BJP ಹೈಕಮಾಂಡ್‌ ನೋಟಿಸ್‌ಗೆ ಯತ್ನಾಳ್‌ ಉತ್ತರ: BSY ವಿರುದ್ಧ 11 ಪುಟಗಳ ಆರೋಪ!

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಯತ್ನಾಳ್‌, ತಮಗೆ ಮಂತ್ರಿಗಿರಿ ಸಿಗದೇ ಇದ್ದ ಕಾರಣದಿಂದಾಗಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಯತ್ನಾಳ್‌ಗೆ ನೋಟಿಸ್‌ ನೀಡಿತ್ತು. ಇದಕ್ಕೆ 11 ಪುಟಗಳಲ್ಲಿ ಉತ್ತರಿಸಿರುವ ಯತ್ನಾಳ್‌ ಮುಖ್ಯಮಂತ್ರಿ ವಿರುದ್ದ ಭಾರೀ ಆರೋಪಗಳನ್ನು ಮಾಡಿದ್ದಾರೆ.

ಹೈಕಮಾಂಡ್‌ಗೆ ಉತ್ತರ ಕಳಿಸಿದ ನಂತರ ಮಾತನಾಡಿದ ಯತ್ನಾಳ್‌ ಮತ್ತೊಂದು ಸ್ಪೋಟಕ ಹೇಳಿದ್ದು, “ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಮೋದಿ ಶಕ್ತಿಯನ್ನು ಕುಗ್ಗಿಸಲು ಆರ್‌ಜೆಡಿ, ಕಾಂಗ್ರೆಸ್‌ಗೆ ಹಣ ನೀಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು” ಎಂದು ಆರೋಪಿಸಿದ್ದಾರೆ.

“ಪಕ್ಷದಿಂದ ನನಗೆ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಪ್ರತಿಕ್ರಿಯೆಯಾಗಿ ಹನ್ನೊಂದು ಪುಟಗಳ ಉತ್ತರ ನೀಡಿದ್ದೇನೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ 45 ಪ್ಯಾರಾಗಳಲ್ಲಿ ವಿವರಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇನೆ. ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರದು ಎನ್ನುವುದು ನರೇಂದ್ರ ಮೋದಿ ಆಶಯ. ಆದರೆ, ಅವರ ಆಶಯದಂತೆ ಇಲ್ಲಿ ಸರ್ಕಾರ ಇಲ್ಲ. ಯಡಿಯೂರಪ್ಪ ಅವರ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆಯೂ ತನಿಖೆ ಮಾಡಬೇಕು ಮತ್ತು ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆಯೂ ತನಿಖೆ ಮಾಡಬೇಕು ಒತ್ತಾಯಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ‘ಯುಗಾದಿಗೆ ಸಿಎಂ ಸ್ಥಾನಕ್ಕೆ ಉತ್ತರ ಕರ್ನಾಟಕದವರೇ ಬರುತ್ತಾರೆ’ – ಯತ್ನಾಳ್ ಹೊಸ ಬಾಂಬ್!

“ನೋಟಿಸ್‌ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲೂ ಕ್ಷಮೆ ಯಾಚಿಸಿಲ್ಲ. ಸಿಡಿ, ಇಡಿ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ.‌ ಮಾರಿಷಸ್ ವಿಚಾರವನ್ನೂ ಬರೆದಿದ್ದೇನೆ. ಮಾರಿಷಸ್‌ಗೆ ಯಾಕೆ ಹೋಗಿದ್ದರು. ಎಷ್ಟು ಮಂದಿ ಹೋಗಿದ್ದರು. ಯಾವ ವಿಮಾನದಲ್ಲಿ ಹೋಗಿದ್ದರು, ಮಾಜಿ ಗೃಹ ಸಚಿವರೊಬ್ಬರ ಆಪ್ತ ಸಹಾಯಕನ ಮೂಲಕ ಮಾರಿಷಸ್‌ಗೆ ಹೋಗಿ ಏನೇನು ತೆಗೆದುಕೊಂಡಿದ್ದಾರೆ ಎಲ್ಲವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಇದರ ಬಗ್ಗೆಯೂ ತನಿಖೆ ಮಾಡಲು‌ ಆಗ್ರಹಿಸಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್‌ವೈ ವಿರುದ್ಧ ಟೀಕೆ: 15 ದಿನಗಳಲ್ಲಿ ಉತ್ತರಿಸುವಂತೆ ಯತ್ನಾಳ್‌ಗೆ BJP ಹೈಕಮಾಂಡ್‌ ನೋಟಿಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights