FACT CHECK | ನಾನು ಭಾರತದ ಹಿಂದೂಗಳ ದೊಡ್ಡ ಅಭಿಮಾನಿ ಎಂದು ಹೇಳಿದ್ರಾ ಡೋನಾಲ್ಡ್‌ ಟ್ರಂಪ್‌?

“ನಾನು ಭಾರತದ ಹಿಂದೂಗಳ ದೊಡ್ಡ ಅಭಿಮಾನಿ; ಅಧ್ಯಕ್ಷರಾಗಿ ಆಯ್ಕೆಯಾದರೆ, ಭಾರತೀಯ ಸಮುದಾಯವು ಶ್ವೇತಭವನದಲ್ಲಿ ನಿಜವಾದ ಸ್ನೇಹಿತನನ್ನು ಹೊಂದಿರುತ್ತದೆ ಎಂದು ಡೋನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗೆ 2024ರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದಾರೆ. ಈ ಬಾರಿ ಅಮೆರಿಕದಲ್ಲಿರುವ ಎಲ್ಲಾ ಅನಿವಾಸಿ ಭಾರತೀಯರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಮತ ಚಲಾಯಿಸಬೇಕು, ಆ ಮೂಲಕ ಭಾರತ ಮತ್ತು ಅಮೆರಿಕದ ಸಂಬಂಧ ಇನ್ನಷ್ಟು ಗಟ್ಟಿಯಾಗಲು ನೆರವಾಗಬೇಕು” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಬರೆದು ಹಂಚಿಕೊಳ್ಳಲಾಗುತ್ತಿದೆ.

ಹಲವರು ಈ ವಿಡಿಯೋವನ್ನು ನೋಡಿ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದ ನಡುವಿನ ಸಂಬಂಧ ಉತ್ತಮವಾಗಿದೆ. ಒಂದು ವೇಳೆ ಟ್ರಂಪ್‌ ಅಮೆರಿಕ ಅಧ್ಯಕ್ಷರಾದರೆ ಭಾರತಕ್ಕೆ ಇನ್ನಷ್ಟು ಬಲ ಬರಲಿದೆ ಎಂದು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.  ಹಾಗಿದ್ದರೆ ಡೊನಾಲ್ಡ್‌ ಟ್ರಂಪ್‌ ಪ್ರಸ್ತುತ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಹೆಳಿದ್ದಾರೆ ಎನ್ನಲಾದ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 16 ಅಕ್ಟೋಬರ್ 2016 ರಂದು ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ ತಮ್ಮ ಫೇಸ್‌ಬುಕ್ ಪುಟದಲ್ಲಿ #WATCH US Elections 2016 ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದರಲ್ಲಿ ವೈರಲ್‌ ವಿಡಿಯೋದಲ್ಲಿನ ಹೇಳಿಕೆಯನ್ನು ಕಾಣಬಹುದಾಗಿದೆ. ಹಾಗಾಗಿ ಇದು ಹಳೆಯ ವಿಡಿಯೋ ಎಂಬುದು ತಿಳಿದು ಬಂದಿದೆ.

ಮತ್ತಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, 16 ಅಕ್ಟೋಬರ್‌ 2016ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಪ್ರಕಟಗೊಂಡ ವರದಿಯೊಂದು ಲಭ್ಯವಾಗಿದೆ. ಆ ವರದಿಯಲ್ಲಿ ” ಎನ್‌ಜೆಯ ಎಡಿಸನ್‌ನಲ್ಲಿ ನಡೆದ ಭಾರತೀಯ-ಅಮೆರಿಕನ್ ಚಾರಿಟಿ ಕಾರ್ಯಕ್ರಮದ ಸಂದರ್ಭದಲ್ಲಿ, ಡೊನಾಲ್ಡ್ ಟ್ರಂಪ್ ಅವರು “ಹಿಂದೂಗಳ ದೊಡ್ಡ ಅಭಿಮಾನಿ” ಎಂದು ಘೋಷಿಸಿಕೊಂಡರು. ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದರು, ಅವರ ಅಧಿಕಾರಶಾಹಿ ವಿರೋಧಿ ಮತ್ತು ರಾಷ್ಟ್ರೀಯತಾವಾದಿ ದೃಷ್ಟಿಕೋನಗಳನ್ನು ಒಟ್ಟುಗೂಡಿಸಿದರು. ಅವರ ಆಡಳಿತದಲ್ಲಿ ಭಾರತವು ಪ್ರಮುಖ ಮಿತ್ರ ರಾಷ್ಟ್ರವಾಗಲಿದೆ ಎಂದು ಅವರು ಒತ್ತಿ ಹೇಳಿದರು, ಗುಪ್ತಚರ ಹಂಚಿಕೆ ಮತ್ತು ಭದ್ರತೆಯಲ್ಲಿ ಸಹಕಾರವನ್ನು ತೋರಿದರು.”  ಎಂದು ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಡೋನಾಲ್ಡ್‌ ಟ್ರಂಪ್‌ ಅವರು 2024ರ ಅಧ್ಯಕ್ಷೀಯ ಚುನಾವಣೆಗಾಗಿ ಇತ್ತೀಚೆಗೆ ನಾನು ಹಿಂದೂ ಮತ್ತು ಭಾರತದ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ ಎಂಬುದು ಸುಳ್ಳು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಸುದ್ದಿ 2016ರದ್ದಾಗಿದ್ದು, ಇದನ್ನು ಇತ್ತೀಚೆಗಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೋಲ್ಕತ್ತಾದ ಟ್ರೈನಿ ವೈದ್ಯೆಯ ಸಾವಿಗೂ ಮುನ್ನ ತೆಗೆದ ಸೆಲ್ಫಿ ವಿಡಿಯೋ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights