FACT CHECK | ತಿರುಪತಿ ಕಾಲ್ತುಳಿತದಲ್ಲಿ ಸಾವನಪ್ಪಿದ ಮಗನ ಶವವನ್ನು ಸಾಗಿಸಲು ಆಂಬ್ಯುಲೆನ್ಸ್‌ಗೆ ಹಣವಿಲ್ಲದೆ ತಂದೆಯೊಬ್ಬ ಬೈಕಿನಲ್ಲಿ ಶವ ಕೊಂಡೊಯ್ಯದನೆ?

ಆಂಧ್ರ ಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಇನ್ನೂ ನಾಲ್ವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ.

ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು, ತಿರುಮಲ ಬೆಟ್ಟಗಳಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್‌ಗೆ ನೀಡಲು ಹಣವಿಲ್ಲದೆ ಮೃತ ಮಗುವಿನ ತಂದೆ ಆಸ್ಪತ್ರೆಯಿಂದ ಮಗುವಿನ ಶವವನ್ನು ಬೈಕ್‌ನಲ್ಲಿ ಸಾಗಿಸಬೇಕಾಯಿತು ಎಂಬ ಬರಹದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ  “ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ 12 ವರ್ಷದ ಮಗುವನ್ನು ಸಾಗಿಸಲು ಅವರು ಆಂಬ್ಯುಲೆನ್ಸ್‌ಗಾಗಿ 20,000 ರೂ. ಕೇಳಿದರು. ಹಣದ ಕೊರತೆಯಿಂದಾಗಿ ಮಗುವಿನ ತಂದೆ ತನ್ನ ಮಗನನ್ನು 90 ಕಿ.ಮೀ. ಹೊತ್ತುಕೊಂಡು ಹೋಗುತ್ತಾರೆ!” ಎಂದು ಪೋಸ್ಟ್‌ನಲ್ಲಿ ಆರೋಪಿಸಲಾಗಿದೆ. ಆಂಧ್ರಪ್ರದೇಶದ ಸರ್ಕಾರವನ್ನು ಟೀಕಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಏಪ್ರಿಲ್ 26, 2022 ರಂದು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿರುವ ಎನ್ ಚಂದ್ರಬಾಬು ನಾಯ್ಡು ಹಂಚಿಕೊಂಡ ಅದೇ ವಿಡಿಯೋ ಲಭ್ಯವಾಗಿದೆ.

ಟ್ವೀಟ್‌ನ ಬರಹದ ಪ್ರಕಾರ, ತಿರುಪತಿಯ RUIA ಆಸ್ಪತ್ರೆಯಲ್ಲಿ ನಿಧನರಾದ ಪುಟ್ಟ ಬಾಲಕ ಜೇಸವ ಅವರ ಬಗ್ಗೆ ನನ್ನ ಹೃದಯ ಭಾರವಾಗಿದೆ. ಮೃತ ಮಗುವಿನ ತಂದೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಲ್ಲಿ ಬೇಡಿಕೊಂಡಿದ್ದಾರೆ, ಆದರೆ ಆಂಬ್ಯುಲೆನ್ಸ್ ವ್ಯವಸ್ಥೆ ಆಗದಿದ್ದಾಗ, ಖಾಸಗಿ ಆಂಬ್ಯುಲೆನ್ಸ್ ಪೂರೈಕೆದಾರರು ಮಗುವನ್ನು ಅಂತಿಮ ವಿಧಿವಿಧಾನಗಳಿಗಾಗಿ ಮನೆಗೆ ಕರೆದೊಯ್ಯಲು ಹಣ ಕೇಳಿದ್ದಾರೆ. ಬಡತನದಿಂದ ಬಳಲುತ್ತಿದ್ದ ತಂದೆಗೆ ತನ್ನ ಮಗುವನ್ನು ಬೈಕ್‌ನಲ್ಲಿ 90 ಕಿ.ಮೀ. ಹೊತ್ತುಕೊಂಡು ಹೋಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಈ ಹೃದಯ ವಿದ್ರಾವಕ ದುರಂತವು ಆಂಧ್ರಪ್ರದೇಶದ ಆರೋಗ್ಯ ಮೂಲಸೌಕರ್ಯದ ಸ್ಥಿತಿಯ ಪ್ರತಿಬಿಂಬವಾಗಿದೆ, ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಘಟನೆಯನ್ನು ಏಪ್ರಿಲ್ 2022 ರಲ್ಲಿ ಡೆಕ್ಕನ್ ಹೆರಾಲ್ಡ್ ಮತ್ತು ದಿ ಹಿಂದೂ ವರದಿ ಮಾಡಿದೆ.

ವರದಿಗಳ ಪ್ರಕಾರ, 10 ವರ್ಷದ ಬಾಲಕನನ್ನು ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳ ಚಿಕಿತ್ಸೆಗಾಗಿ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ದುರಂತವಾಗಿ ಸಾವನ್ನಪ್ಪಿದ್ದಾನೆ. ಆಂಬ್ಯುಲೆನ್ಸ್ ಚಾಲಕರು ತಮ್ಮ ಮಗನ ಶವವನ್ನು ಸಾಗಿಸಲು 10,000 ರೂ.ಗಳನ್ನು (ಕೆಲವು ವರದಿಗಳು ರೂ. 20,000 ಎಂದು ಹೇಳಿವೆ) ಕೇಳಿದಾಗ ದುಃಖಿತ ತಂದೆಗೆ ಅದು ಸಾಧ್ಯವಾಗಿಲ್ಲ. ಬೇರೆ ದಾರಿಯಿಲ್ಲದೆ, ತಂದೆ ತನ್ನ ಮಗುವಿನ ಶವವನ್ನು ಸಂಬಂಧಿಕರ ದ್ವಿಚಕ್ರ ವಾಹನದ ಹಿಂಬದಿ ಸೀಟಿನಲ್ಲಿ ಸಾಗಿಸಬೇಕಾಯಿತು ಎಂದು ಉಲ್ಲೇಖಿಸಿದೆ.

ಏಪ್ರಿಲ್ 2022 ರಲ್ಲಿ ದಿ ಹಿಂದೂ ಪತ್ರಿಕೆಯ ಮತ್ತೊಂದು ವರದಿಯ ಪ್ರಕಾರ, ಘಟನೆಯ ನಂತರ, ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಜನರಲ್ ಆಸ್ಪತ್ರೆಯ (ಜಿಜಿಹೆಚ್) ನಿವಾಸಿ ವೈದ್ಯಾಧಿಕಾರಿ ಡಾ. ಸರಸ್ವತಿ ಅವರನ್ನು ಅಮಾನತುಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ವ್ಯಕ್ತಿಯೊಬ್ಬ ತನ್ನ ಮಗನ ಶವವನ್ನು ಮೋಟಾರ್ ಸೈಕಲ್‌ನಲ್ಲಿ ಹೊತ್ತುಕೊಂಡು ಹೋದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ಆಂಧ್ರ ಪ್ರದೇಶದ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡು ವಿವರಣೆ ನೀಡಿದ್ದಾರೆ. ಈ ವೈರಲ್ ವಿಡಿಯೋ ಹಳೆಯದಾಗಿದ್ದು,  2022 ರಲ್ಲಿ ತಂದೆ ತನ್ನ ಮಗನ ಶವವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಹೋದ ಘಟನೆಯ ಹಳೆಯ ವಿಡಿಯೋವನ್ನು ಇತ್ತೀಚಿನ ತಿರುಪತಿ ಕಾಲ್ತುಳಿತಕ್ಕೆ ಸಂಬಂಧಿಸಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಬ್ಯುಲೆನ್ಸ್‌ಗೆ ಹಣ ನೀಡಲು ಸಾಧ್ಯವಾಗದೆ, ತಂದೆ ತನ್ನ ಮಗನ ಶವವನ್ನು ಬೈಕ್‌ನಲ್ಲಿ ಹೊತ್ತುಕೊಂಡು ಹೋದ 2022ರಲ್ಲಿ ನಡೆದ ಹಳೆಯ ಘಟನೆಯನ್ನು, ಇತ್ತೀಚೆಗೆ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟ ಮಗುವಿನ ಶವ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಅಣ್ಣನನ್ನೆ ಮದುವೆಯಾದ ತಂಗಿ ಎಂದು ಸ್ಕ್ರಿಪ್ಟೆಡ್‌ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights