ಬಂಗಾಳದಲ್ಲಿ ಶಿವಸೇನೆ ಸ್ಪರ್ಧೆ: ಮಮತಾಗೆ ಮತ್ತೊಂದು ಸವಾಲು; BJPಗೆ ಹಿಂದುತ್ವದ ಪ್ರತಿಸ್ಪರ್ಧಿ!
ಪಶ್ಚಿಮ ಬಂಗಾಳದಲ್ಲಿ ಇನ್ನು ಮೂರು ಅಥವಾ ನಾಲ್ಕು ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ನಡೆಯಲಿದೆ. ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ದತೆ ಮಾಡಿಕೊಳ್ಳುತ್ತಿವೆ. ಈ ಮಧ್ಯೆ, ಮಹಾರಾಷ್ಟ್ರದ ಆಡಳಿತಾರೂಢ ಪ್ರಾದೇಶಿಕ ಪಕ್ಷ ಶಿವಸೇನೆಯೂ ಬಂಗಾಳದಲ್ಲಿ ಸ್ಪರ್ಧಿಸವುದಾಗಿ ಘೊಷಿಸಿದ್ದು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಸವಾಲು ಎದುರಾಗಿದೆ.
ಬಂಗಾಳದಲ್ಲಿ ಸ್ಪರ್ಧೆಯ ಬಗ್ಗೆ ಟ್ವೀಟ್ ಮಾಡಿರುವ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, “ಬಹುನಿರೀಕ್ಷಿತ ಅಪ್‌ಡೇಟ್ ಇಲ್ಲಿದೆ. ಪಕ್ಷದ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಚರ್ಚಿಸಿದ ನಂತರ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುವುದಾಗಿ ನಿರ್ಧರಿಸಲಾಗಿದೆ. ನಾವು ಅತಿ ಶೀಘ್ರದಲ್ಲೇ ಕಲ್ಕತ್ತಾವನ್ನು ತಲುಪಲಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಹಲವು ಪ್ರಮುಖ ಪಕ್ಷಗಳು ಇದುವರೆಗೂ ಘೋಷಿಸಿವೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಮತ್ತು ಅಸದುದ್ದೀನ್ ಓವೈಸಿ ಅವರ ಪಕ್ಷವೂ ಸಹ ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ. ಇನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವೂ ಸಹ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿದೆ. ಮತ್ತೊಂದು ಕಡೆ ಬಿಜೆಪಿ, ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎಂದು ಹವಣಿಸುತ್ತಿದೆ. ಹಿಂದೂತ್ವವನ್ನು ಪ್ರತಿಪಾದಿಸವು ಬಿಜೆಪಿಗೆ ಅದೇ ಹಿಂದೂತ್ವವನ್ನೇ ಅಸ್ತ್ರವಾಗಿಟ್ಟುಕೊಂಡು ಶಿವಸೇನಾ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದೆ.
ಇದನ್ನೂ ಓದಿ: ಬಂಗಾಳ ಚುನಾವಣೆ: ಕಾಂಗ್ರೆಸ್-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!
ಈ ಎಲ್ಲಾ ಪಕ್ಷಗಳೂ ರಾಜ್ಯದ ಚುನಾವಣೆಯಲ್ಲಿ ಭಾಗವಹಿಸುವುದರಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಮತಗಳು ವಿಭಜನೆಯಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಾಲಿಗೆ ಈಗ ಶಿವಸೇನೆಯೂ ಸೇರಿಕೊಂಡಿರುವುದರಿಂದ ಮಮತಾಗೆ ಮತ್ತೊಂದು ಆಘಾತ ಎದುರಾಗಿದೆ.
So, here is the much awaited update.
After discussions with Party Chief Shri Uddhav Thackeray, Shivsena has decided to contest the West Bengal Assembly Elections.
We are reaching Kolkata soon…!!
Jai Hind, জয় বাংলা !
— Sanjay Raut (@rautsanjay61) January 17, 2021
ಕೊರೊನಾ ಸಾಂಕ್ರಾಮಿಕ ರೋಗದ ನಂತರ ದೇಶದಲ್ಲಿ ನಡೆಯುತ್ತಿರುವ ಎರಡನೇ ಅತಿದೊಡ್ಡ ಚುನಾವಣೆ ಇದಾಗಿದ್ದು, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್‌ಗೆ ನೇರಾನೇರಾ ತೀವ್ರ ಪೈಪೋಟಿ ಇರಲಿದೆ. ಅಲ್ಲದೆ, ಕಾಂಗ್ರೆಸ್ ಮತ್ತು ಸಿಎಂಪಿ ನೇತೃತ್ವದ ಎಡರಂಗವೂ ಅಖಾಡದಲ್ಲಿದೆ. ಹಾಗಾಗಿ ಪಶ್ಚಿಮ ಬಂಗಾಳ ಯಾರ ತೆಕ್ಕೆಗೆ ಹೋಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ಬಂಗಾಳದಲ್ಲಿ BJPಗೆ TMCಗರ ದಂಡು; ಪಕ್ಷಕ್ಕೆ ಆನಂದ – RSSಗೆ ಆತಂಕ!

