ವ್ಯಾಪಕ ಚರ್ಚೆಗೆ ಗ್ರಾಸವಾದ SAS ತೆರಿಗೆ ಪದ್ಧತಿ; ಗೊಂದಲಕ್ಕೆ ಕಾರಣವಾಯ್ತು ಸರ್ಕಾರದ ಸುತ್ತೋಲೆ!

ರಾಜ್ಯದಲ್ಲಿನ ನೂತನ ಸ್ವಯಂ ಘೋಷಿತ ಆಸ್ತಿ (SAS) ತೆರಿಗೆ ಪದ್ಧತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. ಸಾಕಷ್ಟು ಅಪಸ್ವರಗಳ ಮಧ್ಯೆಯೂ ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ SAS ಜಾರಿಯಲ್ಲಿದೆ. ಸರಕಾರ ಈಚೆಗಷ್ಟೇ ಪೌರಸೇವಾ ಕಾನೂನುಗಳಿಗೆ ತಿದ್ದುಪಡಿ ತಂದು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಟ್ಟು) ಆಸ್ತಿ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಿದ್ದು ಮತ್ತೊಮ್ಮೆ ವಿವಾದದ ಮೂಲವಾಗಿದೆ.

ತೆರಿಗೆ ಲೆಕ್ಕಾಚಾರಕ್ಕೆ ಆಸ್ತಿದಾರರು ವಿವಿಧ ಕಟ್ಟಡಗಳಿಗೆ ಮುದ್ರಾಂಕ ಇಲಾಖೆ 2005-06ರಲ್ಲಿ ಪ್ರಕಟಿಸಿದ ದರಗಳನ್ನು (ಲೆಕ್ಕಾಚಾರದಲ್ಲಿ ಈ ದರಗಳಿಗೆ ಶೇ. 50 ರಿಯಾಯ್ತಿ) ಆಧಾರವಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು (ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ) ಸರಕಾರದ ನಿರ್ದೇಶನದಂತೆ ವಸತಿ ಕಟ್ಟಡಗಳಿಗೆ ಶೇ. 0.3ರಿಂದ 0.6 ಮಿತಿಯ ಒಳಗೆ ತೆರಿಗೆ ದರವನ್ನು ನಿಗದಿಪಡಿಸಿ ಪ್ರತಿ 3 ವರ್ಷಕ್ಕೊಮ್ಮೆ ತೆರಿಗೆ ಹೆಚ್ಚಳ ಮಾಡಬೇಕಿತ್ತು.

ಕೆಲವು ಸ್ಥಳೀಯ ಸಂಸ್ಥೆಗಳು ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದವು. ಆಸ್ತಿ ಮೌಲ್ಯ ಮತ್ತು ತೆರಿಗೆ ದರ ನಿರ್ಧರಿಸಿದ ರೀತಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆಸ್ತಿದಾರರು 2020-21ರಲ್ಲಿ ಪಾವತಿಸಿದ ತೆರಿಗೆಯನ್ನು ಮೂಲವಾಗಿಟ್ಟುಕೊಂಡು ಸ್ಥಳೀಯ ಸಂಸ್ಥೆಗಳು ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ತೆರಿಗೆ ದರ ನಿಗದಿ ಮಾಡಬೇಕು ಹಾಗೂ ಚಾಲ್ತಿ ಮಾರ್ಗಸೂಚಿ ದರ ಆಧರಿಸಿ ಪ್ರತಿ ವರ್ಷ ತೆರಿಗೆ ಹೆಚ್ಚಳ ಮಾಡಬೇಕೆಂದು ಸರಕಾರ ಹೊರಡಿಸಿರುವ ಸುತ್ತೋಲೆ ಭಾರಿ ಗೊಂದಲಗಳನ್ನು ಹುಟ್ಟು ಹಾಕಿದೆ.

ಸದರಿ ಆಸ್ತಿ ತೆರಿಗೆ ಪದ್ಧತಿಯ ಎಲ್ಲಾ ಮಜಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಅವರು YouTubeನಲ್ಲಿ ರಾಜ್ಯದಲ್ಲಿನ ಆಸ್ತಿ ತೆರಿಗೆ ಪದ್ಧತಿ ಹೇಗೆ ಜನ ವಿರೋಧಿಯಾಗಿದೆ ಎಂಬುದನ್ನು ತಮ್ಮದೇ ಧಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದಾರೆ.

ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿನ ಆಸ್ತಿ ತೆರಿಗೆ ವ್ಯವಸ್ಥೆಯ ತುಲನಾತ್ಮಕ ವಿವರಣೆಗಳ ಕುರಿತ ವಿಡಿಯೊ ತುಣುಕುಗಳು ಈಗಾಗಲೇ  YouTube ಮತ್ತು Facebook ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಸದ್ದು ಮಾಡಿವೆ.

ಕೋವಿಡ್ ಸಂದರ್ಭದಲ್ಲಿ ಬೇರೆ ರಾಜ್ಯಗಳು ಆಸ್ತಿ ತೆರಿಗೆದಾರರಿಗೆ ಭಾರೀ ರಿಯಾಯ್ತಿಗಳನ್ನು ಕೊಟ್ಟಿದ್ದು ಕರ್ನಾಟಕ ಸರಕಾರ ಇದೇ ವೇಳೆ ಆಸ್ತಿ ತೆರಿಗೆಯನ್ನು ಶೇ. 15ರಿಂದ 30ರವರೆಗೆ ಹೆಚ್ಚಿಸಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಲಾರಂಭಿಸಿವೆ. ಇನ್ನೂ ಹೆಚ್ಚಿನ ಸಮಗ್ರ ವಿವರಗಳಿಗಾಗಿ YouTubeನಲ್ಲಿ nagaraj hongal ಎಂದು ಟೈಪ್ ಮಾಡಿ ವಿಡಿಯೋ ವೀಕ್ಷಿಸಬಹುದಾಗಿದೆ.

 

 

 

 

– ನಾಗರಾಜ್ ಹೊಂಗಲ್‌


ಇದನ್ನೂ ಓದಿ: ಸಿಎಂ ಖುರ್ಚಿಗೆ ಸಂಚಕಾರ?; ನಿಜಕ್ಕೂ ಬಿಎಸ್‌ವೈಗೆ ಕೊರೊನಾ ಬಂದಿತ್ತಾ? ಇವೆ ಹಲವು ಅನುಮಾನಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights