಗೆ ಕೊಟ್ಟಿಲ್ಲ ಎಂದು 200 ರೂಗಳನ್ನು ಪಡೆಯುವುದು ವಿಡಿಯೋಗಳಲ್ಲಿ ಕಂಡು ಬರುತ್ತದೆ. ಮುಖಂಡರೊಬ್ಬರು ಹಾಸನದ ಶಾಸಕ ಪ್ರೀತಂಗೌಡರು ಹಣ ಹಂಚುವಂತೆ ಹೇಳಿದ್ದಾರೆ. ಪ್ರತಿ ಬಾರಿಯೂ ಚುನಾವಣೆಯ ಸಮಯದಲ್ಲಿ ಮಹಿಳೆಯರನ್ನು ಮರೆಯುತ್ತಾರೆ. ಪುರುಷರಿಗೆ ಮಾತ್ರ ಹಣ ಕೊಡುತ್ತಾರೆ. ಮಹಿಳೆಯರನ್ನು ನಿರ್ಲಕ್ಷಿಸುತ್ತಾರೆ. ನಾವು ಹಾಗೆ ಮಾಡುವುದಿಲ್ಲ. ನಮಗೆ ಪ್ರೀತಂಗೌಡರು ಹೇಳಿದ್ದಾರೆ. ಅರಿಶಿನ ಕುಂಕುಮಕ್ಕಾಗಿ 200 ರೂ ಕೊಡಿ ಎಂದು. ಮತದಾನದ ಹಿಂದಿನ ದಿನದವರೆಗೂ ಪ್ರತಿ ದಿನ 200 ರೂ ಕೊಡುತ್ತೇವೆ. ಮತ ಯಾರಿಗೆ ಹಾಕಬೇಕು ಹೇಳಿ ಎಂದು ಪ್ರಶ್ನಿಸುತ್ತಾರೆ. ಆಗ ಮಹಿಳೆಯರು ಜೆಡಿಎಸ್ ಎಂದು ಹೇಳುತ್ತಾರೆ. ನಂತರ ಆದ ತಪ್ಪನ್ನು ತಿದ್ದಿದಾಗ ಕಮಲಕ್ಕೆ ಹಾಕುತ್ತೇವೆ ಎನ್ನುತ್ತಾರೆ.

ಇದನ್ನೂ ಓದಿ: ಶಿರಾ-ಆರ್ ಆರ್ ನಗರ ಉಪಚುನಾವಣೆಯಲ್ಲಿ ಬಿಜೆಪಿ ಕೊಡುತ್ತಾ ಬಿಗ್ ಶಾಕ್…?

ನಾಲ್ಕು ವಿಡಿಯೋಗಳು ವೈರಲ್ ಆಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿಯವರು ಅಧಿಕೃತವಾಗಿ ಹಣ ಹಂಚುತ್ತಿದ್ದರೂ ಪೊಲೀಸರಾಗಲಿ ಮತ್ತು ಚುನಾವಣಾ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯ ಸಮ್ಮತ ಚುನಾವಣೆ ಅಂದ್ರೆ ಇದೇನಾ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಶಿರಾದಲ್ಲಿ ಮತದಾರರಿಗೆ ಹಣ ಹಂಚುತ್ತಿದೆ. ಮತದಾರರಿಗೆ ಆಮಿಷವೊಡ್ಡುತ್ತಿದೆ. ಚುನಾವಣಾ ಆಯೋಗ ಮೌನ ವಹಿಸಿದೆ ಎಂದು ಆರೋಪಿಸಿದ್ದರೆ, ಕಾಂಗ್ರೆಸ್ ಮುಖಂಡರು ಹಣ ಹಂಚಿಕೆ ಮಾಡುತ್ತಿರುವ ಬಿಜೆಪಿ ಮುಖಂಡರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಮತದಾನಕ್ಕೆ ಆರು ದಿನ ಮಾತ್ರ ಬಾಕಿ ಇದೆ. ಚುನಾವಣೆಯಲ್ಲಿ ಆಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಬಾರಿ ಆರೋಪಗಳು ಕೇಳಿಬರುತ್ತಿದ್ದರೂ ಇದುವರೆಗೆ ಒಂದೇ ಒಂದು ಪ್ರಕರಣವನ್ನು ದಾಖಲಿಸಿದ ಉದಾಹರಣೆ ಇಲ್ಲ.


ಇದನ್ನೂ ಓದಿ: ಶಿರಾ ಗೆಲ್ಲಲು ಬಿಜೆಪಿಗೆ ಕಷ್ಟ: ಕ್ಷೇತ್ರದಲ್ಲಿ ನಡೆಯುತ್ತಾ ವಿಜಯೇಂದ್ರ ತಂತ್ರಗಾರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights