ಸವಾರರಿಗೆ ಕೊರೊನಾ ಆರ್ಥಿಕ ಸಂಕಷ್ಟ : ಎಂದೋ ಉಲ್ಲಂಘಿಸಿದ ಸಂಚಾರಿ ನಿಯಮಕ್ಕೆ ಈಗ ದಂಡ ವಸೂಲಿ..!
ಕೊರೊನಾ ವೈರಸ್ ನಿಂದಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನ ಸಾಮಾನ್ಯರಿಗೆ ಟ್ರಾಫಿಕ್ ಪೊಲೀಸರು ಎಗ್ಗಿಲ್ಲದೇ ವಿಧಿಸುತ್ತಿರುವ ದಂಡ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಹೌದು… ಅಧಿಕ ದಂಡ ಟ್ರಾಫಿಕ್ ಪೊಲೀಸರು ವಸೂಲಿ ಮಾಡುತ್ತಿದ್ದಾರೆ ಎಂದರೆ ಇದರರ್ಥ ಜನ ಟ್ರಾಫಿಕ್ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಅರ್ಥ ಮೂಡುತ್ತಿತ್ತು. ಆದರೀಗ ಜನ ಸಾಮಾನ್ಯರಿಗೆ ತಮ್ಮ ವಾಹನದ ಮೇಲೆ ದಂಡ ಯಾಕೆ? ಯಾವಾಗ? ಬಿದ್ದಿದೆ ಎನ್ನುವ ಪ್ರಶ್ನೆಗಳು ಏಳುತ್ತಿವೆ. ಅದೆಷ್ಟೋ ಜನ ನೀಡುವ ಮಾಹಿತಿ ಪ್ರಕಾರ ಟ್ರಾಫಿಕ್ ಪೊಲೀಸರು ವಾಹನ ತಡೆದು ಹಳೆಯ ಬಾಕಿ ಕೇಳುತ್ತಾರೆ. ಆದರೆ ಈ ವೇಳೆ ಅದೆಷ್ಟೋ ಸವಾರರು ತಮ್ಮ ವಾಹನಗಳನ್ನು ಹೊರತೆಗೆಯದೇ ಇದ್ದ ವೇಳೆಯಲ್ಲಿ ದಂಡ ವಿಧಿಸಿದ ರೆಕಾರ್ಡ್ ಗಳನ್ನು ಪೊಲೀಸರು ತೋರುತ್ತಿದ್ದಾರೆ.
ಹೀಗೊಬ್ಬ ಸವಾರನನ್ನು ಬೈಯಪ್ಪನಳ್ಳಿ ಮೆಟ್ರೋ ಸ್ಟೇಷನ್ ಬಳಿ ಟ್ರಾಫಿಕ್ ಪೊಲೀಸರು ತಡೆದರು. ಆತನಿಗೆ ಕಳೆದ ತಿಂಗಳು 8 ಮತ್ತು 9 ನೇ ತಾರೀಖು ನಿಮ್ಮ ವಾಹನದ ಮೇಲೆ ದಂಡ ವಿಧಿಸಲಾಗಿದೆ. ಪಾವತಿಸಿ ಎಂದು ಕೇಳಿದ್ದಾರೆ. ಆದರೆ ವಾಹನ ಸವಾರ ಹೇಳುವ ಪ್ರಕಾರ ಆತ ಈ ದಿನಾಂಕದಂದೂ ವಾಹನವೇ ಹೊರಗಡೆ ತೆಗೆದುಕೊಂಡು ಹೋಗಿಲ್ಲ. ಆದರೂ ಆತನ ವಾಹನದ ಮೇಲೆ ಹೆಲ್ಮಟ್ ಧರಿಸದ ದಂಡ ವಿಧಿಸಲಾಗಿದೆ.
ಹೀಗೆ ಮತ್ತೊಬ್ಬ ಸವಾರನಿಗೆ ಹೆಲ್ಮೆಟ್ ಹಾಕಿದರೂ ಕ್ವಾಲಿಟಿಯುಕ್ತ ಹೆಲ್ಮೆಟ್ ಧರಿಸಬೇಕೆಂದು ದಂಡ ವಿಧಿಸಲಾಗಿದೆ. ಕೊರೊನಾ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಜನ ತಿನ್ನಲು ಆಹಾರಕ್ಕೆ ಪರದಾಡುವಂತಹ ಸ್ಥಿತಿ ಇರುವಾಗ ಒಳ್ಳೆಯ ಹೆಲ್ಮೆಟ್ ಖರೀಧಿಸಿ ಧರಿಸಲು ಹೇಗೆ ಸಾಧ್ಯ? ಇದಕ್ಕೆ ಟ್ರಾಫಿಕ್ ಪೊಲೀಸರೇ ಉತ್ತರ ಕೊಡಬೇಕಿದೆ.
ಹಿಂದೆ ವಿಧಿಸಲಾದ ದಂಡ ಪಾವತಿಸಲು ಇದು ಸಮಯವೇ..? ಜನರ ಬಳಿ ದಂಡ ಕಟ್ಟುವಷ್ಟು ಸಾಮಾರ್ಥ್ಯ ಇದಿಯೇ? ಒಂದು ವೇಳೆ ಸವಾರ ತಪ್ಪೇ ಮಾಡಿದ್ದರೂ ಆತನಿಗೆ ಸದ್ಯದಲ್ಲಿ ದಂಡ ಕಟ್ಟುವಂತಹ ಸಾಮಾರ್ಥ್ಯ ಇದಿಯೇ? ಎಂದೋ ಹಾಕಿದ ದಂಡಕ್ಕೆ ಸವಾರ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿ ಮುಳುಗಿರುವಾಗ ದಂಡ ಕಟ್ಟಿ ಎನ್ನುವುದು ಎಷ್ಟು ಒಳಿತು..? ಇದಕ್ಕೆಲ್ಲಾ ಸರ್ಕಾರ ಬಿಟ್ಟರೇ ಟ್ರಾಫಿಕ್ ಪೊಲೀಸರೇ ಉತ್ತರ ನೀಡಬೇಕು.
ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದೇ ವಾರದಲ್ಲಿ ನವೆಂಬರ್ ಕೊನೆಯ ವಾರದಲ್ಲಿ ಬರೋಬ್ಬರಿ 3 ಕೋಟಿ ರೂ.ಗೂ ಅಧಿಕ ಮೊತ್ತದ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ. ನ. 23ರಿಂದ 29ರವರೆರಗೆ ಬರೋಬ್ಬರಿ 79,359 ಪ್ರಕರಣಗಳನ್ನು ನಗರ ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ.
ಹೆಲ್ಮೆಟ್ ಧರಿಸದ 26,118 ಪ್ರಕರಣ, ಸಿಗ್ನಲ್ ಜಂಪ್ ಮಾಡಿರುವ ಬಗ್ಗೆ 8,635 ಪ್ರಕರಣ ಮತ್ತು ನೋ ಎಂಟ್ರಿಯಲ್ಲಿ ವಾಹನ ನುಗ್ಗಿಸಿದವರ ಬಗ್ಗೆ 3,877 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಾರದಲ್ಲಿ 3 ಕೋಟಿ 34 ಲಕ್ಷದ 89 ಸಾವಿರದ 300 ರೂಪಾಯಿ(3,34,89,300) ದಂಡ ಸಂಗ್ರಹ ಮಾಡಿರುವುದಾಗಿ ಟ್ರಾಫಿಕ್ ಪೊಲೀಸ್ ಇಲಾಖೆಯು ಅಧಿಕೃತ ದಾಖಲೆ ಬಿಡುಗಡೆ ಮಾಡಿದೆ.
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿದ್ದರಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆ ಈಗ ಮತ್ತಷ್ಟು ತೀವ್ರಗೊಂಡಿದೆ.