ಬಿಜೆಪಿಗೆ ಬಂಡಾಯದ ಬಿಸಿ: ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸ್ಪರ್ಧೆ!

ರಾಜ್ಯದಲ್ಲಿ ಉಪಚುನಾವಣೆಯ ಕಾವು ಏರುತ್ತಿದೆ. ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಈ ನಡುವೆ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿದೆ. ಬಸವಕಲ್ಯಾಣದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲಭವಿಸಿದ್ದ ಮಲ್ಲಿಕಾರ್ಜುನ ಖೂಬಾ ಅವರು ಈ ಬಾರಿಯ ಚುನಾವಣೆಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಬಿಜೆಪಿ ಟಿಕೆಟ್‌ ನೀಡಲು ನಿರಾಕರಿಸಿದ್ದು, ಶರಣು ಸಲಗಾರ್‌ ಅವರಿಗೆ ಟಿಕೆಟ್‌ ನೀಡಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಸಿಟ್ಟಾಗಿರುವ ಖೂಬಾ ಅವರು ಸ್ವಾಭಿಮಾನಿಗಳ ವೇದಿಕೆ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಟಿಕೆಟ್‌ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್‌ ತಪ್ಪು ನಡೆಯನ್ನು ಹೊಂದಿದೆ. ಇಲ್ಲಿ ಸೂಟ್‌ಕೇಸ್‌ ಕೆಲಸ ಮಾಡಿದೆ. ಜೆಡಿಎಸ್‌ನಿಂದ 2 ಬಾರಿ ಶಾಸಕನಾಗಿ ಗೆದ್ದಿದ್ದ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೆ. ಆದರೆ, 2018ರಲ್ಲಿ ಯಡಿಯೂರಪ್ಪರನ್ನು ಬೆಂಬಲಿಸಿ ಬಿಜೆಪಿ ಸೇರಿದೆ. ಆದರೆ, ಈಗ ನನಗೆ ಟಿಕೆಟ್‌ ನೀಡದೇ, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ದ್ರೋಹ ಮಾಡಿವೆ ಎಂದು ಖೂಬಾ ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ 16 ಸ್ಥಳೀಯ ಬಿಜೆಪಿ ಮುಖಂಡರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಇವರಾರಿಗೂ ಟಿಕೆಟ್‌ ನೀಡಿಲ್ಲ. ಇವರಾರು ಟಿಕೆಟ್‌ಗೆ ಅರ್ಹರಾಗಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದ ನನಗೆ ಟಿಕೆಟ್‌ ನೀಡಬೇಕಿತ್ತು. ಆದರೆ, ಹೊರಗಿನವರಿಗೆ ಟಿಕೆಟ್‌ ನೀಡಿದ್ದಾರೆ. ಪಕ್ಷವು ಟಿಕೆಟ್‌ ಮಾರಾಟ ಮಾಡಿದೆ. ಆದರೂ ಬಸವಕಲ್ಯಾಣದ ಸ್ವಾಭಿಮಾನಿ ಜನರು ನನ್ನನ ಕೈಹಿಡಿಯಲಿದ್ದಾರೆ ಎಂದು ಖೂಬಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲೂ ಗಣಿ ದಂಡ 3,350 ಕೋಟಿ ಇಳಿಕೆ; ಗಣಿಪತಿಗಳ ಜೇಬು ತುಂಬಿಸುತ್ತಿದೆ BJP ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights