ಫ್ಯಾಕ್ಟ್‌ಚೆಕ್: ದೆಹಲಿಯಲ್ಲಿ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಮುಸ್ಲಿಮರಲ್ಲ

ಹಾಡುಹಗಲೆ ರಸ್ತೆಯೊಂದರಲ್ಲಿ ದುಷ್ಕರ್ಮಿಗಳಿಬ್ಬರು, ವ್ಯಕ್ತಿಯೊಬ್ಬರನ್ನು ಹೊಡೆದು ಕೊಲ್ಲುವ ದೃಶ್ಯವಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊ ಜತೆಗೆ  ‘ನೋಡಿ, ಹಿಂದೂ ವ್ಯಕ್ತಿಯೊಬ್ಬರನ್ನು ರೋಹಿಂಗ್ಯಾ ಮುಸ್ಲಿಮರು ಹೊಡೆದು ಕೊಂದಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿರುವ ಇವರು, ದೇಶದ ನಿವಾಸಿಗಳಾದ ಹಿಂದೂಗಳನ್ನು ಹೊಡೆದು ಕೊಲ್ಲುತ್ತಿದ್ದಾರೆ. ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಒದ್ದೋಡಿಸಿ ಎಂದು ಸರ್ಕಾರವನ್ನು ಆಗ್ರಹಿಸಬೇಕು’ ಎಂಬುದಾಗಿ ಬರೆಯಲಾಗಿದೆ. ಈ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೊದ  ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜೂನ್ 4, 2022 ರಂದು ಹಿಂದೂಸ್ತಾನ್ ತೆಹಲ್ಕಾ ಚಾನೆಲ್‌ನಲ್ಲಿ ಈ ಸಂಬಂಧಿತ ವೀಡಿಯೊ ವರದಿ ಲಭ್ಯವಾಗಿದೆ. ವಿಡಿಯೊದ ಶೀರ್ಷಿಕೆಯು “ದೆಹಲಿ ಮರ್ಡರ್ ನ್ಯೂಸ್ ಎಂದಿದ್ದು ಹಗಲು ಹೊತ್ತಿನಲ್ಲಿ ಯುವಕನನ್ನು ಕಲ್ಲು ಮತ್ತು ಚಾಕುವಿನಿಂದ ಕೊಲೆ ಮಾಡಲಾಗಿದೆ” ಎಂದು ಬರೆಯಲಾಗಿದೆ. ಈ ವಿಡಿಯೊ ವೈರಲ್ ವೀಡಿಯೊದ ತುಣುಕನ್ನು ಹೊಂದಿದೆ ಮತ್ತು ಘಟನೆಯು ದೆಹಲಿಯ ಆಜಾದ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳುತ್ತದೆ.

ಜೂನ್ 4, 2022 ರಂದು ಪ್ರಕಟವಾದ ಇಂಡಿಯಾಟಿವಿಯ ವರದಿಯಲ್ಲೂ ವೈರಲ್ ವಿಡಿಯೊದ ಸ್ನ್ಯಾಪ್‌ಶಾಟ್  ಕಂಡುಬಂದಿದೆ. ವರದಿಯ ಪ್ರಕಾರ, ದೆಹಲಿಯ ಆದರ್ಶ ನಗರದಲ್ಲಿ, 28 ವರ್ಷದ ಯುವಕನನ್ನು ಇಬ್ಬರು ಸಹೋದರರು ಹಾಡಹಗಲೇ ಕೊಲೆ ಮಾಡಿದ್ದಾರೆ. ಜೂನ್ 3, 2022 ರಂದು ನಡೆದ ಈ ಘಟನೆಯು ಸಿಸಿಟಿವಿ ಫೂಟೇಜ್‌ನಲ್ಲಿ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಂಡು ಮತ್ತೊಂದು ಕೀವರ್ಡ್ ಸರ್ಚ್ ನಡೆಸಿದಾಗ, ಹಿಂದೂಸ್ತಾನ್ ಟೈಮ್ಸ್ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಈ ವರದಿಗಳನ್ನು ನಾವು ನೋಡಿದ್ದೇವೆ. ಹಿಂದೂಸ್ತಾನ್ ಟೈಮ್ಸ್ ವರದಿಯು ಜೂನ್ 4, 2022 ರಂದು ಪ್ರಕಟವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 2.15 ಕ್ಕೆ ಕರೆ ಬಂದಿದ್ದು, ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೂ ತೀವ್ರ ಹಲ್ಲೆಯ ಹಿನ್ನಲೆಯಲ್ಲಿ ವ್ಯಕ್ತಿ ಮೃತಪಟ್ಟನೆಂದು ವರದಿಯಾಗಿದೆ.

ಈ ಘಟನೆಯ ಕುರಿತು ‘ದಿ ಲಾಜಿಕಲ್ ಇಂಡಿಯನ್‌’ ಫ್ಯಾಕ್ಟ್‌ಚೆಕ್ ವರದಿ ಪ್ರಕಟಿಸಿದೆ. ‘ದೆಹಲಿಯ ಆಜಾದ್‌ಪುರದಲ್ಲಿ 2022ರ ಮಾರ್ಚ್‌ 3ರಂದು ಈ ಕೊಲೆ ನಡೆದಿದೆ. ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಇರುವಂತೆ ಇದು ಹಿಂದೂವನ್ನು ರೋಹಿಂಗ್ಯಾ ಮುಸ್ಲಿಮರು ಕೊಂದ ಪ್ರಕರಣವಲ್ಲ. ಬದಲಿಗೆ ಆಜಾದ್‌ಪುರದ ನಿವಾಸಿಯಾದ ನರೇಂದರ್ ಅವರನ್ನು, ಅವರ ಸ್ನೇಹಿತರಾದ ರಾಹುಲ್ ಕಾಳಿ, ರೋಹಿತ್ ಕಾಳಿ ಅವರು ಹೊಡೆದು ಕೊಂದಿದ್ದರು. ಹಣಕಾಸಿನ ವಿಚಾರಕ್ಕೆ ಈ ಕೊಲೆ ನಡೆದಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇದೆ. ಆದರೆ, ಸುಳ್ಳು ಮಾಹಿತಿಯೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ನರೇಂದರ್ ಎಂಬ ಹಿಂದೂ ವ್ಯಕ್ತಿಯು ತನ್ನ ಮಾದಕ ವ್ಯಸನದ ಕಾರಣಕ್ಕೆ ಹಣವನ್ನು ಸಾಲವಾಗಿ ನೀಡುವಂತೆ ಹಿಂದೂ ಸಹೋದರರಾದ ರಾಹುಲ್ ಕಾಳಿ ಮತ್ತು ರೋಹಿತ್ ಕಾಳಿಯನ್ನು ಪದೇ ಪದೇ ಪೀಡುಸುತ್ತಿದ್ದ, ಇದು ಅತಿರೇಖಕ್ಕೆ ತಲುಪಿದಾಗ  ಸಿಟ್ಟಾದ ರಾಹುಲ್ ಕಾಳಿ ಜೂನ್ 3, 2022 ರಂದು ನರೇಂದ್ರನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಈ ಎಲ್ಲಾ ವರದಿಗಳಲ್ಲಿ ಆರೋಪಿಗಳು ರೋಹಿಂಗ್ಯಾ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎಂಬ ಉಲ್ಲೇಖವಿಲ್ಲ. ಹಾಗಾಗಿ ಈ ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದು ಖಚಿತವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಬಾಯ್ಕಾಟ್ ಕತಾರ್ 2022 ಕತಾರ್ ಎಕ್ಸ್‌ಪೋಸ್ಡ್’ ಬ್ಯಾನರ್‌ನ ಅಸಲಿಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.