ಕೋವಿಡ್ ನಿಯಮ ಉಲ್ಲಂಘನೆ: ಬೆಳಗಾವಿಯಲ್ಲಿ ಓವೈಸಿ ಮತ್ತು 300 ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು!
AIMIM ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಸೋಮವಾರ ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಓವೈಸಿ ಮತ್ತು ಪಕ್ಷದ 300 ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ ನಿಗಮ ಚುನಾವಣೆಗೆ AIMIM ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಬೆಳಗಾವಿಗೆ ಬಂದಿದ್ದ ಓವೈಸಿ ಕೊರೊನಾ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ, ಒವೈಸಿ ಮತ್ತು ಬೆಂಬಲಿಗರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇತರ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣದಾಖಲಿಸದಾಗಿದೆ ಎಂದು ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿಯಾಗಿರುವ ಶ್ರೀಪಾದ್ ಕುಲಕರ್ಣಿ ತಿಳಿಸಿದ್ದಾರೆ.
ಬೆಳಗಾವಿಯ 58 ವಾರ್ಡ್ಗಳಿಗೆ ನಗರ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಸೆಪ್ಟೆಂಬರ್ 3 ರಂದು ನಡೆಯಲಿದೆ. ಸೆಪ್ಟೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಬೈಲಾ ಉಲ್ಲಂಘನೆ: 40 ಅಂತಸ್ತುಗಳ ಅವಳಿ ಕಟ್ಟಡ ನೆಲಸಮಗೊಳಿಸಲು ಸುಪ್ರೀಂ ಆದೇಶ!
ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಎಐಎಂಐಎಂ ಆರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರ ಪರವಾಗಿ ಪ್ರಚಾರ ಮಾಡಲು ಓವೈಸಿ ನಗರಕ್ಕೆ ಭೇಟಿ ನೀಡಿದ್ದರು.
“ಪ್ರಚಾರದಲ್ಲಿ ಭಾಗವಹಿಸಿದ್ದವರ ಸಂಖ್ಯೆ ನಿಗದಿತ ಮಿತಿಯನ್ನು ಮೀರಿತ್ತು. ಎಐಎಂಐಎಂ ಪಕ್ಷದ ಕಾರ್ಯಕರ್ತರು ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಲಿಲ್ಲ. ಅನೇಕ ಕಾರ್ಯಕರ್ತರು ಮಾಸ್ಕ್ಗಳನ್ನು ಧರಿಸಿರಲಿಲ್ಲ. ಅವರು ಪ್ರಚಾರದ ಸಮಯದಲ್ಲಿ ಕೋವಿಡ್-ಸೂಕ್ತ ನಡಾವಳಿಕೆಯನ್ನು ಅನುಸರಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಪೊಲೀಸರು ಹೇಳಿದರು.
ಎಐಎಂಐಎಂ ಹೊರತುಪಡಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) -ಶಿವಸೇನಾ ಮೈತ್ರಿ (ಎಂಇಎಸ್ ಮಾನ್ಯತೆ ಪಡೆದ ಪಕ್ಷವಲ್ಲದ ಕಾರಣ ಎಲ್ಲರೂ ಸ್ವತಂತ್ರ ಅಭ್ಯರ್ಥಿಗಳು), ಆಮ್ ಆದ್ಮಿ ಪಕ್ಷ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಅಮಿತ್ ಶಾ ಭೇಟಿ ವೇಳೆ ಜಾಹೀರಾತಿಗಾಗಿ 89 ಲಕ್ಷ ಖರ್ಚು ಮಾಡಿದ ಸರ್ಕಾರ!

