ಫ್ಯಾಕ್ಟ್‌ಚೆಕ್: ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ನು ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದರೇ?

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯು ಸೋಮವಾರ ಜಮ್ಮುವಿಗೆ ತಲುಪಿದ್ದು, ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಆತ್ಮೀಯ ಸ್ವಾಗತ ನೀಡಿದ್ದಾರೆ. ಸತ್ವಾರಿ ಚೌಕ್‌ಗೆ ತಲುಪಿದ ಮೇಳೆ ಮಾತನಾಡಿದ ಅವರು,‘ದೇಶದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಸಮಸ್ಯೆ ಅಧಿಕವಿದೆ’ ಎಂದಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವರದಿ ಮಾಡಿರುವ ಪತ್ರಿಕೆಯ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ರೀತಿ ರಾಹುಲ್ ಗಾಂಧಿ ಹೇಳಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ‘ನಿನಾದಂ’ ಎಂಬ ನಿಯತಕಾಲಿಕೆಯೊಂದು ಈ ಸುದ್ದಿಯನ್ನು 24 ಜನವರಿ 2023 ರಂದು ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಭಾರತ್ ಜೋಡೋ ಯಾತ್ರೆಯ ಭಾಗವಾಗಿ 2023 ರ ಜನವರಿ 23 ರಂದು ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಅವರು ‘ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುತ್ತೇವೆ’ ಎಂದು ಹೇಳಿದ್ದಾರೆ ಎಂದು ವೈರಲ್ ಸುದ್ದಿ ಕ್ಲಿಪ್ ವರದಿ ಮಾಡಿದೆ. ‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ರಾಹುಲ್ ಭರವಸೆ ನೀಡಿದ್ದಾರೆ ಎಂದೂ ಈ ಲೇಖನದಲ್ಲಿ ವರದಿಯಾಗಿದೆ.

ಆದರೆ, ವಾಸ್ತವವಾಗಿ, ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 370 ನೇ ವಿಧಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅಂತಹ ಹೇಳಿಕೆಯನ್ನು ನೀಡಿಲ್ಲ. ‘ಜಮ್ಮು-ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ನೀಡಲಾಗುವುದು ಮತ್ತು ಇದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಭಾಷಣದ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು.

“ಕಾಂಗ್ರೆಸ್ ಪಕ್ಷವು ನಿಮ್ಮನ್ನು ಮತ್ತು ನಿಮ್ಮ ರಾಜ್ಯತ್ವ ಬೇಡಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು, ಕಾಂಗ್ರೆಸ್ ತನ್ನ ಸಂಪೂರ್ಣ ಅಧಿಕಾರವನ್ನು ಬಳಸುತ್ತದೆ” ಎಂದು ರಾಹುಲ್  ಗಾಂಧಿ ಅವರು ಇಲ್ಲಿನ ಸತ್ವಾರಿ ಚೌಕ್‌ನಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದರು.

“ರಾಜ್ಯತ್ವವೇ ನಿಮ್ಮ ದೊಡ್ಡ ಬೇಡಿಕೆ. ರಾಜ್ಯತ್ವದಷ್ಟು ದೊಡ್ಡ ಬೇಡಿಕೆ ಮತ್ತೊಂದು ಇಲ್ಲ. ನಿಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಆದರೆ ನಿಮ್ಮ ಮಾತು ಸರ್ಕಾರಕ್ಕೆ ಕೇಳಿಸುತ್ತಿಲ್ಲ” ಎಂದು ಅವರು ಹೇಳಿದರು. “ಕಾಶ್ಮೀರದಲ್ಲಿ ಎಲ್ಲಾ ವ್ಯಾಪಾರವನ್ನು ಹೊರಗಿನವರು ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನತೆ ಅಸಹಾಯಕರಾಗಿ ಕುಳಿತು ನೋಡುತಿದ್ದಾರೆ” ಎಂದರು.

370 ನೇ ವಿಧಿಯ ಬಗ್ಗೆ ಕಾಂಗ್ರೆಸ್ ನಿಲುವು ಏನು?

ಆಗಸ್ಟ್ 2019 ರಲ್ಲಿ, ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಕೇಂದ್ರದ ನಿರ್ಧಾರದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಚರ್ಚಿಸಿ ನಿರ್ಣಯವನ್ನು ಬಿಡುಗಡೆ ಮಾಡಿತು. ನಿರ್ಣಯವು ಕೇಂದ್ರದ ಕ್ರಮವನ್ನು ಅನಿಯಂತ್ರಿತ ಮತ್ತು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿದೆ. 370 ನೇ ವಿಧಿಗೆ ತಿದ್ದುಪಡಿಗಳನ್ನು ಎಲ್ಲಾ ವರ್ಗದ ಜನರೊಂದಿಗೆ ಸಮಾಲೋಚಿಸಿದ ನಂತರ ಮತ್ತು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಮಾಡಬೇಕು ಎಂದು ಕಾಂಗ್ರೆಸ್‌ ಪ್ರತಿಪಾದಿಸಿತ್ತು.

ಒಂದು ವೇಳೆ ರಾಹುಲ್ ಗಾಂಧಿ 370 ನೇ ವಿಧಿಯನ್ನು ಮರುಸ್ಥಾಪಿಸಲಾಗುವುದು ಎಂದು ನಿಜವಾಗಿಯೂ ಹೇಳಿದ್ದರೆ, ಪ್ರಮುಖ ಸುದ್ದಿ ಸಂಸ್ಥೆಗಳು ಅದನ್ನು ವರದಿ ಮಾಡಿರುತ್ತಿದ್ದವು. ಆದರೆ ರಾಹುಲ್ ಗಾಂಧಿ ಹಾಗೆ ಹೇಳಿದ್ದಾರೆಂದು ಯಾವುದೇ ಅಧಿಕೃತ ವರದಿಗಳಿಲ್ಲ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮಾತ್ರ ನೀಡಲಾಗುವುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿ ಮಾಧ್ಯಮದ ಕ್ಲಿಪ್‌ನಂತೆ  ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗಾಂಧೀಜಿ ಬ್ರಿಟೀಷ್ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights