ಫ್ಯಾಕ್ಟ್‌ಚೆಕ್ : CM ವಿರುದ್ದ BJP ಶಾಸಕ ಯತ್ನಾಳ್ ಮಾಡಿದ ಆರೋಪ ಸುಳ್ಳು

ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ  ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ X ಅಕೌಂಟ್‌ ಮೂಲಕ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ ನಲ್ಲಿ ಏನು ಹೇಳಿದ್ದಾರೆ ಯತ್ನಾಳ್

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ತನ್ವಿರ್ ಪೀರ್ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗೂ ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳನ್ನು ಎಂದು ಅಪ್ಲೋಡ್‌ ಮಾಡಿದ್ದಾರೆ.

ಭಯೋತ್ಪಾದಕ ಬೆಂಬಲಿಗ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ. ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗು ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮುಂಜಾನೆ ನಾನು ಮುಖ್ಯಮಂತ್ರಿಗಳು ಐಸಿಸ್ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದೆ. ರಾಜ್ಯ ಪೊಲೀಸ್, ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಕುರಿತು ವಿಚಾರಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಸಚಿವ ಜಮೀರ್ ಅಹ್ಮದ್ ಅವರೊಂದಿಗೆ ಮೌಲ್ವಿ ಇರುವ ಪೋಟೊಗಳನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿರುವುದನ್ನು ಕಾಣಬಹುದು. ಹಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇರುವ ಮೌಲ್ವಿ ISIS ಜೊತೆ ನಂಟು ಹೊಂದಿರುವ ವ್ಯಕ್ತಿಯೇ? ಹಾಗಿದ್ದರೆ ಶಾಸಕ ಯತ್ನಾಳ್ ಏಕೆ ಇನ್ನು ಇದರ ಬಗ್ಗೆ ಪೊಲೀಸರಿಗಾಗಲಿ , ಗೃಹ ಇಲಾಖೆಗಾಗಲಿ ದೂರು ನೀಡಿಲ್ಲ?  ಒಂದು ವೇಳೆ ದೂರು ನೀಡಿದ್ದರೆ ಏನು ಕ್ರಮ ಜರುಗಿಸಿದ್ದಾರೆ ಎಂದು ಮಾಹಿತಿ ನೀಡಬೇಕಾಗುತ್ತದೆ ಇರಲಿ ಅದನ್ನು ಮುಂದೆ ನೋಡೋಣ.

ಹಾಗಿದ್ದರೆ ಈಗ ಯತ್ನಾಳ್ ಆರೋಪಿಸಿರುವಂತೆ ಮುಖ್ಯಮಂತ್ರಿ ಸಿದ್ದರಾಯಮ್ಮಯನವರೊಂದಿಗೆ ವೇದಿಕೆ ಹಂಚಿಕೊಂಡ ಮೌಲ್ವಿಗೆ ISIS ಉಗ್ರ ಸಂಘಟನೆಯೊಂದಿಗೆ ನಂಟು ಹಂದಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಯಾರು ಈ ತನ್ವೀರ್ ಪೀರ್

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗಿ ಯತ್ನಾಳ್‌ ಐಸಿಸಿ ಬೆಂಬಲಿಗರೆಂದು ಆರೋಪಿಸಿರುವ ವ್ಯಕ್ತಿ ಬಿಜಾಪುರದ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಶ್ಮಿ ಎಂಬುವವರಾಗಿದ್ದು, ಅವರು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಅವರ ಫೇಸ್‌ಬುಕ್ ಪುಟವನ್ನು ಇಲ್ಲಿ ನೋಡಬಹುದು.

ಇನ್ನು ಅವರು ಭೇಟಿಯಾಗಿರುವ ವ್ಯಕ್ತಿ ಐಸಿಸಿ ಭಯೋತ್ಪಾದಕರಲ್ಲ. ಬದಲಿಗೆ ಬಾಗ್ದಾದಿನ ಪ್ರಿನ್ಸ್‌ ಶೇಖ್‌ ಖಾಲಿದ್‌ ಅವರಾಗಿದ್ದು, ಈ ಚಿತ್ರಗಳನ್ನು 2013ರಲ್ಲಿಯೇ Qadri Al Hashmi Healing ಎಂಬ ಫೇಸ್‌ಬುಕ್ ಪುಟದಲ್ಲಿ ತನ್ವೀರ್ ಹಶ್ಮಿ ಬೆಂಬಲಿಗರು ಹಂಚಿಕೊಂಡಿದ್ದಾರೆ. ಸುನ್ನಿ ಜಮಾತ್‌ನ ಮುಖಂಡರಾಗಿರುವ ತನ್ವೀರ್‌ ಹಶ್ಮಿ ಅವರು ಸೂಫಿ ಪಂಗಡಕ್ಕೆ ಸೇರಿದವರು. ಈ ಚಿತ್ರದಲ್ಲಿರುವ ಬಾಗ್ದಾದಿನ ಯುವರಾಜ ಸಹ ಅದೇ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಯತ್ನಾಳ್ ಹಂಚಿಕೊಂಡ ಮತ್ತೊಂದು ಫೋಟೊದಲ್ಲಿರುವ ವ್ಯಕ್ತಿ ಇರಾಕ್‌ ಸರ್ಕಾರದ ಭದ್ರತಾ ಅಧಿಕಾರಿಯಾಗಿದ್ದು ಹಜ್ರತ್‌ ಗೌಸ್‌ ಆಜಂ ಭದ್ರತೆಗಿದ್ದ ಸಜ್ಜಾದೇ ನಶೀನ್‌ ಎಂಬುವವರಾಗಿದ್ದು ಈ ಫೋಟೊ ಸಹ 2013ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಶ್ಮಿಯವರು ವಿದೇಶಕ್ಕೆ ಪ್ರಯಾಣ ಮಾಡಿದ ಎಲ್ಲಾ ವಿವರ ಮತ್ತು ಫೋಟೊಗಳನ್ನು ತಮ್ಮ www.alhashmi.org ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಅವುಗಳನ್ನು ಇಲ್ಲಿ ನೋಡಬಹುದು.

ಬಿಜಾಪುರದ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಶ್ಮಿ ಎಂಬುವವರ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಅವರು ಸೂಫಿ ಪಂಥದವರು ಎಂದು ವಿಕಿಪೀಡಿಯಾ ತಿಳಿಸುತ್ತದೆ. ಹಲವು ಶಾಲಾ ಕಾಲೇಜುಗಳನ್ನು ನಡೆಸುವ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರು ಎಂದು ಬಿಜಾಪುರದ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಇನ್ನು ಅವರಿಗು ಐಸಿಸ್‌ಗೂ ಸಂಬಂಧವಿರುವ ಬಗ್ಗೆ ಯಾವುದೇ ದಾಖಲೆಗಳು ದೊರೆತಿಲ್ಲ. ಜೊತೆಗೆ ಅವರು 2022ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಸಹ ಭೇಟಿಯಾಗಿದ್ದಾರೆ.

ಎಡದಿಂದ ಎರಡನೇಯವರಾದ ತನ್ವೀರ್ ಹಶ್ಮಿಯವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿರುವುದು.
ಎಡದಿಂದ ಎರಡನೇಯವರಾದ ತನ್ವೀರ್ ಹಶ್ಮಿಯವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿರುವುದು.

ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ

ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದ  ಬಗ್ಗೆ ಪ್ರತಿಕ್ರಿಯಿಸಿರುವ ಬಾಷಾ ಪೀರಾ ದರ್ಗಾದ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ, ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಪಾಲ್ಗೊಂಡಿದ್ದ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ನಂಟು ಹೊಂದಿದ್ದವರು ಯಾರೂ ಇರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ
ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ

ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಎಸ್ ಉಗ್ರರ ಜೊತೆಗೆ ನಂಟು ಇದ್ದವರು ಭಾಗವಹಿಸಿರಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಖಾಸುಮ್ಮನೆ ಆರೊಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಧರ್ಮಗುರುಗಳ ಸಮಾವೇಶಕ್ಕೆ 150ಕ್ಕೂ ಸೂಫಿಗಳಿಗೆ ಆಹ್ವಾನ ನೀಡಲಾಗಿತ್ತು. 100ಕ್ಕೂ ಹೆಚ್ಚು ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿದ್ದವರು ಇರಲಿಲ್ಲ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ ವೇದಿಕೆಯ ಮೇಲೆ 25 ಜನ ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು.

ವೇದಿಕೆಯ ಮೇಲೆ ಯಾರು ಭಾಗವಹಿಸಲಿದ್ದಾರೆಂಬ ಎಲ್ಲಾ ಮಾಹಿತಿಯನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಒಂದು ವೇಳೆ ಐಸಿಎಸ್ ಉಗ್ರರ ಜೊತೆಗೆ ನಂಟು ಇದ್ದಿದ್ದಿದ್ದರೆ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಾಗಿತ್ತು. ಐಸಿಸ್ ಉಗ್ರರ ಜೊತೆಗೆ ಯಾರು ನಂಟು ಹೊಂದಿದ್ದರೆಂಬುದನ್ನು ಅವರೇ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಉಗ್ರರ ಜೊತೆಗೆ ಸಂಪರ್ಕ ಇದ್ದವರು ಯಾರೆಂಬುದನ್ನು ಯತ್ನಾಳ್ ಅವರು ಬಹಿರಂಗಪಡಿಸಲಿ, ನಾವು ಎಲ್ಲ ರೀತಿಯ ತನಿಖೆಗೆ ಸಿದ್ಧರಾಗಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ಆಗಲಿ ಅಂತ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಯತ್ನಾಳ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಸಂಪರ್ಕಿತ ಮೌಲ್ವಿಗಳ  ಸಭೆಗೆ ಹೋಗಿದ್ದರೆ ಅಮಿತ್ ಶಾಗೆ, ಮಿಲಿಟರಿಗೆ ಯತ್ನಾಳ್ ಅವರು ಮಾಹಿತಿ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಐಸಿಸ್ ಸಂಪರ್ಕಿತ ಮೌಲ್ವಿ ಸಭೆಗೆ ಸಿಎಂ ಹೋಗಿದ್ದರು ಎನ್ನುವ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹೇಳಿಕೆ ಅವರ ಪಾರ್ಟಿಯವರೇ ಸಿರಿಯಸ್ ಆಗಿ ತಗೋತೀಲ್ಲ. ಆವತ್ತು ಗಂಟೆ ಬಾರಿಸಿದ್ರು, ಇವತ್ತೂ ಗಂಟೆ ಬಾರಿಸ್ತಿದ್ದಾರೆ. ಯತ್ನಾಳ್ ಮಾತಿಗೆ ಅವರ ಪಕ್ಷದಲ್ಲೇ ಬೆಲೆಯಿಲ್ಲ. ಯತ್ನಾಳ್‌ರವರು ಗೃಹ ಸಚಿವರಾದ ಅಮಿತ್ ಶಾ ಮತ್ತು ಮಿಲಿಟರಿಗೆ ಮಾಹಿತಿ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ X ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ಮೌಲ್ವಿ  ತನ್ವೀರ್ ಪೀರ್ ಅವರ ಫೋಟೊವನ್ನು ಮಾರ್ಕ್ ಮಾಡಿ ಹಂಚಿಕೊಂಡಿರುವುದು ಮತ್ತು ಉಳಿದಂತೆ ಇತರೆ ಯಾವುದೋ ಮೂರು ಫೋಟೋಗಳನ್ನು ಹಂಚಿಕೊಂಡಿರುವುದು ಬಿಟ್ಟರೆ ಬೇರೆ ಯಾವುದೇ ಬಲವಾದ ಸಾಕ್ಷಿಯನ್ನು ನೀಡಿಲ್ಲ. ಹಾಗಾಗಿ ಯತ್ನಾಳ್ ಮಾಡಿರುವ ಆರೋಪ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಲಾಲ್ ಎಂದರೆ ಆಹಾರಕ್ಕೆ ಉಗುಳುವುದು ಎಂದು ಮುಸ್ಲಿಮರು ಹೇಳಿಲ್ಲ! ಹಾಗಿದ್ದರೆ ಈ ಪ್ರಕರಣವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights