ರಾಜ್ಯದಲ್ಲಿ 746 ರೈತರು ಆತ್ಮಹತ್ಯೆ; ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

ವಿವಿಧ ರೀತಿಯ ಕಾರಣಗಳು ಹಾಗೂ ಸರ್ಕಾರಗಳು ಧೋರಣೆಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಕೊರೊನಾ, ಲಾಕ್‌ಡೌನ್‌ ಸಂದರ್ಭದಲ್ಲಿಯೂ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 746 ರೈತ ಆತ್ಮಹತ್ಯೆಗಳು ವರದಿಯಾಗಿವೆ ಎಂದು ಸರ್ಕಾರದ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಏಪ್ರಿಲ್ 2020 ಹಾಗೂ ಸೆಪ್ಟೆಂಬರ್ 2021ರ ನಡುವೆ 746 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019-20ರ ವರ್ಷದಲ್ಲಿ 1076 ರೈತ ಆತ್ಮಹತ್ಯಾ ಪ್ರಕರಣಗಳು ವರದಿಯಾಗಿದ್ದವು.

ವರದಿಯಾಗಿರುವ ಪ್ರಕರಣಗಳಲ್ಲಿ ಉತ್ತರ ಕರ್ನಾಟಕ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೈತ ಆತ್ಮಹತ್ಯೆ ಪ್ರಕಟಣಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

”ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಅಂತರ್ಜಲದ ಮಟ್ಟ ಗಣನೀಯವಾಗಿ ಏರಿಕೆ ಕಂಡಿದೆ. ಉತ್ತಮ ಮಳೆಯು ರೈತರಲ್ಲಿ ಸಂಕಷ್ಟವನ್ನು ಕಡಿಮೆ ಮಾಡಿದೆ. ಇದು, ಕೆಳದ ವರ್ಷಕ್ಕಿಂತ ಈ ವರ್ಷ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಲು ಒಂದು ಕಾರಣವಾಗಿದೆ” ಎಂದು ರಾಜ್ಯ ನೈಸರ್ಗಿಕ ವಿಪತ್ತು ಮತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ಮಾತ್ರವಲ್ಲದೆ, ರೈತರು ಸಾಮಾಜಿಕ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಇತರೆ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ. ಇದೆಲ್ಲರ ನಡುವೆಯೂ, ಉತ್ತಮ ಮಳೆಯಿಂದಾಗಿ ರಾಜ್ಯವು 150 ಲಕ್ಷ ಟನ್‌ಗಳಿಗಿಂತ ಹೆಚ್ಚು ಆಹಾರ ಧಾನ್ಯಗಳನ್ನು ಉತ್ಪಾದಿಸಿದೆ ಎಂದು ಅವರು ಹೇಳಿದ್ದಾರೆ.

ನಾವು ಕಳೆದ ಎರಡು ವರ್ಷಗಳಲ್ಲಿ 10 ಲಕ್ಷ ಟನ್‌ಗಳಷ್ಟು ಕಡಿಮೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದೇವೆ. ಅಂತಹ ಬೀಜಗಳನ್ನು ಮಾರಾಟ ಮಾಡುವವವರು ಮತ್ತು ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೀಜಗಳ ಗುಣಮಟ್ಟ ಕಳಪೆಯಾಗಿದ್ದರೆ ಇಳುವರಿ ಕಡಿಮೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ:

2020ರಲ್ಲಿ ದೇಶದಲ್ಲಿ ಒಟ್ಟು 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಗಳ ಪೈಕಿ ಕರ್ನಾಟಕವು 2ನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ- ಅಂಶಗಳಿಂದ ತಿಳಿದುಬಂದಿದೆ. 2020ರಲ್ಲಿ 1076 ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

2019ರಲ್ಲಿ ಕರ್ನಾಟಕದಲ್ಲಿ 1,992 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2018ರಲ್ಲಿ 2,405 ರೈತರು ಸಾವಿಗೆ ಶರಣಾಗಿದ್ದರು. 2017ರಲ್ಲಿ ಕರ್ನಾಟಕದಲ್ಲಿ 2079 ಮಂದಿ, 2016ರಲ್ಲಿ 2,160 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 2020ರಲ್ಲಿ 3,927 ರೈತರು ಸಾವಿಗೆ ಶರಣಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶವಿದ್ದು, 1,029 ರೈತರು ಪ್ರಾಣ ಕಳೆದುಕೊಂಡಿದ್ದಾರೆ.

2018ರಲ್ಲಿ ಸಂಭವಿಸಿದ 10,349 ರೈತರ ಆತ್ಮಹತ್ಯೆಗೆ ಹೋಲಿಸಿದರೆ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕೊಂಚ ಇಳಿಕೆ ಕಂಡಿದೆ. 2017ರಲ್ಲಿ 10,665, 2016ರಲ್ಲಿ 11,379 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಜೈಲಿಗೆ ಕಳಿಸುತ್ತೇನೆಂದು ಹೇಳಿಲ್ಲ: ಸುಧಾಕರ್ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights