‘ಉದ್ದವ್‌ಗೆ ಕಪಾಳಮೋಕ್ಷ’ ಎಂದ ಕೇಂದ್ರ ಸಚಿವ ರಾಣೆ ಬಂಧನಕ್ಕೆ ಪೊಲೀಸರ ತಂಡ ರಚನೆ!

ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಮತ್ತು ವಿರೋಧ ಪಕ್ಷ ಬಿಜೆಪಿಯ ಕಾರ್ಯಕರ್ತರು ಮಂಗಳವಾರ ಮುಂಬೈನಲ್ಲಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಅವರ ನಿವಾಸದ ಬಳಿ ಪರಸ್ಪರ ಘರ್ಷಣೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಮುಖ್ಯಮಂತ್ರಿ ಉದ್ದವ್‌ ಠಾಕ್ರೆಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು. ಅವರಿಗೆ ಕಪಾಳಮೋಕ್ಷ ಮಾಡಬೇಕು” ಎಂದು ಸೋಮವಾರ ರಾಯಗಡ ಜಿಲ್ಲೆಯಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಸಚಿವ ನಾರಾಯಣ್ ರಾಣೆ ಹೇಳಿದ್ದರು. ರಾಣೆ ಅವರನ್ನು ಕೂಡಲೇ ಬಂಧಿಸುವಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಮಂಗಳವಾರ ಆದೇಶಿಸಿದ್ದಾರೆ.

ಅವರ ಈ ಹೇಳಿಕೆಯ ವಿರುದ್ದ ಶಿವಸೇನಾ ಯುವ ಘಟಕದ ಕಾರ್ಯಕರ್ತರು ರಾಣೆ ನಿವಾಸದ ಬಳಿಯಿರುವ ಸಾಂತಾಕ್ರೂಜ್ (ಪಶ್ಚಿಮ) ದ ಜುಹು ತಾರಾ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ರಾಣೆ ಅವರ ಬೆಂಬಲಕ್ಕಾಗಿ ರಾಣೆ ನಿವಾಸದ ಬಳಿ ಜಮಾಯಿಸಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಕಲ್ಲುಗಳನ್ನು ತೂರಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಶಿವಸೇನೆ ಮತ್ತು ಬಿಜೆಪಿ ಬೆಂಬಲಿಗರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲೂನ್‌ನಲ್ಲಿ ಘರ್ಷಣೆ ನಡೆಸಿದ್ದಾರೆ. ಅಲ್ಲದೆ, ನಾಸಿಕ್ ನಗರದ ಬಿಜೆಪಿ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ನಾಗ್ಪುರದಲ್ಲಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಾಸಿಕ್, ಪುಣೆ, ಔರಂಗಾಬಾದ್‌ನ ಪೊಲೀಸ್‌ ಠಾಣೆಗಳಲ್ಲಿ ರಾಣೆ ವಿರುದ್ದ ದೂರು ದಾಖಲಾಗಿದೆ. ನಾಸಿಕ್‌ನಲ್ಲಿ ಎಫ್‌ಐಆರ್‌ ದಾಖಲಾದ ಬಳಿಕ ರಾಣೆ ಅವರನ್ನು ಬಂಧಿಸುವಂತೆ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಆದೇಶಿಸಿದ್ದಾರೆ.

ಅವರ ಆದೇಶದ ನಂತರ, ನಗರ ಪೊಲೀಸರ ತಂಡವು ಕೊಂಕಣ ಪ್ರದೇಶದ ಚಿಪ್ಲುನ್‌ಗೆ ತೆರಳಿದೆ. ರಾಣೆ ಅಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಿಜೆಪಿ-ಶಿವಸೇನಾ ಶತ್ರುಗಳಲ್ಲ, ಅಮೀರ್ ಮತ್ತು ಕಿರಣ್‌ರಂತೆ ಸದಾಕಾಲದ ಸ್ನೇಹಿತರು: ಸಂಜಯ್ ರಾವತ್

ದೂರಿನ ಆಧಾರದ ಮೇಲೆ, ನಾಸಿಕ್‌ನಲ್ಲಿ ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನ), 153-ಬಿ (1) (ಸಿ) (ಅಸಾಮರಸ್ಯ ಅಥವಾ ದ್ವೇಷದ ಭಾವನೆಯನ್ನು ಉಂಟುಮಾಡುವ ಸಾಧ್ಯತೆಗಳು) ಅಡಿಯಲ್ಲಿ ರಾಣೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನಾಸಿಕ್ ಡಿಸಿಪಿ (ಅಪರಾಧ) ಸಂಜಯ್ ಬಾರ್ಕುಂಡ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ವಾಘ್ ನೇತೃತ್ವದಲ್ಲಿ ಇತರ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ತಂಡವು ರಾಣೆ ಅವರನ್ನು ಬಂಧಿಸಲು ರತ್ನಗಿರಿಯ ಚಿಪ್ಲುನ್‌ಗೆ ಧಾವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಕರಣದಲ್ಲಿ ಕೇಂದ್ರ ಸಚಿವರನ್ನು ಬಂಧಿಸಲಾಗುವುದು ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ನ್ಯಾಯಾಲಯದ ಆದೇಶಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರಾಣೆ ಅವರು ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾಗಿರುವುದರಿಂದ ಬಂಧನದ ನಂತರ, ಉಪರಾಷ್ಟ್ರಪತಿ (ವೆಂಕಯ್ಯ ನಾಯ್ಡು) ಅವರಿಗೆ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

“ರಾಣೆಯನ್ನು ಬಂಧಿಸುವಾಗ, ಕೇಂದ್ರ ಮಂತ್ರಿಗಳಿಗೆ ಸಂಬಂಧಿಸಿದ ಎಲ್ಲಾ ಪ್ರೋಟೋಕಾಲ್‌ಗಳನ್ನು ಪೊಲೀಸರು ಅನುಸರಿಸುತ್ತಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ‘ಅದಾನಿ ಕಂಪನಿ’ಯ ಬೋರ್ಡ್‌ಗಳನ್ನು ದ್ವಂಸಗೊಳಿಸಿದ ಶಿವಸೇನಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights