ಸಿಎಎ ವಿರೋಧಿ ಹೋರಾಟ: ಪ್ರತಿಭಟನಾಕಾರರ ಸುಳಿವು ನೀಡದವರಿಗೆ ಬಹುಮಾನ ಘೋಷಿಸಿದ ಯೋಗಿ ಸರ್ಕಾರ
ಕಳೆದ ವರ್ಷ ಲಖನೌದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆಂಬ ಆರೋಪ ಹೊತ್ತಿರುವ ಶಿಯಾ ಧರ್ಮಗುರು ಕಲ್ಬೆ ಸಾದಿಕ್ ಅವರ ಮಗ ಸೇರಿದಂತೆ 15 ಆರೋಪಿಗಳ ಸುಳಿವು ನೀಡಿದವರಿಗೆ 5,000 ಬಹುಮಾನ ನೀಡುವುದಾಗಿ ಲಕ್ನೋ ಪೊಲೀಸರು ಘೋಷಿಸಿದ್ದಾರೆ.
ಓಲ್ಡ್ ಲಕ್ನೋ ಪ್ರದೇಶದ ಹಲವಾರು ಸ್ಥಳಗಳಲ್ಲಿ ಆರೋಪಿಗಳ ಭಾವಚಿತ್ರವುಳ್ಳ ಪೋಸ್ಟರ್ಗಳನ್ನು ಸಹ ಹಾಕಲಾಗಿದೆ. ಪೋಸ್ಟರ್ನಲ್ಲಿ ಶಿಯಾ ಧರ್ಮಗುರು ಕಲ್ಬೆ ಸಾದಿಕ್ ಅವರ ಮಗ ಕಲ್ಬೆ ಸಿಬ್ಟೆನ್ ನೂರಿ ಮತ್ತು ಮೌಲಾನಾ ಸೈಫ್ ಅಬ್ಬಾಸ್ ಸೇರಿದಂತೆ ಒಟ್ಟು 15 ಜನರ ಚಿತ್ರಗಳನ್ನು ಅಂಟಿಸಲಾಗಿದೆ.
ಮಾಹಿತಿಯ ಪ್ರಕಾರ, 15 ಆರೋಪಿಗಳಲ್ಲಿ ಎಂಟು ಮಂದಿಯ ವಿರುದ್ಧ ದರೋಡೆಕೋರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೆ, ಎಲ್ಲಾ ಆರೋಪಿಗಳ ಮನೆಯ ಹೊರಗೆ ನೋಟಿಸ್ಗಳನ್ನು ಅಂಟಿಸಲಾಗಿದೆ.
ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ಹಸನ್, ಇರ್ಷಾದ್ ಮತ್ತು ಆಲಂ ಅವರು ಗುರುವಾರ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದೇ ಸಮಯದಲ್ಲಿ, ಮೌಲಾನಾ ಸೈಫ್ ಅಬ್ಬಾಸ್, ಕಲ್ಬೆ ಸಿಬ್ಟನ್ ನೂರಿ, ಸಲೀಮ್ ಚೌಧರಿ, ಕಾಶಿಫ್, ಹಲೀಮ್, ನೀಲು, ಮನು, ಇಸ್ಲಾಂ, ಆಸಿಫ್, ತೌಕೀರ್, ಜಮಾಲ್ ಮತ್ತು ಶಕೀಲ್ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾದವರ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಸಿಎಎ ವಿರುದ್ಧದ ಪ್ರತಿಭಟನೆಗಳ ವೇಳೆ ಡಿಸೆಂಬರ್ 18 ಮತ್ತು 19ರಂದು ಲಖ್ನೌದಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಿದ್ದು, ಓಲ್ಡ್ ಲಖ್ನೋದ ಪೊಲೀಸ್ ಠಾಣೆಗೆ ಸೇರಿದ ವಾಹನಗಳನ್ನು ಸುಟ್ಟಹಾಕಿಲಾಗಿತ್ತು. ಅಲ್ಲದೆ, ಸಾರ್ವಜನಿಕ ಆಸ್ತಿಯನ್ನೂ ದ್ವಂಸ ಮಾಡಲಾಗಿತ್ತು. ಈ ಕೃತ್ಯಕ್ಕೆ ಸಿಎಎ ಹೋರಾಟಗಾರರೇ ಕಾರಣ ಎಂದು ಆರೋಪಿಸಿರುವ ಠಾಕೂರ್ಗಂಜ್ ಪೊಲೀಸರು 15 ಜನರನ್ನು ಆರೋಪಿಗಳು ಎಂದು ಎಫ್ಐಆರ್ ದಾಖಲಿದ್ದಾರೆ.
ಇದನ್ನೂ ಓದಿ: ಸಿಎಎ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿ: ಭಾರತಕ್ಕೆ ವಿಶ್ವಸಂಸ್ಥೆ ಆಗ್ರಹ

