ಫ್ಯಾಕ್ಟ್‌ಚೆಕ್: ಭಾರತದ ಸಂಜು ಸ್ಯಾಮ್ಸನ್ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಿಜವೇ?

ಭಾರತೀಯ ಕ್ರಿಕೆಟ್ ಆಟಗಾರ ಸಂಜು ಸ್ಯಾಮ್ಸನ್ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಸಂಜು ಸ್ಯಾಮ್ಸನ್​ಗೆ ಬಿಗ್ ಆಫರ್ ಒಂದನ್ನು ನೀಡಿದೆ. ಸಂಜು ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತನ್ನ ದೇಶಕ್ಕೆ ಬಂದರೆ, ಅವರನ್ನು ಪ್ರತಿ ಪಂದ್ಯದಲ್ಲೂ ಆಡಿಸುತ್ತೇವೆ ಎಂದು ಐರ್ಲೆಂಡ್ ಕ್ರಿಕೆಟ್ ಭರವಸೆ ನೀಡಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು TV9 ಕನ್ನಡ ಹಂಚಿಕೊಂಡಿದೆ.

ಭಾರತೀಯ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕಾಗಿ ಆಡಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿಲ್ಲ ಎಂಬ ಆರೋಪಗಳ ನಡುವೆ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಐರ್ಲೆಂಡ್ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿದೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಹಲವು ಕ್ರೀಡಾ ಮತ್ತು ಮುಖ್ಯವಾಹಿನಿಯ ಸುದ್ದಿ ವೆಬ್‌ಸೈಟ್‌ಗಳು ಇತ್ತೀಚೆಗೆ ಐರ್ಲೆಂಡ್ ಕ್ರಿಕೆಟ್ ತಂಡವು ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಸಂಜು ಸ್ಯಾಮ್ಸನ್‌ಗೆ ಪ್ರಸ್ತಾಪವನ್ನು ಮಾಡಿದೆ ಎಂದು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿರುವು ಕಂಡುಬಂದಿದೆ. ಕೆಲವು ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದಲ್ಲದೆ, ಸಂಜು ಸ್ಯಾಮ್ಸನ್ ಅವರು ಭಾರತವನ್ನು ಪ್ರತಿನಿಧಿಸಲು ಬಯಸುತ್ತಾರೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇರೆ ದೇಶಕ್ಕಾಗಿ ಆಡುವುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಈ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ವರದಿಗಳಾಗಿವೆ.

ಆದರೆ, ಐರ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಅಥವಾ ಸಂಜು ಸ್ಯಾಮ್ಸನ್ ಅವರಿಂದ ಅಂತಹ ಯಾವುದೇ ಪ್ರಕಟಣೆಯನ್ನು ನಾವು ಕಂಡುಹಿಡಿಯಲಾಗಲಿಲ್ಲ. ಸಂಜು ಸ್ಯಾಮ್ಸನ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಅಂತಹ ಯಾವುದೇ ಪ್ರಕಟಣೆಯು ಲಭ್ಯವಾಗಿಲ್ಲ. ಈ ಸುದ್ದಿ ವರದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣಕ್ಕಾಗಿ ಫ್ಯಾಕ್ಟ್‌ಲಿ ಇ-ಮೇಲ್ ವಿನಂತಿಗೆ ಪ್ರತಿಕ್ರಿಯಿಸಿದ ಐರ್ಲೆಂಡ್ ಕ್ರಿಕೆಟ್ ಮಂಡಳಿ, “ಈ ಸುದ್ದಿ ಸಂಪೂರ್ಣ ಸುಳ್ಳು, ಅದು ಎಲ್ಲಿಂದ ಬಂತು ಎಂದು ನಮಗೆ ತಿಳಿದಿಲ್ಲ. ” ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್‌ಗೆ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ತಿಳಿಸಿದೆ.

ಕೆಲವು ಕ್ರೀಡಾ ವೆಬ್‌ಸೈಟ್‌ಗಳು ತಮ್ಮ ಕ್ರಿಕೆಟ್ ತಂಡವನ್ನು ಮುನ್ನಡೆಸಲು ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್‌ಗೆ ಅಂತಹ ಯಾವುದೇ ಪ್ರಸ್ತಾಪವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸುವ ಟ್ವೀಟ್‌ಗಳು ಮತ್ತು ಲೇಖನಗಳನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ,  ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಸಂಜು ಸ್ಯಾಮ್ಸನ್​ಗೆ ಬಿಗ್ ಆಫರ್ ಒಂದನ್ನು ನೀಡಿದೆ. ಸಂಜು ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ತನ್ನ ದೇಶಕ್ಕೆ ಬಂದರೆ, ಅವರನ್ನು ಪ್ರತಿ ಪಂದ್ಯದಲ್ಲೂ ಆಡಿಸುತ್ತೇವೆ ಎಂದು ಐರ್ಲೆಂಡ್ ಕ್ರಿಕೆಟ್ ಭರವಸೆ ನೀಡಿದೆ ಎಂದು ತಪ್ಪಾದ ವರದಿಯನ್ನು ಪ್ರಕಟಿಸಿದೆ. ವಾಸ್ತವವಾಗಿ ಐರ್ಲೆಂಡ್ ಕ್ರಿಕೆಟ್ ಮಂಡಳಿಯು ತಮ್ಮ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಸಂಜು ಸ್ಯಾಮ್ಸನ್‌ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವಂದೇ ಭಾರತ್ ರೈಲಿನಲ್ಲಿ ಮಳೆ ನೀರು ಸೋರಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights