ಕೊಂಡ್ಲಿ ನಾಗರತ್ನಮ್ಮ ಎಂಬ ಮಹಾತಾಯಿ; ನೊಂದ ಮಹಿಳಿಯರ ಕಲ್ಯಾಣಕ್ಕಾಗಿ ಹಾತೊರೆದ ಸಹೃದಯಿ!
ತಮ್ಮ ನಿವೃತ್ತಿಯ ನಂತರ ನೆಮ್ಮದಿಯಾಗಿ ಬಾಳಿನ ಇಳೆಸಂಜೆಯನ್ನು ಕಳೆಯುವ ಹೊತ್ತಲ್ಲಿ ಮನೆ ಮನೆ ಅಲೆದು ನೊಂದ ಮಹಿಳೆಯರ ಹೆಗಲು ತಬ್ಬಿ ಸಂತೈಸುತ್ತಿದ್ದ ಮಾತೃ ಹೃದಯಿ ಇವರು ನಾಗರತ್ನಾ ಕೊಂಡ್ಲಿ. ಇವರು ನಿವೃತ್ತ ಸರ್ಕಾರಿ ನೌಕರರು. ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಕೆಬಿ ಕ್ರಾಸ್ ಸಮೀಪದ ಕೊಂಡ್ಲಿ ಎಂಬ ಗ್ರಾಮದವರು. ಎಲ್ಲರಂತೆ ಸಾಮಾನ್ಯವಾಗಿ ಇವರು ಬದುಕಬಹುದಿತ್ತು. ಆದರೆ ಯತ್ಕಿಂಚಿತ್ ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಅಪಾರ ಅಭಿಲಾಷೆ ಇವರದ್ದು. ಹಾಗಾಗಿ ಹಗಲು ರಾತ್ರಿ ಎನ್ನದೆ, ದಣಿವು ಮರೆತು ವಿಶ್ರಾಂತಿ ಪಡೆದುಕೊಳ್ಳುವ ವಯಸ್ಸಿನಲ್ಲಿ ತುಮಕೂರು ಜಿಲ್ಲೆಯ ಕುಗ್ರಾಮಗಳ ಕಡೆಗೆ ನಡೆದುಬಿಡುತ್ತಿದ್ದರು. ಹತ್ತಾರು ಹಳ್ಳಿಗಳ ಸಾವಿರಾರು ಮಹಿಳೆಯರ ಪಾಲಿಗೆ ಇವರು ಅಮ್ಮ.
ತಮ್ಮ ನಿವೃತ್ತಿಯ ಹಣವನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಿರಾ ಮತ್ತು ಗುಬ್ಬಿ ತಾಲೂಕಿನ ಗಣಿಬಾಧಿತ ಪ್ರದೇಶಗಳ ಮಹಿಳೆಯರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ ಅಂತಿದ್ದರು ನಾಗರತ್ನಮ್ಮ ಕೊಂಡ್ಲಿ. ಈ ಮಹಿಳೆಯರ ಪ್ರಗತಿಗಾಗಿ ಒಂದು ಟ್ರಸ್ಟ್ ನಿರ್ಮಿಸಿಕೊಂಡಿದ್ದರು; ಅದು “ಸಾಯಿ ನಾರಾಯಣ ಗ್ರಾಮ ಸೇವಾ ಟ್ರಸ್ಟ್”. ಈ ಸಮಾಜದ ಕಟ್ಟಕಡೆಯ ವರ್ಗದ ಹೆಣ್ಣುಮಕ್ಕಳ ಕಣ್ಣೀರು ಒರೆಸಲು ಸ್ವತಃ ನಿಲ್ಲುತ್ತಿದ್ದ ನಾಗರತ್ನಮ್ಮ ತಮ್ಮ ಗುರುತು ಪರಿಚಯ ಇಲ್ಲದ ದೊಡ್ಡ ಮನುಷ್ಯರ ಮೆನೆಗಳಿಗೆ ಅಲೆಯುತ್ತಿದ್ದರು. ನೊಂದ ನಮ್ಮೂರಿನ ಮಹಿಳೆಯರಿಗೆ ನೆರವು ನೀಡಿ ಎಂದು ಕೈ ಒಡ್ಡಿ ಬೇಡುತ್ತಿದ್ದರು. ನಾಗರತ್ನಮ್ಮನವರಿಗೆ ಇಂತಹ ಯಾವ ಜರೂರತ್ತೂ ಇರಲಿಲ್ಲ. ಆದರೆ ಅವರಲ್ಲಿದ್ದ ಆರ್ದ್ರ ಅಂತಃಕರಣ, ವಾತ್ಸಲ್ಯಪೂರ್ಣ ಹೃದಯ ಅವರಲ್ಲಿ ಈ ತಹತಹಿಕೆ ಹುಟ್ಟುಹಾಕಿತ್ತು. ಯಾವುದೇ ಊರಿನಲ್ಲಿ ಮಹಿಳೆಯರಿಗೆ ಅನೂಕೂಲವಾಗುವ ಕಾರ್ಯಕ್ರಮಗಳಾದರೂ ಬಸ್ ಹತ್ತಿ ಹೋಗಿಬಿಡುತ್ತಿದ್ದರು.
ಇತ್ತೀಚೆಗೆ “ಮಾತೃ ದೇಸಿ ಫುಡ್” ಎಂಬ ಸಂಸ್ಥೆ ನಿರ್ಮಿಸಿಕೊಂಡಿದ್ದರು ನಾಗರತ್ನಮ್ಮ. ಸಿರಿಧಾನ್ಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು, ಮತ್ತದರಿಂದ ಬಂದ ಹಣವನ್ನು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗಿಸುತ್ತಿದ್ದರು. ಹೀಗೆ ಅವರಿಗಿದ್ದ ಒಂದೇ ಚಿಂತೆ ಗಣಿಬಾಧಿತ ಪ್ರದೇಶದ ಮಹಿಳೆಯರಿಗಾಗಿ ಏನಾದರೂ ಮಾಡಬೇಕು ಅನ್ನುವುದಷ್ಟೆ. ಹೀಗಾಗಿ ತಿಂಗಳ ಸಂಬಳ ಕೊಟ್ಟು ಖಾಸಗಿ ನರ್ಸ್ ಇಟ್ಟು ಅನಾರೋಗ್ಯ ಪೀಡಿತ ಮಹಿಳೆಯರ ಆರೈಕೆ ಮಾಡುತ್ತಿದ್ದರು. ಅಲ್ಲಿನ ಮಕ್ಕಳಿಗೆ ಒಂದು ಉತ್ತಮ ಭವಿಷ್ಯ ಕಲ್ಪಿಸಿಕೊಡಬೇಕು ಎಂದು ಸದಾ ಚಿಂತಿಸುತ್ತಿದ್ದರು.
ಇದನ್ನೂ ಓದಿ: ಮುಂದಿನ ಚುನಾವಣೆ ವೇಳೆಗೆ ಪಂಜಾಬ್ ಸಿಎಂ ಮತ್ತು ಮೋದಿ ನಡುವೆ ಗಟ್ಟಿ ಬಾಂಧವ್ಯ ಬೆಳೆಯಲಿದೆ: ಮನೀಶ್ ಸಿಸೋಡಿಯಾ
ನಾಗರತ್ನಮ್ಮ ಅವರು ನನಗೆ ಪರಿಚಯವಾಗಿದ್ದು 2018ರಲ್ಲಿ. ಅವರಿಗೆ ಟ್ರಸ್ಟ್ ಮಾಡಿಸಿಕೊಡಲು ನಾನು ಆತ್ಮೀಯ ಗೆಳೆಯರೂ, ಚಾರ್ಟೆಡ್ ಅಕೌಂಟೆಂಟ್ ಸಹ ಆಗಿರುವ ನಾಗರಬಾವಿಯ ದಿನೇಶ್ ಜೋಶಿಯವರ ಕಚೇರಿಯಿಂದ ತುಮಕೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯತನಕ ಜೊತೆಯಿದ್ದೆ. ಈ ಟ್ರಸ್ಟ್ ನ ಓರ್ವ ಟ್ರಸ್ಟಿ ಸಹ ಆಗಿದ್ದೆ. ಅವರು ಕರೆ ಮಾಡಿದಾಗಲೆಲ್ಲಾ ಮಹಿಳೆಯರಿಗಾಗಿ ರೂಪಿಸಿದ ಕಾರ್ಯಕ್ರಮಗಳು ಯೋಜನೆಗಳ ಬಗ್ಗೆಯೇ ಮಾತಾಡುತ್ತಿದ್ದರು. ವ್ಯಸನ ಮುಕ್ತ ಸಮಾಜದ ಕನಸು ಕಾಣುತ್ತಿದ್ದರು. ಮದ್ಯಪಾನ ನಿರೋಧ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದರು. ಸಾವಯವ ಸಿರಿಧಾನ್ಯ ಅಭಿಯಾನದ ಭಾಗವಾಗಿದ್ದರು. ಸುಸ್ಥಿರ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣ ಇವರ ಅಧಮ್ಯ ಬಯಕೆಯಾಗಿತ್ತು.
ಇತ್ತೀಚೆಗೆ ಸಹ ಕರೆ ಮಾಡಿದ್ದರು ಆದರೆ ನಾನು ಫೋನ್ ರಿಸೀವ್ ಮಾಡಿರಲಿಲ್ಲ ಮತ್ತೆ ಕಾಲ್ ಮಾಡಿದಾಗ ನಾಟ್ ರೀಚಬಲ್ ಆಗಿದ್ದರು. ಈಗ ಬರಸಿಡಿಲಿನಂತೆ ಈ ಸುದ್ದಿ ಬಂದಿದೆ. ಅನವರತ ಮಹಿಳೆಯರ ಕಷ್ಟಕಾರ್ಪಣ್ಯಗಳಿಗೆ ಮರುಗುತ್ತಿದ್ದ ಮಹಿಳೆಯರ ಕಲ್ಯಾಣಕ್ಕಾಗಿ ಹಾತೊರೆಯುತ್ತಿದ್ದ ನಿಸ್ವಾರ್ಥ ಜೀವನವೊಂದು ಕೊನೆಯಾಗಿದೆ. ಇಂದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದ ಕಾರಣ ನಾಗರತ್ನ ಕೊಂಡ್ಲಿ ಮೇಡಂ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೊಂಡ್ಲಿ ನಾಗರತ್ನಮ್ಮ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಇದಲ್ಲವೇ ಸಾರ್ಥಕ ಬದುಕು.
ನನಗೆ ತೀವ್ರ ಅನಾರೋಗ್ಯ ಕಾಡಿದ್ದ ಸಂದರ್ಭದಲ್ಲಿ, ಆಸ್ಪತ್ರೆಯಿಂದ ಚೇತರಿಸಿಕೊಂಡು ಮನೆಗೆ ಬಂದಾಗ ಅವರು ಕಾಲ್ ಮಾಡಿ, ನಮ್ಮ ಹಳ್ಳಿಗೆ ಬಂದು ಎರಡು ತಿಂಗಳು ರೆಸ್ಟ್ ಮಾಡಿ. ವಾತಾವರಣ ಬದಲಾದರೇ ದೇಹಕ್ಕೂ ಮನಸಿಗೂ ಉತ್ತಮ ಎಂದಿದ್ದು ನೆನಪಾಗುತ್ತಿದೆ. ಈ ಕಾಲ ಅದೆಷ್ಟು ಕ್ರೂರ. ಮಾತುಗಳೇ ಹೊರಡುತ್ತಿಲ್ಲ. ಮಿಸ್ ಯೂ ಮೇಡಂ. ನಿಮ್ಮ ಆದರ್ಶಯುತ ಜೀವನ ಸದಾ ಕಾಲ ನಮ್ಮ ಸ್ಮರಣೆಯಲ್ಲಿರುತ್ತದೆ. ಆ ಸರ್ವಶಕ್ತ ಜಗನ್ಮಾತೆ ನಿಮ್ಮ ಪವಿತ್ರಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಓಂ ಶಾಂತಿ.
– ವಿಶ್ವಾಸ್ ಭಾರದ್ವಾಜ್
ಇದನ್ನೂ ಓದಿ: ಪೆಟ್ಟು ತಿಂದ ಜಿರಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದ ಸಹೃದಯಿ; ವೈದ್ಯರ ಪ್ರಶಂಸೆ