ಫ್ಯಾಕ್ಟ್‌ಚೆಕ್: ಭಾರತಕ್ಕೆ ಮನಮೋಹನ್ ಸಿಂಗ್‌ರಂತಹ ಪ್ರಧಾನಿ ಅಗತ್ಯವಿದೆ ಎಂದು ಸುನಕ್ ಹೇಳಿದ್ದು ನಿಜವೇ?

ಬ್ರಿಟನ್‌ಗೆ ಹೊಸದಾಗಿ ನೇಮಕಗೊಂಡ ಪ್ರಧಾನಿ ರಿಷಿ ಸುನಕ್ ಅವರು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೊಗಳಿ ಹೇಳಿಕೆ ನೀಡಿದ್ದಾರೆ ಎಂಬ ಪೋಸ್ಟ್‌ರ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬೆನ್ನಲ್ಲೆ ರಿಷಿ ಇಂತಹ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.

ವೈರಲ್ ಪೋಸ್ಟ್ ಪ್ರಕಾರ, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಮತ್ತು ಆರ್ಥಿಕತೆಯನ್ನು ಸುಧಾರಿಸಲು ಭಾರತಕ್ಕೆ ಸಿಂಗ್ ಅವರಂತಹ ಪ್ರಧಾನಿ ಅಗತ್ಯವಿದೆ ಎಂದು ಸುನಕ್ ಹೇಳಿದ್ದಾರೆ.

ಭಾರತವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಲು ಕುಸಿದಿರುವ ಆರ್ಥಿಕತೆಯನ್ನು ಸುಧಾರಿಸಲು ಭಾರತಕ್ಕೆ ಡಾ. ಮನಮೋಹನ್ ಸಿಂಗ್‌ರಂತಹ ಪ್ರಧಾನಿ ಅವಶ್ಯಕತೆಯಿದೆ ಎಂದು ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ರಿಷಿ ಸುನಕ್ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ಹೊಗಳಿ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ  ಬ್ರಿಟನ್‌ನ ನೂತನ ಪ್ರಧಾನಿ ರಿಷಿ ಸುನಕ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳನ್ನು ಪ್ರಶಂಸಿಸಿ ಹೇಳಿಕೆ ನೀಡಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮಾಜಿ ಪ್ರಧಾನಿಗಳ ಬಗ್ಗೆ ಅಂತಹ ಹೇಳಿಕೆಯನ್ನು ನೀಡಿರುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಲಭ್ಯವಾಗಿಲ್ಲ.

ನಂತರ ಸುನಕ್ ಮತ್ತು ಸಿಂಗ್ ಅವರ ಕೊಲಾಜ್‌ ಫೋಟೊವನ್ನು ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ, ಅಕ್ಟೋಬರ್ 25 ರಂದು ದೈನಿಕ್ ಭಾಸ್ಕರ್ ಅವರು ಹಂಚಿಕೊಂಡ ಟ್ವೀಟ್‌ನಲ್ಲಿ ಅದನ್ನು ಕಂಡುಕೊಂಡಿದ್ದೇವೆ. ಆದರೂ ಚಿತ್ರದ ಪಠ್ಯವು ವಿಭಿನ್ನವಾಗಿತ್ತು.

ಬ್ರಿಟನ್‌ನಲ್ಲಿ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ನೇಮಕವಾಗುತ್ತಿದ್ದಂತೆ ಭಾರತದಲ್ಲಿ ಮೂಲ ನಿವಾಸಿಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಭಾರತದ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಗೆ ಏರಲು ಸಾಧ್ಯವಾದರೆ, ಭಾರತದಲ್ಲಿ ಯಾಕೆ ಅಸಾಧ್ಯ ಎಂದು ಪಿ.ಚಿದಂಬರಂ ಮತ್ತು ಶಶಿ ತರೂರ್ ಹೇಳಿಕೆಗೆ BJP ತಿರುಗೇಟು ನೀಡಿದೆ ಎಂದು ಹೇಳಲಾಗಿದೆ.

2004ರ ಪಾರ್ಲಿಮೆಂಟ್ ಚುನಾವಣೆಯಲ್ಲಿ UPA ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು, ಪ್ರಧಾನಿಯಾಗಿ ಸೋನಿಯಾ ಗಾಂಧಿಯನ್ನು ಆಯ್ಕೆ ಮಾಡುವ ವಿಚಾರ ಬಂದಾಗ BJP ಅದನ್ನು ತೀವ್ರವಾಗಿ ವಿರೋದಿಸಿತ್ತು ಮತ್ತು ಅವರನ್ನು ಇಟಲಿ ಮಹಿಳೆ, ಭಾರತದ ಮೂಲ ಅಲ್ಲದವರು ದೇಶದ ಪ್ರಧಾನಿ ಹುದ್ದೆ ಅಲಂಕರಿಸಬಾರದು ಎಂದು ಆಕ್ಷೇಪವೆತ್ತಿತ್ತು ನಂತರ ಸೋನಿಯಾ ಗಾಂಧಿ ಬದಲಿಗೆ ಡಾ.ಮನಮೋಹನ್ ಸಿಂಗ್ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.

ಈಗ ಬ್ರಿಟನ್‌ನಲ್ಲಿ ಪ್ರಧಾನಿಯಾಗಿ ನೇಮಕಗೊಂಡಿರುವ ರಿಷಿ ಸುನಕ್ ಮೂಲ ಬ್ರಿಟನ್‌ನವರಲ್ಲ, ಹಾಗಾಗಿ ಭಾರತದ ರಾಜಕೀಯ ವಲಯದಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ರಿಷಿ ಸುನಕ್ ಅವರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ ಎಂಬ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಬದಲಿಗೆ ಇನ್ಫೋಸಿಸ್ ನಾರಾಯಣ ಮೂರ್ತಿ ದೇಶದ ಆರ್ಥಿಕ ಸುಧಾರಣೆಗಾಗಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿಕೆ ನೀಡಿದ್ದರು ಎನ್ನುವುದು ಗಮನಾರ್ಹ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ಮತ್ತು ಆರ್ಥಿಕತೆಯನ್ನು ಸುಧಾರಿಸಲು ಭಾರತಕ್ಕೆ ಸಿಂಗ್ ಅವರಂತಹ ಪ್ರಧಾನಿ ಅಗತ್ಯವಿದೆ ಎಂದು ಹೇಳಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಿಷಿ ಸುನಕ್ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡ ಇಂಡಿಯಾ ಟುಡೇ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights