ಫ್ಯಾಕ್ಟ್‌ಚೆಕ್: ಬೇರೆ ಧರ್ಮದವರು 10 ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ಭಾರತದ ಸನ್ಯಾಸಿಗಳು/ಸ್ವಾಮೀಜಿಗಳು ಯಾಕೆ ಮಕ್ಕಳನ್ನು ಹುಟ್ಟಿಸುವುದರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ? ಸ್ವಾಮಿಜಿಗಳಿಗೂ ಸಂತಾನೋತ್ಪತ್ತಿಗೂ ಏನು ಸಂಬಂಧ? ಸಂಸಾರಿಗಳಿಗಿಲ್ಲದ ಸಮಸ್ಯೆ ಸಾಧು ಸಂತ, ಸ್ವಾಮಿಜಿ ಎನ್ನಿಸಿಕೊಂಡವರಿಗೆ ಯಾಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇಂತಹದೊಂದು ಪ್ರಶ್ನೆ ಉದ್ಭವವಾಗಲು ಕಾರಣ ಇತ್ತೀಚೆಗೆ ಶಿರಸಿಯಲ್ಲಿ ನಡೆದ ಹಿಂದೂ ಸಮಾವೇಶ. ಈ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೀಡಿದೆ ಹೇಳಿಕೆ! ಹಾಗಿದ್ದರೆ ಅವರು ನೀಡಿದ ಹೇಳಿಕೆಯಾದರೂ ಏನು ?

“ಹಿಂದುಸ್ಥಾನದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಬಾರದು. ಜೊತೆಗೆ ಅಲ್ಪಸಂಖ್ಯಾತರಾಗಬಾರದು. ಹಿಂದೂಗಳು ಮೂರು ತಪ್ಪುಗಳನ್ನು ಮಾಡುತ್ತಿದ್ದಾರೆ

  1. ಬೇರೆ ಸಮುದಾಯದವರು 15ನೇ ವರ್ಷಕ್ಕೆ ಮದುವೆ ಮಾಡುತ್ತಾರೆ. ಹಮ್ ದೋ ಹಮಾರೆ ದಸ್​ ಎನ್ನುತ್ತಾರೆ. (ನಾವಿಬ್ಬರೂ ನಮಗೆ ಹತ್ತು ಜನ ಮಕ್ಕಳು)
  2. ಆದರೆ ಹಿಂದುಗಳು 30 ವರ್ಷವಾದರೂ ಮದುವೆ ಆಗಲ್ಲ. ಹಮ್ ದೋ ಹಮಾರೆ ಏಕ್ ಬಸ್ ಎನ್ನುತ್ತಾರೆ. (ನಾವಿಬ್ಬರೂ ನಮಗೆ ಒಂದೇ ಮಗು ಸಾಕು)
  3. ಇದಕ್ಕೆ ಕಾನೂನಿನ ತೊಡಕು ಸಹ ಕಾರಣವಾಗಿದೆ. ಹಿಂದೂ ಸಮಾಜಕ್ಕೆ ಒಂದು ಕಾನೂನಾದರೆ, ಬೇರೆ ಸಮಾಜಕ್ಕೆ ಬೇರೆ ಕಾನೂನು ಇದೆ. ಹಿಂದೂ ಸಂತತಿಯನ್ನು ಅತೀ ನಿಯಂತ್ರಣ ಮಾಡುತ್ತಿದ್ದಾರೆ.

ಹೇಳಿಕೆಯನ್ನು ಶಿರಸಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೀಡಿದ್ದಾರೆ. ದೇಶದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಇದಕ್ಕೆ ಮುಸ್ಲಿಂ ಜನಸಂಖ್ಯೆಯನ್ನು ಉದಾಹರಣೆಯಾಗಿ ನೀಡಿ ಮುಸ್ಲಿಮರ ಜನಸಂಖ್ಯೆ ಹಿಂದೂಗಳ ಜನಸಂಖ್ಯೆಗಿಂತ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಆದರೆ ಭಾರತದ ಜನಸಂಖ್ಯೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಜನಸಂಖ್ಯಾ ಬೆಳವಣಿಗೆ ದರವು ಹೇಗೆ ಕೊಡುಗೆಯನ್ನು ನೀಡಿದೆ ಮತ್ತು ಅವುಗಳ ನಡುವೆ ಇರುವ ವ್ಯತ್ಯಾಸವನ್ನು ಅಳೆಯುವ ವರದಿಗಳು ಈ ಸಾಧು ಸಂತರು ನೀಡಿರು ಹೇಳಿಕೆಗೆ ವ್ಯತಿರಿಕ್ತವಾಗಿದೆ.

ಭಾರತದ ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಮೇಲೆ ಬಹು ಬೇಗನೆ ಮಾಡುಬಹುದಾದ ಆರೋಪವೆಂದರೆ ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ. ಜನಸಂಖ್ಯೆ ನಿಯಂತ್ರಣದ ಕಾನೂನು ಇವರಿಗೆ ಅನ್ವಯಿಸುವುದಿಲ್ಲ. ಇದರಿಂದ ದೇಶ ಅಪಾಯದ ಪರಿಸ್ಥಿತಿ ತಲುಪಲಿದೆ ಎಂದು ಹೇಳುತ್ತಾರೆ. ಇದು ಸತ್ಯಕ್ಕೆ ದೂರ.

ವಾಸ್ತವವೇನು?

ಆದರೆ ವಾಸ್ತವಗಳು ಬೇರೆಯೇ ಕತೆಯನ್ನು ಹೇಳುತ್ತವೆ. ಅಪಾಯಕಾರಿ ಜನಸಂಖ್ಯೆಯ ಹೆಚ್ಚಳದ ಪ್ರತಿಪಾದನೆ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯಲ್ಲಿ ಇರುವ ವಾಸ್ತವ ವ್ಯತ್ಯಾಸಗಳೇನು ಎಂಬುದನ್ನು ಸಾಕ್ಷಿಗಳು ಬಯಲಿಗೆಳೆದಿವೆ.

ಈ ಕುರಿತು ‘ದಿ ವೈರ್‌’ ಹಿಂದೆಯೇ ವರದಿ ಮಾಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019-21) ಪ್ರಕಾರ ಹಿಂದೂ  ಮತ್ತು ಮುಸ್ಲಿಂ ಫಲವತ್ತತೆಯ ನಡುವಿನ ವ್ಯತ್ಯಾಸವು ಕೇವಲ 0.42ರಷ್ಟಿದೆ ಎಂದು ಹೇಳುತ್ತದೆ. ಪ್ರತಿ ಹಿಂದೂ ಮಹಿಳೆಗೆ 1.94 ಮಕ್ಕಳು, ಪ್ರತಿ ಮುಸ್ಲಿಂ ಮಹಿಳೆಗೆ 2.36 ಮಕ್ಕಳು ಇರುವುದಾಗಿ ಸಮೀಕ್ಷೆ ಉಲ್ಲೇಖಿಸಿದೆ.

ನಾವು ‘ಟ್ರೆಂಡ್’ ಅನ್ನು ಗಣನೆಗೆ ತೆಗೆದುಕೊಂಡಾಗ ನಿಜವಾದ ಚಿತ್ರಣ ಸಿಗುತ್ತದೆ. ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಫಲವತ್ತತೆ 30%, ಮುಸ್ಲಿಮರಲ್ಲಿ 35% ಕುಸಿದಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕುಸಿತದ ಪ್ರಮಾಣವು ಹಿಂದೂಗಳಿಗಿಂತ ಹೆಚ್ಚಾಗಿದೆ. 2030ರ ವೇಳೆಗೆ ಹಿಂದೂ-ಮುಸ್ಲಿಂ ಫಲವತ್ತತೆ ದರಗಳು ಸಂಪೂರ್ಣ ಒಮ್ಮುಖದ ಹಾದಿಯಲ್ಲಿರುತ್ತವೆ (ಸಮಾನವಾಗಿರುತ್ತವೆ) ಎಂಬುದನ್ನು ಸಮೀಕ್ಷೆಗಳು ಕಂಡುಕೊಂಡಿವೆ.

ಪ್ಯೂ ರಿಸರ್ಚ್ ಸೆಂಟರ್‌ನ 2021ರ ವರದಿಯು ಸಹ ಈ ಸಂಶೋಧನೆಗಳನ್ನು ಸಮರ್ಥಿಸುತ್ತದೆ. ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣವು ಈಗ ಬಹುತೇಕ ಹಿಂದೂಗಳಿಗೆ ಸಮಾನವಾಗಿದೆ. 1992 ಮತ್ತು 2015ರ ನಡುವೆ, ಮುಸ್ಲಿಂ ಫಲವತ್ತತೆ ದರವು 4.4 ರಿಂದ 2.6ಕ್ಕೆ ಕುಸಿದಿದ್ದರೆ, ಹಿಂದೂಗಳಲ್ಲಿ 3.3ರಿಂದ 2.1ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.

ಇತ್ತೀಚಿನ ಯುನೈಟೆಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ (2022) ಹೆಚ್ಚು ಹೆಚ್ಚು ದೇಶಗಳು ಜನಸಂಖ್ಯೆಯ ಕುಸಿತವನ್ನು ಅನುಭವಿಸಲು ಪ್ರಾರಂಭಿಸಿವೆ ಎಂದು ವರದಿ ಮಾಡಿದೆ. ಜಗತ್ತಿನಾದ್ಯಂತ ಇಳಿಮುಖವಾಗುತ್ತಿರುವ ಜನನ ಪ್ರಮಾಣವು ರಾಜಕೀಯ ವರ್ಗ ಮತ್ತು ನೀತಿ ನಿರೂಪಕರಲ್ಲಿ ಗಂಭೀರ ಭೀತಿಯನ್ನು ಉಂಟುಮಾಡುತ್ತಿದೆ. ಕುಗ್ಗುತ್ತಿರುವ ಜನಸಂಖ್ಯೆಯು ಭೌಗೋಳಿಕ ರಾಜಕೀಯ ಮತ್ತು ಸುಸ್ಥಿರ ಅಭಿವೃದ್ಧಿಗೆ ದೊಡ್ಡ ತೊಡಕು ಎಂದಿವೆ. ಹೀಗಾಗಿ, ವಿಶ್ವದ ಯಾವುದೇ ದೇಶವು ಮಾನವ ಜಾತಿಯ ಕಡಿಮೆ ಫಲವತ್ತತೆಯ ಪ್ರಮಾಣವನ್ನು ಸ್ವಾಗತಿಸುವುದಿಲ್ಲ. ಪ್ರಸ್ತುತ, ಜಗತ್ತಿನಾದ್ಯಂತ 197 ದೇಶಗಳಲ್ಲಿ ಸುಮಾರು 114 ದೇಶಗಳು ತಮ್ಮ ಜನಸಂಖ್ಯೆಯ ಬೆಳವಣಿಗೆಯನ್ನು ಹೆಚ್ಚಿಸಲು ಅಥವಾ ನಿರ್ವಹಿಸಲು ಬಯಸುತ್ತವೆ ಎಂದು ವರದಿಗಳು ಉಲ್ಲೇಖಿಸುತ್ತವೆ.

ಈ ಹಿಂದೆಯೂ RSS ನ ಮೋಹನ್ ಭಾಗವತ್ ಕೂಡ ದಸರಾ ಸಂದರ್ಭದಲ್ಲಿ ಧರ್ಮಾದಾರಿತ ಅಸಮತೋಲನ ಜನಸಂಖ್ಯೆಯನ್ನು ಪ್ರಸ್ತಾಪಿಸಿ ಮುಸ್ಲಿಂ ಸಮುದಾಯದಿಂದ ಭಾರತ ಅಪಾಯದಲ್ಲಿದೆ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದನು ಇಲ್ಲಿ ನೆನೆಯಬಹುದು.

ಈ ಎಲ್ಲಾ ವರದಿಗಳನ್ನು ಅವಲೋಕಿಸಿದಾಗ ತಿಳಿಯುವುದೇನೆಂದರೆ, ಮುಸ್ಲಿಂ ಜನಸಂಖ್ಯೆ ಹಿಂದೂ ಜನಸಂಖ್ಯೆಗಿಂತ ಹೆಚ್ಚಾಗಿಲ್ಲ. ಬದಲಿಗೆ ಎರಡರಲ್ಲೂ ಕುಸಿತ ಕಂಡಿದೆ ಎಂದು ಹೇಳುತ್ತವೆ. ಆದರೆ ಈ ಕೆಲಸಕ್ಕೆ ಬಾರದ ಸ್ವಾಮಿಜಿಗಳು ಇದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ,  ಬೇರೆ ಸಮುದಾಯದವರು 15 ವರ್ಷಕ್ಕೆ ಮದುವೆಯಾಗುತ್ತಾರೆ, 10 ಮಕ್ಕಳನ್ನು ಹುಟ್ಟಿಸುತ್ತಾರೆ ಎಂದು ಸುಳ್ಳು ಹೇಳಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೆ ಭಾರತದಲ್ಲಿ ಧರ್ಮದ ಆಧಾರದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನುಗಳಿಲ್ಲ. ಹೆಣ್ಣು ಮಕ್ಕಳ ಶಿಕ್ಷಣ, ಉದ್ಯೋಗದ ಪ್ರಶ್ನೆಗಳ ಬಗ್ಗೆ ಮಾತನಾಡದೆ ಚಿಕ್ಕ ವಯಸ್ಸಿಗೆ ಮದುವೆ ಮಾಡಿ ಎಂದು ಬಹಿರಂಗವಾಗಿ ಹೇಳುತ್ತಿರುವ ಇವರು ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ನಾಡಿನ ಜನರನ್ನು ವಂಚಿಸುತ್ತಿದ್ದಾರೆ.

ಒಟ್ಟಾರೆಯಾಗಿ ಶಿರಸಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೀಡಿದ ಮೂರು ಹೇಳಿಕೆಗಳು ಸಹ ಸುಳ್ಳುಗಳಿಂದ ಕೂಡಿವೆ. ಅವುಗಳಿಗೆ ಯಾವುದೇ ಆಧಾರಗಳಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತಮಿಳುನಾಡಿನ DMK ಸರ್ಕಾರ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಮುಂದಾಗಿರುವುದು ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಬೇರೆ ಧರ್ಮದವರು 10 ಮಕ್ಕಳು ಹುಟ್ಟಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

  • November 14, 2022 at 10:25 pm
    Permalink

    ಕೋಮುವಾದಿ ಸ್ವಾಮಿಗಳದ್ದು ಹಿಟ್ ಆಂಡ್ ರನ್ ಕೇಸ್.

    Reply

Leave a Reply

Your email address will not be published.

Verified by MonsterInsights