ಲಖಿಂಪುರ ಹತ್ಯಾಕಾಂಡದ ಹಿಂದೆ ಸಚಿವ ಅಜಯ್ ಮಿಶ್ರಾ ಕೈವಾಡ: ಬಿಜೆಪಿ ನಾಯಕ ಆರೋಪ
ಲಖಿಂಪುರ್ ಖೇರಿ ರೈತರ ಹತ್ಯಾಕಾಂಡದ ಹಿಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಕೈವಾಡವಿದೆ ಎಂದು ಉತ್ತರ ಪ್ರದೇಶ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್ ಗುರುವಾರ ಆರೋಪಿಸಿದ್ದಾರೆ.
ಅವರ “ಉದ್ರೇಕಕಾರಿ ಹೇಳಿಕೆ” ಬೆಂಕಿಗೆ ತುಪ್ಪ ಸುರಿದಂತಾಯಿತು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದ ಕಾರಣಕ್ಕಾಗಿ ಪ್ರಧಾನಿಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಾಜಪೇಯಿ ಭಾಷಣದ ವಿಡಿಯೋ ಹಂಚಿಕೊಂಡು ಬಿಜೆಪಿಗೆ ತಿರುಗೇಟು ನೀಡಿದ ವರುಣ್ ಗಾಂಧಿ
“ಘಟನೆ ಬಗ್ಗೆ ಅವರು ರೈತರಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಅವರು ತಮ್ಮ ಮಗನನ್ನು ರಕ್ಷಿಸಲು ಮಾತ್ರ ಪ್ರಯತ್ನಿಸಿದರು. ಘಟನೆಯ ಬಗ್ಗೆ ಅವರು ಇನ್ನೂ ವಿಷಾದಿಸಿಲ್ಲ. ಈ ಘಟನೆಯು ಮಾನವೀಯತೆಗೆ ಕಳಂಕವಾಗಿದೆ” ಎಂದು ರಾಮ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಅವರ ಮಗ ತನ್ನ ಕಾರಿನ ಅಡಿಗೆ ರೈತರನ್ನು ಹಾಕಿ ಹತ್ಯೆ ಮಾಡಿದ್ದಾನೆ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ನಂತರ ಆತನನ್ನು ಬಂಧಿಸಲಾಯಿತು. ಆದರೆ ಇಂದಿಗೂ ಸಚಿವರು ಕುರ್ಚಿಯಲ್ಲಿ ಕುಳಿತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ತಕ್ಷಣವೇ ವಜಾಗೊಳಿಸಬೇಕು” ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮ್ ಸಿಂಗ್, ಲಖಿಂಪುರ್ ಘಟನೆ ಮತ್ತು ಗೋರಖ್‌ಪುರ್ ಉದ್ಯಮಿ ಕೊಲೆ ಪ್ರಕರಣದಿಂದಾಗಿ ಬಿಜೆಪಿ ಸರ್ಕಾರದ ಇಮೇಜ್ ಹಾಳಾಗಿದೆ ಎಂದು ಹೇಳಿದ್ದಾರೆ.
ಲಖಿಂಪುರ್ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಕೂಡ ಸಾವನ್ನಪ್ಪಿದ್ದಾರೆ. ಅವರನ್ನೂ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
“ಈ ಘಟನೆಯ ಬಗ್ಗೆ ಸರ್ಕಾರದ ನಿಷ್ಠುರತೆಯಿಂದಾಗಿ ರಾಜ್ಯದಾದ್ಯಂತ ಕಾರ್ಯಕರ್ತರು ಕೋಪಗೊಂಡಿದ್ದಾರೆ. ರೈತರಿಗೆ ನೀಡಿದಂತೆ ಮೃತ ಕಾರ್ಯಕರ್ತರ ಸಂಬಂಧಿಕರಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡಬೇಕು. ಜೊತೆಗೆ ಅವರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು” ಎಂದು ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿರುವ ಕಾರ್ಯಕರ್ತರ ಸ್ಥಿತಿ “ಬಂಧಿಸಲ್ಪಟ್ಟ ಕಾರ್ಯಕರ್ತ”ರಂತೆ ಆಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಶಾಹಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಅವರು ಈ ಹಿಂದೆ ಹೇಳಿದ್ದರು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದ್ದರು. ಜೊತೆಗೆ ಕೊರೊನಾ ಅಲೆಯನ್ನು ನಿರ್ವಹಿಸಿರುವ ಬಗ್ಗೆಯು ಅವರು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಕೇವಲ ಒಂದು ಮತ ಪಡೆದ ಅಭ್ಯರ್ಥಿ; ‘ಬಿಜೆಪಿ ಸಿಂಗಲ್ ಓಟ್ ಪಾರ್ಟಿ’ ಎಂದು ಟ್ರೋಲ್!

