ಶೀಘ್ರದಲ್ಲಿ ಕೋಲಾರಕ್ಕೆ ಎತ್ತಿನ ಹೊಳೆ ಯೊಜನೆ ನೀರು – ಜೆ.ಸಿ ಮಧುಸ್ವಾಮಿ ಭರವಸೆ!
ಶೀಘ್ರದಲ್ಲಿ ಕೋಲಾರಕ್ಕೆ ಎತ್ತಿನ ಹೊಳೆ ಯೊಜನೆ ನೀರು ಬಿಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ ಮಧುಸ್ವಾಮಿ ಭರವಸೆ ನೀಡಿದ್ದಾರೆ.
ಮುಳಬಾಗಿಲು ತಾಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊಳಿ ಕೆರೆ ಪಂಪ್ ಹೌಸ್ ನಿಂದ ನೀರನ್ನು ಎತ್ತುವಳಿ ಮಾಡಿ 32 ಕೆರೆಗಳನ್ನು ತುಂಬಿಸುವ ಕಾಮಗಾರಿ ಮತ್ತು ಕೆ.ಸಿ ವ್ಯಾಲಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
“ಕೆ. ಸಿ. ವ್ಯಾಲಿ ಯೋಜನೆ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ 8 ಟಿಎಂಸಿ ಅಡಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸಲಾಗಿದೆ. ಜಿಲ್ಲೆಯ ರೈತರು ಅಗತ್ಯವಾದ ಭೂಮಿಯನ್ನು ಬಿಟ್ಟು ಕೊಟ್ಟರೆ ಶೀಘ್ರದಲ್ಲಿ ಎತ್ತಿನಹೊಳೆ ನೀರನ್ನು ಜಿಲ್ಲೆಗೆ ಹರಿಸಲಾಗುವುದು” ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಧುಸ್ವಾಮಿ ಹೇಳಿದರು.
“2 ನೇ ಹಂತದ ಕೆ. ಸಿ. ವ್ಯಾಲಿ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಜಿಲ್ಲೆಯ ಇತರೆ ಕೆರೆಗಳನ್ನು ತುಂಬಿಸಲಾಗುವುದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಬೇಕಾದರೆ ಉಳಿದ ಕೆರೆಗಳಿಗೆ ನೀರು ತುಂಬಿಸಬೇಕು” ಎಂದು ಮಾಧುಸ್ವಾಮಿ ಹೇಳಿದರು.

