ಲೋಹದ ಲಾಠಿಗಳಿರುವ ದೆಹಲಿ ಪೊಲೀಸರ ಫೋಟೋ ವೈರಲ್; ಸ್ಪಷ್ಟನೆ ನೀಡಿದ ಪೊಲೀಸ್ ಇಲಾಖೆ ಹೇಳಿದ್ದೇನು?
ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಭಾರೀ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ, ರಸ್ತೆಗಳಲ್ಲಿ ಬೃಹತ್ ಬ್ಯಾರೀಕೇಡ್‌ಗಳು ಮತ್ತು ಮುಳ್ಳಿನ ತಂತಿಯಿಂದ ರಸ್ತೆಯಲ್ಲಿ ತಡೆಗೋಡೆ ನಿರ್ಮಿಸಿದ್ದು, ರಸ್ತೆಗಳಿಗೆ ಅಡ್ಡಲಾಗಿ ಕಬ್ಬಿಣದ ಸಲಾಕೆಗಳ ಮೊಳೆಗಳನ್ನೂ ಅಳವಡಿಸಿದೆ. ಈ ಮಧ್ಯೆ, ಲೋಹದ ಕೈಗವಸು ಮತ್ತು ಲೋಹದ ಲಾಠಿ ಹಿಡಿದು ರಸ್ತೆಯಲ್ಲಿ ನಿಂತಿರುವ ದೆಹಲಿ ಪೊಲೀಸರ ಪೋಟೋ ಕೂಡ ವೈರಲ್ ಅಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸ್ ಇಲಾಖೆಯ ವಕ್ತಾರರೊಬ್ಬರು, ಇಲಾಖೆಯಿಂದ ಅಧಿಕೃತವಾಗಿ ಯಾವುದೇ ಔಪಚಾರಿಕ ಆದೇಶವನ್ನು ನೀಡಲಾಗಿಲ್ಲ. ಲೋಹದ ಲಾಠಿಗಳನ್ನು ಪೊಲೀಸರಿಗೆ ಒದಗಿಸುವ ಉದ್ದೇಶ ಇಲಾಖೆಗೆ ಇಲ್ಲ ಎಂದು ಹೇಳಿದ್ದಾರೆ.
ಈ ಫೋಟೋದಲ್ಲಿರುವ ಪೊಲೀಸರು ದೆಹಲಿಯ ಶಹದಾರಾ ಜಿಲ್ಲೆಯ ಪೊಲೀಸರ ಪೋಟೋಗಳಾಗಿವೆ. ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಇಲ್ಲದೇ ಒಬ್ಬ ಸ್ಥಳೀಯ ಅಧಿಕಾರಿ ಈ ಲೋಹದ ಲಾಠಿಗಳನ್ನು ತರಿಸಿದ್ದಾರೆ. ಈ ಬಗ್ಗೆ ಶಹದಾರಾ ಪೊಲೀಸರಿಂದ ವಿವರಣೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಗಡಿಯಲ್ಲಿ ಪೊಲೀಸರಿಂದ ಪತ್ರಕರ್ತರ ಮೇಲೆ ಹಲ್ಲೆ; ಇಬ್ಬರ ಬಂಧನ!
ಶಹದಾರಾ ಪೊಲೀಸ್ ಅಧಿಕಾರಿಯೊಬ್ಬರು, ತಾವೇ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಅವರೇ ಇಂತಹ ಲೋಹದ ಲಾಠಿಗಳನ್ನು ಆರ್ಡರ್ ಮಾಡಿದ್ದರು. ಅವುಗಳೇ ಈ ಪೋಟೋದಲ್ಲಿರುವ ಲಾಠಿಗಳು. ಈ ಫೋಟೊ ನೋಡಿದ ಕೂಡಲೇ ಆ ಆಯುಧಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇಲಾಖೆಗೆ ಇಂತಹ ಆಯುಧಗಳನ್ನು ಪೂರೈಸುವ ಯಾವ ಉದ್ದೇಶವು ಇಲ್ಲ ಎಂದು ಪೊಲೀಸ್ ವಕ್ತಾರರು ಹೇಳಿದ್ದಾರೆ.
ಸೋಮವಾರ, ಪೊಲೀಸ್ ಮೂಲಗಳು ಹಂಚಿಕೊಂಡಿದ್ದ ಆ ಫೋಟೋದಲ್ಲಿ, ಪೊಲೀಸರ ಗುಂಪೊಂದು ರಾಷ್ಟ್ರ ರಾಜಧಾನಿಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದು, ಅವರ ಮುಂಗೈ-ಮಣಿಕಟ್ಟಿನಿಂದ ಮೊಣಕೈಗೆ ಹೊದಿಸುವ ಲೋಹದ ಕೈಗವಸುಗಳಿದ್ದವು.
ದೊಡ್ಡ ರಕ್ಷಣಾತ್ಮಕ ಹೊದಿಕೆ ಅಥವಾ ’ಗಾರ್ಡ್’ ಹೊಂದಿರುವ ಲೋಹದ ಲಾಠಿಯನ್ನೂ ಅವರು ಹಿಡಿದಿದ್ದಾರೆ. ಎದುರಾಳಿಯ ಮೇಲೆ ಸ್ವಿಂಗ್ ಮಾಡುವಾಗ ಎರಡೂ ಮಣಿಕಟ್ಟುಗಳನ್ನು ರಕ್ಷಿಸುವಂತಹ ದೊಡ್ಡದಾದ ಹಿಡಿಕೆಯೂ ಇತ್ತು. ಈ ಆಯುಧಗಳ ವಿವರಗಳ ಬಗ್ಗೆ ದೆಹಲಿ ಪೊಲೀಸರಿಂದ ನಿನ್ನೆಯವರೆಗೆ ಯಾವುದೇ ಅಧಿಕೃತ ದೃಢೀಕರಣವಿರಲಿಲ್ಲ. ಇಂದು ದೆಹಲಿ ಪೊಲೀಸ್ ಇಲಾಖೆ ಇಂತಹ ಆಯುಧಗಳನ್ನು ಬಳಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ರೈತರು ದೆಹಲಿ ತಲುಪದಂತೆ ತಡೆಯಲು ರೈಲನ್ನೇ ತಿರುಗಿಸಿದ ಸರ್ಕಾರ!

