ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆಯೇ?

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್‌ (100) ಅವರು ಅನಾರೋಗ್ಯದಿಂದ ಕಳೆದ ಶುಕ್ರವಾರ 30 ಡಿಸೆಂಬರ್ 2022ರಂದು ನಿಧನ ಹೊಂದಿದರು. ರಾಯ್‌ಸನ್‌ ಗ್ರಾಮದಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ ಮೋದಿ ಹೆಗಲುಕೊಟ್ಟರು. “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ತಾಯಿಯನ್ನು ಹಿಂದೂ ಪದ್ಧತಿಯಂತೆ ಕಳುಹಿಸಿದ್ದಾರೆ ಈ ಕರ್ಮಯೋಗಿಯೇ ಧನ್ಯ, ಮಾತಾಜಿ ಹೀರಾಬಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ” ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

‘ಹಿಂದೂ ಸಂಪ್ರದಾಯಗಳ ಪ್ರಕಾರ, ಮೃತರ ಕುಟುಂಬದ ಪುರುಷ ಸದಸ್ಯರು ಶೋಕಾಚರಣೆಯ ಸಮಯದಲ್ಲಿ ಗಂಡು ಮಕ್ಕಳು ತಲೆ ಬೋಳಿಸಿಕೊಳ್ಳುತ್ತಾರೆ. ಈ ಆಚರಣೆಯು ಶುದ್ಧೀಕರಣಕ್ಕಾಗಿ ಉದ್ದೇಶಿಸಲಾಗಿದೆ ಮತ್ತು ಸತ್ತವರಿಗೆ ಗೌರವವನ್ನು ತೋರಿಸುವ ಒಂದು ಮಾರ್ಗವಾಗಿದೆ’ ಈ ಮೂಲಕ ನರೇಂದ್ರ ಮೋದಿಯವರು ತಮ್ಮ ತಾಯಿಯ ಋಣ ತೀರಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಾಯಿ ಹೀರಾಬೆನ್ ನಿಧನ ಹೊಂದಿದಾಗ ಶೋಕಾಚರಣೆಯ ಸೂಚಕವಾಗಿ ತಮ್ಮ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಪ್ರಧಾನಿ ಮೋದಿ ಅವರ ಹಳೆಯ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್ 15, 2017 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಸೆರೆ ಹಿಡಿಯಲಾದ ಪ್ರಧಾನಿ ಮೋದಿ ಅವರ ಫೋಟೋವನ್ನು ತೆಗೆದು ಎಡಿಟ್ ಮಾಡಲಾಗಿದೆ ಎಂದು ಬೂಮ್ ವರದಿ ಮಾಡಿದೆ.  ಇದೇ ಫೋಟೋವನ್ನು ಹಲವು ಸುದ್ದಿ ವಾಹಿನಿಗಳು ತಮ್ಮ ವರದಿಗಳಲ್ಲಿ ಬಳಸಿಕೊಂಡಿರುವುದನ್ನು ಕಾಣಬಹುದು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ರಾಯಿಟರ್ಸ್ ಕೂಡ ಅದೇ ದಿನ ತೆಗೆದ ಛಾಯಾಚಿತ್ರವನ್ನು ಪ್ರಕಟಿಸಿರುವುದನ್ನು ನಾವು ಕಾಣಬಹುದು.

ವೈರಲ್ ಫೋಟೊ ಮತ್ತು ಮೂಲ ಫೋಟೋವನ್ನು ಹೋಲಿಕೆ ಮಾಡಿ ನೋಡಿದಾಗ ವೈರಲ್ ಫೋಟೋವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ನಿಧನ ಹೊಂದಿದಾಗ ಕೇಶ ಮುಂಡನ ಮಾಡಿಸಿಕೊಂಡ ಬಗ್ಗೆ ಯಾವುದೇ ವರದಿಗಳಿಲ್ಲ.

ವೈರಲ್ ಫೋಟೋ ಮೊದಲ ಬಾರಿಗೆ ಜನವರಿ 2021 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದಿದೆ ಅದನ್ನು ತಮಾಷೆಯಾಗಿ ಪ್ರಸಾರ ಮಾಡಲು ಬಳಸಿಕೊಳ್ಳಲಾಗಿದೆ.

ಹೀರಾಬೆನ್ ಅವರ ಸಾವಿನ ಶೋಕಾಚರಣೆಯ ಅವಧಿ ಅಥವಾ ಶ್ರಾದ್ಧ ಕಾರ್ಯವು ಜನವರಿ 12, 2023 ರಂದು ಕೊನೆಗೊಳ್ಳುತ್ತದೆ. ನಾವು ಪ್ರಧಾನಿ ಮೋದಿಯವರ ಇತ್ತೀಚಿನ ಚಿತ್ರಗಳಿಗಾಗಿ ಅವರ ಟ್ವಿಟರ್‌ನಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 31, 2022 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ ಒಂದು ಫೋಟೊ ಲಭ್ಯವಾಗಿದೆ.

ಟ್ವಿಟರ್ ಫೋಟೋದಲ್ಲಿ, ಮೋದಿ ಅವರು ನಿವೃತ್ತ ಏರ್ ಮಾರ್ಷಲ್ ಪಿವಿ ಅಯ್ಯರ್ ಅವರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ, ಮತ್ತು ಅವರ ಪುಸ್ತಕ ‘ಫಿಟ್ ಅಟ್ ಎನಿ ಏಜ್’ ನ ಪ್ರತಿಯನ್ನು ಸ್ವೀಕರಿಸುತ್ತಿದ್ದಾರೆ. ಫೋಟೋದಲ್ಲಿ ಮೋದಿ ತಮ್ಮ ತಲೆ ಕೂದಲನ್ನು ಬೋಳಿಸಿಕೊಂಡಿಲ್ಲ ಎನ್ನವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹೀರಬೆನ್ ಅವರ ನಿಧನದ ಕಾರಣಕ್ಕೆ ತಮ್ಮ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಎಂದು 2017ರ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮೋದಿ ವಾಸ್ತವವಾಗಿ ತಮ್ಮ ತಲೆ ಕೂದಲನ್ನು ಬೋಳಿಸಿಕೊಂಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ: ಫ್ಯಾಕ್ಟ್‌ಚೆಕ್: ಕರೀನಾ ಕಪೂರ್ ಪ್ರಧಾನಿ ಮೋದಿಯವರನ್ನು ಅವಮಾನಿಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights