Fact check: RSSನ ಮೋಹನ್ ಭಾಗವತ್ ಜೊತೆ ಓವೈಸಿ ಭೇಟಿ ಎಂಬುದು ಎಡಿಟೆಡ್ ಫೋಟೋ

ದೇಶದ ಜನರನ್ನು ಸದಾ ತಮ್ಮ ಕೋಮು ಭಾಷಣಗಳ ಮೂಲಕವೇ ಪ್ರಚೋದಿಸುವ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳಂತೆ ವರ್ತಿಸುವ ಭಾರತದ ಮಾಹಾನ್ ನಾಯಕರು ಒಂದೇ ಕಡೆ ಸೇರಿರುವ ಅಕ್ಕ ಪಕ್ಕದಲ್ಲಿ ಕುಳಿತಿರುವ ಫೋಟೋ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.

ಕಾರ್ಯಕ್ರಮವೊಂದರಲ್ಲಿ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡುತ್ತಿರುವ ಇತ್ತೀಚಿನ ಚಿತ್ರ ಎಂದು ಹೇಳಿಕೊಳ್ಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರದಲ್ಲಿ ಅಸಾದುದ್ದೀನ್ ಓವೈಸಿ ಅವರು ಮೋಹನ್ ಭಾಗವತ್ ಅವರ ಪಕ್ಕದಲ್ಲಿ ಕುಳಿತಿದ್ದಾರೆ. ಪೋಸ್ಟ್ ಆಗಿರುವ ಈ ಫೋಟೋವನ್ನು ಹಾಗೂ ಫೋಟೋದ ನೈಜತೆಯನ್ನು ಒಮ್ಮೆ ಪರಿಶೀಲಿಸೋಣ.

ಈ ಫೋಟೋವನ್ನು ನೋಡಿದ ಹಲವರು ಏನ್ ಸುದ್ದಿ. ಕಾಮ್ ಗೆ ಕರೆ  ಮಾಡಿ ವೈರಲ್ ಫೋಟೋದ ವಾಸ್ತವ ಏನೆಂದು ತಿಳಿಸುವಂತೆ ಮನವಿ ಮಾಡಿದ್ದರು.

ಫ್ಯಾಕ್ಟ್ ಚೆಕ್:

ಮೋಹನ್ ಭಾಗವತ್ ಮತ್ತು ಓವೈಸಿ ನಡುವೆ ಭೇಟಿ ಆಗಿರುವುದೇ ನಿಜ ಆಗಿರುತ್ತಿದ್ದರೆ ಇಷ್ಟರಲ್ಲಿ ರಾಷ್ಟ್ರ ಮಟ್ಟದ ಸುದ್ದಿ ಪತ್ರಿಕೆಗಳು, ನ್ಯೂಸ್ ಚಾನೆಲ್ ಗಳು ವರದಿ ಮಾಡಬೇಕಿತ್ತು. ಆದರೆ ಆ ರೀತಿಯ ವರದಿಗಳು ನಮಗೆ ಎಲ್ಲೂ ಲಭ್ಯವಾಗಿಲ್ಲ. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 22 ಡಿಸೆಂಬರ್ 2021 ರಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ.

ಲೇಖನದಲ್ಲಿ ಹಂಚಿಕೊಂಡ ಮೂಲ ಫೋಟೋದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪಕ್ಕದಲ್ಲಿ ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಕುಳಿತಿರುವುದನ್ನು ನೋಡಬಹುದು. ಹಾಗಾಗಿ ಅದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಹೊರತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಲ್ಲ ಎಂಬುದು ಖಚಿತವಾಗಿದೆ.

ಅದೇ ರೀತಿ ನಾವು ಬೇರೆ ಬೇರೆ ವೆಬ್ ಸೈಟ್ ಗಳನ್ನು ಹುಡುಕಿದಾಗ , ಹಲವಾರು ಸುದ್ದಿ ವೆಬ್‌ಸೈಟ್‌ಗಳು ತಮ್ಮ ಲೇಖನಗಳಲ್ಲಿ ಮೂಲ ಚಿತ್ರವನ್ನು ಹಂಚಿಕೊಂಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು 20 ಡಿಸೆಂಬರ್ 2021 ರಂದು ಸೆರೆಹಿಡಿಯಲಾಗಿದೆ, ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್ ಮತ್ತು ಮುಲಾಯಂ ಸಿಂಗ್ ಯಾದವ್ ಮಾತುಕತೆ ನಡೆಸುತ್ತಿದ್ದರು. ಆ ಫೋಟೊದಲ್ಲಿ ಮುಲಾಯಂ ಸಿಂಗ್ ಯಾದವ್‌ರವರನ್ನು ಕಟ್ ಮಾಡಿ ಆ ಜಾಗಕ್ಕೆ ಓವೈಸಿಯವರ ಫೋಟೊ ಸೇರಿಸಿ ಎಡಿಟ್ ಮಾಡಲಾಗಿದೆ.

ಒಟ್ಟಿನಲ್ಲಿ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಯವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದಂತೆ ಫೋಟೋವನ್ನು ಎಡಿಟ್ ಮಾಡಿ ಫೋಟೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

 


ಇದನ್ನು ಓದಿರಿ: Fact Check: ಭಾರತ-ಪಾಕ್ ವಿಭಜನೆ: 74 ವರ್ಷಗಳ ನಂತರ ಒಂದಾದ ಸಹೋದರರು – ಸುಳ್ಳು ಬಿತ್ತಿದ ಧರ್ಮಾಂಧರು!

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights