ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಜೈಲಿಗೆ ಕಳಿಸುತ್ತೇನೆಂದು ಹೇಳಿಲ್ಲ: ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ನಡುವೆ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಚಿವ ಕೆ. ಸುಧಾಕರ್ ಹಾಗೂ ವಿರೋಧ ಪಕ್ಷದ ನಾಯಕರ ನಡುವೆ ವಾಕ್ಸಮರ ಜೋರಾಗಿದೆ. ಈ ಮಧ್ಯೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಆರೋಗ್ಯ ಸಚಿವ ಸ್ಪಷ್ಟನೆ ನೀಡಿದ್ದಾರೆ.

‘ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಏನು ಹೇಳಿದ್ದೇನೆ ಎಂದು ಅರ್ಥ ಮಾಡಿಕೊಳ್ಳದೆ. ಈ ರೀತಿಯ ಆರೋಪ ಮಾಡಿದ್ದಾರೆ’ ಎಂದು ಸುಧಾಕರ್ ಹೇಳಿದ್ದಾರೆ.

“ಕೋಲಾರ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಶಾಸಕ ರಮೇಶ್ ಕುಮಾರ್ ರಿಂಗ್ ಮಾಸ್ಟರ್ ಆಗಿದ್ದಾರೆ. ಶ್ರೀನಿವಾಸಗೌಡರು ರಮೇಶ್ ಕುಮಾರ್ ಅವರಿಂದ ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಬೆರೆಸಲಾಗುತ್ತಿದೆ. ಇದರಲ್ಲಿ ಪಾರದರ್ಶಕ ತನಿಖೆಯಾಗಬೇಕಿದೆ. ಆದರೆ, ಅವರು ತನಿಖೆಗೆ ಒಪ್ಪದೆ ತಡೆಯಾಜ್ಞೆ ತಂದಿದ್ದಾರೆ. ಇದರಲ್ಲೇ ಕಳ್ಳರು ಯಾರು ಎಂದು ಗೊತ್ತಾಗುತ್ತದೆ. ಸತ್ಯ ಹೊರಗೆ ಬಂದರೆ ಜೈಲಿಗೆ ಹೋಗುತ್ತೀರಿ ಎಂದು ಗೊತ್ತಿದೆ” ಎಂದು ಸುಧಾಕರ್ ಹೇಳಿದ್ದರು.

ಈ ಹೇಳಿಕೆಯ ವಿರುದ್ದ ಗುಡುಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, “ಸುಧಾಕರ್​ಗೆ ಅಧಿಕಾರದ ಮದ. ಹಾಗಾಗಿ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ. ಅಧಿಕಾರವನ್ನು ಸುಧಾಕರ್ ಶಾಶ್ವತ ಅಂದುಕೊಂಡಿದ್ದಾರೆ. 2023ಕ್ಕೆ ಅವರೆಲ್ಲರೂ ಮನೆಗೆ ಹೋಗುತ್ತಾರೆ. ಆಗ ಯಾರು ಜೈಲಿಗೆ ಹೋಗುತ್ತಾರೆಂದು ಗೊತ್ತಾಗುತ್ತದೆ” ಎಂದು ಹೇಳಿದ್ದರು.

ಇದನ್ನೂ ಓದಿ: ನಿಡುಮಾಮಿಡಿ ಶ್ರೀಗಳಿಗೆ ಕೈ ಕೊಟ್ಟ ಬಿಜೆಪಿ ಸರ್ಕಾರ; ಜಮೀನು ಮಂಜೂರಾತಿಗೆ ನಕಾರ!

ಇದು ರಾಜ್ಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ನಂತರ, ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿರುವ ಸುಧಾಕರ್, “ನಾನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಏನು ಹೇಳಿದ್ದೇನೆ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು” ಎಂದು ಹೇಳಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ‘ಸರ್ವರಿಗೂ ಸಮಬಾಳು’ ಎಂಬ ಪರಿಕಲ್ಪನೆಯಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಆದ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಆಗಿನ ಸಿಎಂ ಸಿದ್ದರಾಮಯ್ಯನವರಿಗೆ ಅವರೇ ಈ ಬಗ್ಗೆ ಪತ್ರ ನೀಡಿದ್ದರು. ಆಗ ಮುಖ್ಯಮಂತ್ರಿಗಳಾಗಿದ್ದವರು ತನಿಖೆಗೆ ಆದೇಶ ನೀಡಬಹುದಿತ್ತು ಎಂದು ಅವರು ಹೇಳಿದ್ದಾರೆ.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದೇನೆ. ಆದರೆ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಅವರೇ ರಿಂಗ್ ಮಾಸ್ಟರ್ ಆಗಿದ್ದು, ರಾಜಕೀಯ ಲಾಭಕ್ಕಾಗಿ ಎರಡೂ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights