ಫ್ಯಾಕ್ಟ್‌ಚೆಕ್: FIFA ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯದ ವೇಳೆ ಅಭಿಮಾನಿಗಳು ಬಿಯರ್ ಟಿನ್‌ಗಳಿಗೆ ಪೆಪ್ಸಿ-ಕೋಲಾದ ಕವರ್ ಬಳಸಿ ಅಕ್ರಮವಾಗಿ ಕೊಂಡೊಯ್ದು ಸಿಕ್ಕಿ ಬಿದ್ದಿದ್ದು ನಿಜವೇ?

FIFA ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗೆ ಅಲ್‌ ಖೋರ್‌ನಲ್ಲಿರುವ “ಅಲ್‌ ಬೈತ್‌’ ಕ್ರೀಡಾಂಗಣ ರವಿವಾರ ರಾತ್ರಿ ಅದ್ಧೂರಿಯಾಗಿ ಆರಂಭವಾಗಿದೆ. ಫಿಫಾ ವಿಶ್ವಕಪ್​​ 2022 ಅನ್ನು ಅರಬ್ ದೇಶಕ್ಕೆ 2010ರಲ್ಲಿ ಆತಿಥ್ಯದ ಹೊಣೆ ನೀಡಲಾಯಿತು.ಆದರೆ ಟೂರ್ನಿಯನ್ನು ಕತಾರ್​ಗೆ ನೀಡಿದಾಗಿನಿಂದ ಅಂದಿನಿಂದ ಇಂದಿನವರೆಗೂ ಒಂದಲ್ಲಾ ಒಂದು ವಿವಾದಗಳು ಕೇಳಿಬರುತ್ತಲೇ ಇದೆ.

ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಕತಾರ್‌ನ ಕ್ರೀಡಾಂಗಣಗಳ ಪರಿಧಿಯ ಒಳಗೆ ಅಥವಾ ಸುತ್ತಲೂ ಬಿಯರ್  ಮಾರಾಟ ಮಾಡಲಾಗುವುದಿಲ್ಲ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಕತಾರ್‌ನ ಫುಟ್ಬಾಲ್ ಸ್ಟೇಡಿಯಂಗಳಿಗೆ ಅಭಿಮಾನಿಗಳು ಬಿಯರ್ ಟಿನ್‌ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ನೀವು ಚಾಪೆ ಕೆಳಗೆ ನುಸುಳಿದ್ರೆ, ನಾವು ರಂಗೋಲಿ ಕೆಳಗೆ ನುಸುಳ್ತಿವಿ ಅನ್ನೂ ಮಾತಿನಂಗೆ, ಮದ್ಯಗಳನ್ನ ಕ್ರೀಡಾಂಗಣದೊಳಗೆ ಒಯ್ಯುವುದನ್ನು ನಿಷೇದ ಮಾಡಿದ್ದರು, ಬಿಯರ್ ಟಿನ್ ಮತ್ತು ವಿವಿಧ ಕಂಪನಿಯ ಬಿಯರ್ ಉತ್ಪನ್ನಗಳಿಗೆ  ಪೆಪ್ಸಿ ಮತ್ತು ಕೋಕಾ-ಕೋಲಾ ಕವರ್‌ಗಳನ್ನು ಲೇಪಿಸಿ ಅಧಿಕಾರಿಗಳಿಗೆ ಸಂದೇಹ ಬರದಂತೆ ಬಳಸಲಾಗುತ್ತಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ನವೆಂಬರ್ 13, 2015 ರಂದು ಪ್ರಕಟವಾದ ಹಲವು ಸುದ್ದಿ ವರದಿಗಳು ಲಭ್ಯವಾಗಿದ್ದು, ನ್ಯೂಸರ್‌ನಲ್ಲಿಯೂ ಅದೇ  ವರದಿಯು ಪ್ರಕಟವಾಗಿರುವುದು ಕಂಡುಬಂದಿದೆ.

ವರದಿಯ ಪ್ರಕಾರ, 2015 ನವೆಂಬರ್ 11 ಸೌದಿ ಅರೇಬಿಯಾದ ಕಸ್ಟಮ್ ಅಧಿಕಾರಿಗಳು 48,000 ಕ್ಯಾನ್‌ಗಳ ಹೈನೆಕೆನ್ ಬಿಯರ್ ಅನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಮದ್ಯವನ್ನು ನಿಷೇಧಿಸಲಾಗಿದ್ದು, ಅಲ್ ಬಥಾ ಗಡಿಯ ಮೂಲಕ ಸೌದಿ ಅರೇಬಿಯಾಕ್ಕೆ 48 ಸಾವಿರ ಕ್ಯಾನ್ ಅನ್ನು ಸಾಗಿಸುತ್ತಿದ್ದಾಗ ದಾಳಿ ನಡೆಸಿ ಬಂಧಿಸಲಾಗಿದೆ. 48,000 ಕ್ಯಾನ್‌ಗಳ ಹೈನೆಕೆನ್ ಬಿಯರ್ ಟಿನ್‌ಗಳಿಗೆ ಪೆಪ್ಸಿ ಚಿತ್ರಗಳನ್ನು ಲೇಪಿಸಿ ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸಲಾಗಿದೆ ಎಂದು ವರದಿಯಾಗಿದೆ.

ನವೆಂಬರ್ 11, 2015 ರಿಂದ ಸೌದಿ ಅರೇಬಿಯಾದ ಕಸ್ಟಮ್ಸ್ ಇಲಾಖೆಯ ಅಧಿಕೃತ ಖಾತೆಯಿಂದ ಮಾಡಿದ ಟ್ವೀಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಟ್ವೀಟ್‌ನಲ್ಲಿ ಅದೇ ಚಿತ್ರವಿದ್ದು, ಈ ನಡೆಯುತ್ತಿರುವ ವಿಶ್ವಕಪ್‌ಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ಎರಡನೇ ಫೋಟೋವನ್ನು ಗೂಗಲ್ ಸರ್ಚ್ ಮಾಡಿದಾಗ, ವಿವಿಧ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಕಂಡುಬಂದಿದೆ. ವಿಶ್ವಕಪ್ ಆರಂಭವಾಗುವ ಆರು ತಿಂಗಳ ಮುಂಚೆಯೇ ಕೆಲವರು ಅದನ್ನು ಹಂಚಿಕೊಂಡಿದ್ದಾರೆ. ಉದಾಹರಣೆಗೆ, Instagram ಬಳಕೆದಾರರು ಜೂನ್ 9 ರಂದು ಈ ಫೋಟೋವನ್ನು “ಇಂತಹ ಸಣ್ಣ ವಿಷಯಗಳು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಎಲ್ಲಾ ಸುದ್ದಿಗಳ ನಡುವೆ ಕತಾರ್‌ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್‌ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದಿವೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಂತಹ ಯಾವುದೇ ವಿಶ್ವಾಸಾರ್ಹ ಸುದ್ದಿಗಳು ಲಭ್ಯವಾಗಿಲ್ಲ. ಹಾಗಾಗಿ ಇದೊಂದು ಹಳೆಯ ಘಟನೆಯಾಗಿದ್ದು, ಪ್ರಸ್ತುತ ಕತಾರ್‌ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್‌ ಫುಟ್ಬಾಲ್‌ಗೂ ಈ ವೈರಲ್ ಘಟನೆಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights