FACT CHECK | ಮೋದಿ ಗೆಲ್ತಾರೆ ಅಂದಿದಕ್ಕೆ ಗಿಳಿ ಶಾಸ್ತ್ರದವನನ್ನು ಬಂಧಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಂಡ ಚಕ್ರವರ್ತಿ ಸೂಲಿಬೆಲೆ

ಕನ್ನಡದ ಪ್ರಖರ ವಾಗ್ಮಿ ಎಂದೇ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ತನ್ನ ಎಕ್ಸ್‌ ಖಾತೆಯ ಮೂಲಕ ವಿಡಿಯೋ ಪೋಸ್ಟ್‌ಅನ್ನು  ಹಂಚಿಕೊಂಡಿದ್ದು, ಮೋದಿ ಗೆಲ್ತಾರೆ ಅಂದಿದ್ದಕ್ಕೆ ಬಡಪಾಯಿ ಗಿಣಿ ಶಾಸ್ತ್ರದವನನ್ನು ಜೈಲಿಗಟ್ಟಿದ ತಮಿಳುನಾಡು ಸರ್ಕಾರ! ಆದರೆ ಸರ್ವಾಧಿಕಾರಿ ಮಾತ್ರ ಮೋದಿಯೇ!! ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಪೋಸ್ಟ್‌ 8 ಸಾವಿರಕ್ಕೂ ಹೆಚ್ಚಿನ ಜನ ವೀಕ್ಷಿಸಿದ್ದಾರೆ. ಹಾಗಿದ್ದರೆ ಚಕ್ರವರ್ತಿ ಸೂಲಿಬೆಲೆ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿರುವಂತೆ ಮೋದಿ ಗೆಲ್ಲುತ್ತಾರೆ ಎಂದು ಹೇಳಿದ್ದ ಕಾರಣಕ್ಕೆ ತಮಿಳುನಾಡು ಸರ್ಕಾರ ಗಿಳಿ ಶಾಸ್ತ್ರ ಹೇಳುವನನ್ನು ಬಂಧಿಸಿದಿಯೇ?  ಇದರ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಲಪಂಥೀಯ ಪ್ರತಿಪಾದಕ, ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿರುವಂತೆ ಪ್ರಧಾನಿ ಮೋದಿ ಗೆಲ್ತಾರೆ ಎಂದು ಗಿಳಿ ಶಾಸ್ತ್ರದವನು ಹೇಳಿದ ಕಾರಣಕ್ಕೆ ಬಂಧಿಸಲಾಗಿದೆಯೇ ಎಂದು ಪರಿಶೀಲಿಸಿದಾಗ, ಇಂಡಿಯಾ ಟುಡೇ ಮಾಡಿದ ವರದಿ ಲಭ್ಯವಾಗಿದೆ.

ಇಂಡಿಯಾ ಟುಡೆ ಮಾಡಿದ ವರದಿಯ ಪ್ರಕಾರ, ಥಂಕರ್‌ ಬಚ್ಚನ್‌ ಅವರು ಬಿಜೆಪಿ ಮಿತ್ರಪಕ್ಷವಾದ ಪಟ್ಟಾಲಿ ಮಕ್ಕಳ್‌ ಕಚ್ಚಿ (PMK) ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ಅವರು ಚುನಾವಣೆ ಪ್ರಚಾರದ ವೇಳೆ ಸೆಲ್ವರಾಜ್‌ ಎಂಬ ಗಿಳಿ ಶಾಸ್ತ್ರದವನ ಬಳಿ ತೆರಳಿದ್ದಾರೆ. ಚುನಾವಣೆಯಲ್ಲಿ ನನ್ನ ಅದೃಷ್ಟ ಹೇಗಿದೆ ಹೇಳಿ ಎಂದಿದ್ದಾರೆ. ಆಗ ಗಿಳಿಯ ಮೂಲಕ ಸೆಲ್ವರಾಜ್‌ ಅವರು ಭವಿಷ್ಯ ನುಡಿದಿದ್ದಾರೆ. ಗಿಳಿಯು ಥಂಕರ್‌ ಬಚ್ಚನ್‌ ಅವರೇ ಗೆಲುವು ಸಾಧಿಸುತ್ತಾರೆ ಎಂಬುದಾಗಿ ಸೂಚಿಸಿದೆ.

ಆದರೆ, ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಕಡಲೂರು ಅರಣ್ಯ ಇಲಾಖೆ ಪೊಲೀಸರು ಸೆಲ್ವರಾಜ್‌ ಅವರನ್ನು ಬಂಧಿಸಿದ್ದಾರೆ. ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಾರೆ. ಬಳಿಕ ಸೆಲ್ವರಾಜ್‌ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆಯ (1972) ಶೆಡ್ಯೂಲ್ 4 ರ ಪ್ರಕಾರ, ಪಕ್ಷಿಗಳನ್ನು ಪಂಜರದಲ್ಲಿ ಇಡುವುದನ್ನು ಕಾನೂನು ಬಾಹಿರ ಎಂದು ಹೇಳಲಾಗಿದ್ದು  ಗಿಳಿಗಳನ್ನು ಕೂಡ ಕಾಡು ಪ್ರಾಣಿಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ಕಾಯಿದೆಯ ಅಡಿಯಲ್ಲಿ ರಕ್ಷಿಸಲಾಗಿದೆ.

ವಾಸ್ತವವಾಗಿ ಗಿಳಿ ಶಾಸ್ತ್ರದವನನ್ನು ಬಂಧಿಸಲು ಕಾರಣವಾಗಿರುವುದು ಆತ ಬಿಜೆಪಿ ಅಭ್ಯರ್ಥಿ ಗೆಲ್ಲತ್ತಾರೆ ಎಂದು ಹೇಳಿದ್ದಲ್ಲ ಬದಲಿಗೆ ಗಿಳಿಗಳನ್ನು ಪಂಜರದಲ್ಲಿ ಕೂಡಿಟ್ಟುಕೊಂಡಿದ್ದು ಮುಖ್ಯ ಕಾರಣ ಎಂಬುದು ಸ್ಪಷ್ಟವಾಗಿದೆ.

ಚುನಾವಣೋತ್ತರ ಸಮೀಕ್ಷೆಗಳಿಗೆ ವಿಧಿಸುವ ನಿಷೇಧವು, ಮಾಧ್ಯಮಗಳಲ್ಲಿ ಜ್ಯೋತಿಷಿಗಳು ಹೇಳುವ ಭವಿಷ್ಯ, ಗಿಳಿಶಾಸ್ತ್ರ ಮತ್ತು ಇತರೆ ವಿಶ್ಲೇಷಣೆಗಳಿಗೂ ಅನ್ವಯವಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಸೆಲ್ವರಾಜ್‌ ಎಂಬ ಗಿಳಿ ಶಾಸ್ತ್ರದವನನ್ನು ಬಂಧಿಸಿದ್ದು ಮೋದಿ ಗೆಲ್ಲುತ್ತಾರೆ ಎಂದು ಹೇಳಿದ್ದ ಕಾರಣಕ್ಕಲ್ಲ

ಏಪ್ರಿಲ್ 19ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ-ಮಿತ್ರಪಕ್ಷ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಭ್ಯರ್ಥಿಯ ಗೆಲುವನ್ನು ತಮ್ಮ ಗಿಳಿಯ ಸಹಾಯದಿಂದ ಭವಿಷ್ಯ ನುಡಿಸಿದ ಇಬ್ಬರು ರಸ್ತೆ ಬದಿಯ ಜ್ಯೋತಿಷಿಗಳ ಪೈಕಿ ಓರ್ವನನ್ನು ಬಂಧಿಸಲಾಯಿತು. ಗಿಳಿಗಳನ್ನು ಪಂಜರದಲ್ಲಿಟ್ಟು, ಅವುಗಳಿಂದ ಭವಿಷ್ಯ ನುಡಿಸಿದ ಆರೋಪದ ಮೇಲೆ ಆತನನ್ನು ಅರೆಸ್ಟ್​ ಮಾಡಲಾಯಿತು. ವಿಚಾರಣೆ ನಡೆಸಿದ ಪೊಲೀಸರು ಕೆಲವು ಸಮಯದ ನಂತರ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ್ದಾರೆ.

ಗಿಳಿ ಶಾಸ್ತ್ರದವನನ್ನು ಭೇಟಿ ಮಾಡಿದ ಬಚನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ದೃಶ್ಯದಲ್ಲಿ ಅಭ್ಯರ್ಥಿಯು ಶಾಸ್ತ್ರ ಹೇಳಿದ ಹಕ್ಕಿಗೆ ಆಹಾರ ನೀಡುವಂತೆ ಜ್ಯೋತಿಷಿಗೆ ವಿನಂತಿಸುತ್ತಾರೆ. ತದನಂತರ ಅದಕ್ಕೆ ಬಾಳೆಹಣ್ಣು ಕೊಡುವುದು ವಿಡಿಯೋ ತುಣುಕಿನಲ್ಲಿ ಕಂಡುಬಂದಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣ ಎರಡು ಪಂಜರಗಳಲ್ಲಿ ಇರಿಸಲಾಗಿದ್ದ ನಾಲ್ಕು ಗಿಳಿಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇಬ್ಬರು ಜ್ಯೋತಿಷಿ ಸಹೋದರರಿಗೆ ಇಂಥ ತಪ್ಪು ಮುಂದೆ ಮಾಡದಿರಿ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಜ್ಯೋತಿಷಿಗಳು, ಗಿಣಿ ಶಾಸ್ತ್ರ, ರಾಜಕೀಯ ವಿಶ್ಲೇಷಕರು ಅಥವಾ ನಿಷೇಧಿತ ಅವಧಿಯಲ್ಲಿ ಯಾವುದೇ ವ್ಯಕ್ತಿಗಳು ಚುನಾವಣಾ ಫಲಿತಾಂಶಗಳನ್ನು ಯಾವುದೇ ರೂಪದಲ್ಲಿ ಅಥವಾ ಮುನ್ಸೂಚನೆಗಳ ಮೂಲಕ ಊಹಿಸುವುದನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿದರೆ ಅದು RP ಕಾಯಿದೆ, 1951ರ ಸೆಕ್ಷನ್ 126ಎ ಇದರ ಸ್ಪಷ್ಟ ಉಲ್ಲಂಘನೆಯಾಗಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಲಪಂಥೀಯ ಪ್ರತಿಪಾದಕ ಚಕ್ರವರ್ತಿ ಸೂಲಿಬೆಲಿ ಹೇಳಿರುವಂತೆ ತಮಿಳುನಾಡು ಪೊಲೀಸರು ಗಿಳಿ ಶಾಸ್ತ್ರದವನನ್ನು ಬಂದಿಸಿದ್ದು ಮೋದಿ ಗೆಲ್ತಾರೆ ಎಂದು ಹೇಳಿದಕ್ಕಲ್ಲ, ನಾಲ್ಕು ಗಿಳಿಗಳನ್ನು ಎರಡು ಪಂಜರಗಳಲ್ಲಿ ಬಂಧಿಸಿ ಇರಿಸಲಾಗಿದ್ದ ಕಾರಣ  ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ ಆಧಾರದಲ್ಲಿ ಬಂಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಗ್ಯಾರೆಂಟಿ ಯೋಜನೆ ಕುರಿತು ಮಾತನಾಡಿದ್ದ ವಿದ್ಯಾರ್ಥಿ ಹೇಳಿಕೆಯನ್ನು ತಿರುಚಿದ ಬಲಪಂಥೀಯ ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights